ಪುನೀತ್ ಅಭಿನಯದ 'ಜೇಮ್ಸ್' ಸಿನೆಮಾ ಬಿಡುಗಡೆ: ಮುಗಿಲುಮುಟ್ಟಿದ ಅಭಿಮಾನಿಗಳ ಹರ್ಷೋದ್ಗಾರ

Update: 2022-03-17 05:28 GMT

ಬೆಂಗಳೂರು, ಮಾ.17: ಪವರ್ ಸ್ಟಾರ್ ಪುನೀತ್‍ ರಾಜ್ ಕುಮಾರ್ ಅಭಿನಯದ ಕೊನೆ ಸಿನೆಮಾ ‘ಜೇಮ್ಸ್’ ಅವರು ಜನ್ಮ ದಿನವಾದ ಇಂದು(ಮಾ.17)  ಇಂದು ವಿಶ್ವಾದ್ಯಂತ 4,000 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಕರ್ನಾಟಕದಲ್ಲಿ 500ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಜೇಮ್ಸ್ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, , ಚಿತ್ರಮಂದಿರಗಳಲ್ಲಿ ಅಪ್ಪು ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿದೆ.
 ಈ ನಡುವೆ ಹಲವರು ಅಭಿಮಾನಿಗಳು ಪುನೀತ್ ನೆನೆದು ಭಾವುಕರಾಗಿದ್ದಾರೆ. ರಾಜ್ಯದ ಹಲವು ಚಿತ್ರಮಂದಿರಗಳ ಬಳಿ ಅನ್ನದಾನ, ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ತುಮಕೂರು, ಬಳ್ಳಾರಿ, ಕೊಪ್ಪಳದಲ್ಲಿ ಪುನೀತ್‍ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಚಾಮರಾಜನಗರ, ಮೈಸೂರು, ದಾವಣಗೆರೆ, ಕೋಲಾರ, ಕಲಬುರಗಿ, ಬಾಗಲಕೋಟೆ, ಚಿತ್ರದುರ್ಗ, ಚಿಕ್ಕಬಳ್ಳಾಪುರದಲ್ಲಿ ಜೇಮ್ಸ್‌ಗೆ ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ.

ಪುನೀತ್ ರಾಜ್​ಕುಮಾರ್ 47ನೇ ಹುಟ್ಟುಹಬ್ಬವನ್ನು ಅವರ ಸಹೋದರ, ನಟ ರಾಘವೇಂದ್ರ ರಾಜ್​ಕುಮಾರ್ ಕಂಠೀರವ ಸ್ಟುಡಿಯೋ ಬಳಿ, ಅಭಿಮಾನಿಗಳೊಂದಿಗೆ ಕೇಕ್ ಕಟ್​ ಮಾಡುವ ಮೂಲಕ ಆಚರಿಸಿದರು.  ರಾಘವೇಂದ್ರ ರಾಜ್ ಕುಮಾರ್ ಅಭಿಮಾನಿಗಳ ಜೊತೆ ಕುಟುಂಬ ಸಮೇತರಾಗಿ ಆಗಮಿಸಿ ಸಿನಿಮಾ ವೀಕ್ಷಿಸಿದರು. ಸಹೋದರ ಪುನೀತ್ ನಾಯಕನಾಗಿ ಕಾಣಿಸಿಕೊಂಡಿರುವ ಕೊನೆಯ ಸಿನಿಮಾ ‘ಜೇಮ್ಸ್’ಅನ್ನು ಶಿವರಾಜ್​ಕುಮಾರ್ ಇಂದು ಸಂಜೆ ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ ಸ್ನೇಹಿತರ ಜತೆ ವೀಕ್ಷಿಸಲಿದ್ದಾರೆ.

ರಾಜ್ಯ ಯುವ ​ ಕಾಂಗ್ರೆಸ್​​ ಸದಸ್ಯರು ರಾಜ್ಯ ಅಧ್ಯಕ್ಷ ಮುಹಮ್ಮದ್ ನಲಪಾಡ್ ಜೇಮ್ಸ್​ ನೇತೃತ್ವದಲ್ಲಿ ಸಿನಿಮಾ ವೀಕ್ಷಿಸಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಜೇಮ್ಸ್ ಅಬ್ಬರ

ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಚಾಮರಾಜನಗರ ಜಿಲ್ಲಾದ್ಯಂತ ತೆರೆ ಕಂಡಿದೆ.

