ಪೆಗಾಸಸ್ ಸ್ಪೈವೇರ್ ಖರೀದಿ ಪ್ರಸ್ತಾವ ನಿರಾಕರಿಸಿದ್ದೆ: ಮಮತಾ ಬ್ಯಾನರ್ಜಿ

Update: 2022-03-17 18:07 GMT

ಕೋಲ್ಕತಾ: ಕೆಲವು ವರ್ಷಗಳ ಹಿಂದೆ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಖರೀದಿಸುವ ಪ್ರಸ್ತಾವವನ್ನು ತನ್ನ ಸರಕಾರ ತಿರಸ್ಕರಿಸಿತ್ತು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಹೇಳಿದ್ದಾರೆ. 

ಸ್ಪೈವೇರ್ ಬಳಸಿ ರಾಜಕೀಯ ಪ್ರತಿಸ್ಪರ್ಧಿಗಳ ಬೇಹುಗಾರಿಕೆ ನಡೆಸುವುದು ಸ್ವೀಕಾರಾರ್ಹವಲ್ಲ ಎಂದು ಮಮತಾ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು. 

ಅವರು ಯಂತ್ರವನ್ನು ಮಾರಾಟ ಮಾಡಲು ನಮ್ಮ ಪೊಲೀಸ್ ಠಾಣೆಗೆ ಬಂದಿದ್ದರು. ಐದು ವರ್ಷಗಳ ಹಿಂದೆ ಅವರು ಯಂತ್ರಕ್ಕೆ 25 ಕೋಟಿ ರೂಪಾಯಿ ಬೇಡಿಕೆ ಇರಿಸಿದ್ದರು. ಬೇಡ, ಅಂತಹ ಯಂತ್ರವನ್ನು ಖರೀದಿಸಲು ಬಯಸುವುದಿಲ್ಲ ಎಂದು ನಾನು ಹೇಳಿದ್ದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

‘‘ಸ್ಪೈವೇರ್ ಅನ್ನು ರಾಜಕೀಯ ಕಾರಣಗಳಿಗೆ ಬಳಸಲಾಗುತ್ತಿತ್ತು. ಅಧಿಕಾರಿಗಳು ಹಾಗೂ ನ್ಯಾಯಾಧೀಶರ ವಿರುದ್ಧ ಬಳಸಲಾಗುತ್ತಿತ್ತು. ಇದು ಸ್ವೀಕಾರಾರ್ಹವಲ್ಲ’’ ಎಂದು ಅವರು ಹೇಳಿದ್ದಾರೆ. 

‘‘ನನ್ನ ಫೋನ್ ಅನ್ನು ಟ್ಯಾಪ್ ಮಾಡಲಾಗುತ್ತಿದೆ. ನಾವು ಯಾವುದೇ ವಿಷಯದ ಕುರಿತು ಮಾತನಾಡಿದರೆ, ಅವರು ತಿಳಿಯುತ್ತಾರೆ. ಐದು ವರ್ಷಗಳ ಹಿಂದೆ ನನ್ನ ಮುಂದೆ ಪೆಗಾಸಸ್ ಖರೀದಿಸುವ ಪ್ರಸ್ತಾವ ಬಂದಿತ್ತು. ಆದರೆ, ನಾನು ಅದನ್ನು ಖರೀದಿಸಲಿಲ್ಲ. ಖಾಸಗಿತನದಲ್ಲಿ ಮಧ್ಯಪ್ರವೇಶ ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ನಿಗ್ರಹಿಸುವ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ, ಬಿಜೆಪಿ ಆಡಳಿತ ಇರುವ ಹಲವು ರಾಜ್ಯಗಳು ಪೆಗಾಸಸ್ ಅನ್ನು ಖರೀದಿಸಿವೆ’’ ಎಂದು ಬುಧವಾರ ಮಮತಾ ಬ್ಯಾನರ್ಜಿ ಹೇಳಿದ್ದರು. 

2016ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಮತಾ ಬ್