ಚಾಮರಾಜನಗರದ ಶ್ರೀ ಗುರು ರಾಘವೇಂದ್ರ ಚಿತ್ರ ಮಂದಿರ, ಶ್ರೀ ಭ್ರಮರಾಂಬ ಚಿತ್ರಮಂದಿರ ಹಾಗೂ ಸಿಂಹ ಮೂವಿ ಪ್ಯಾರಡೇಸ್ ನಲ್ಲಿ ಜೇಮ್ಸ್ ಚಿತ್ರ ಪ್ರದರ್ಶನವಾಗುತ್ತಿದೆ. ಅದೇರೀತಿ ಜಿಲ್ಲೆಯ ಕೊಳ್ಳೇಗಾಲದ ಕೃಷ್ಣ ಚಿತ್ರ ಮಂದಿರ ಮತ್ತು ಶಾಂತಿ ಟಾಕೀಸ್ ನಲ್ಲಿ ಜೇಮ್ಸ್ ಚಿತ್ರವನ್ನು ಪ್ರದರ್ಶನಕಂಡಿದೆ. ಯಳಂದೂರಿನ ಶ್ರೀ ಮಹದೇಶ್ವರ ಚಿತ್ರಮಂದಿರ, ಗುಂಡ್ಲುಪೇಟೆಯ ಸೂರ್ಯ ಚಿತ್ರಮಂದಿರದಲ್ಲಿ ಜೇಮ್ಸ್ ಅಬ್ಬರ ಆರಂಭವಾಗಿದ್ದು, ಚಿತ್ರದ ವೀಕ್ಷಣೆಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಎಲ್ಲಾ ಚಿತ್ರ ಮಂದಿರಗಳಲ್ಲಿ ಪ್ರಥಮ ಪ್ರದರ್ಶನ ವೀಕ್ಷಣೆಗೆ ಟಿಕೆಟ್ ಪಡೆದ ಅಭಿಮಾನಿಗಳು ಚಿತ್ರ ವೀಕ್ಷಣೆಗೆಗಳು ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಪ್ರಸಂಗ ನಡೆಯಿತು. ಈ ವೇಳೆ ಸಿನಿ ಪ್ರಿಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಬೆಂಗಳೂರಿನ ಮಲ್ಲೇಶ್ವರದ ಸುಬ್ರಹ್ಮಣ್ಯ ನಗರದಲ್ಲಿರುವ ಕೆಂಪೇಗೌಡ ಆಟದ ಮೈದಾನ ಮತ್ತು ಸಂಗೊಳ್ಳಿ ರಾಯಣ್ಣ ಉದ್ಯಾನಗಳಲ್ಲಿ ಸ್ಥಳೀಯ ಬಿಜೆಪಿ ಮಂಡಲದ ವತಿಯಿಂದ ನಟ ಡಾ.ಪುನೀತ್ ರಾಜಕುಮಾರ್ ಅವರ 47ನೇ ಹುಟ್ಟುಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಬಿಜೆಪಿ ಮುಖಂಡ ಮತ್ತು ಚಿತ್ರ ನಿರ್ಮಾಪಕ ಕೆ.ಸುರೇಶ್ ಗೌಡ ಕಾರ್ಯಕ್ರಮ ಆಯೋಜಿಸಿದ್ದರು.

ಪುನೀತ್​ ಸ್ಮರಿಸಿದ ಸಿಎಂ ಬೊಮ್ಮಾಯಿ

ಪುನೀತ್ ಜನ್ಮದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ನಮನ ಸಲ್ಲಿಸಿದ್ದಾರೆ. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಬೆಳೆದ, ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದ ಕರ್ನಾಟಕ ರತ್ನ, ಡಾ.ಪುನೀತ್ ರಾಜ್‌ಕುಮಾರ್‌ಗೆ ಪ್ರೀತಿಪೂರ್ವಕ ನಮನ ಎಂದು ಅವರು ಬರೆದಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ಪುನೀತ್ ಮಾಡಿರುವ ಸಾಧನೆ, ಪುನೀತ್ ಜನಪ್ರಿಯತೆ, ಜನಸೇವೆ ಬಣ್ಣಿಸಲು ಪದಗಳೇ ಸಾಲದು ಎಂದು ಬೊಮ್ಮಾಯಿ ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News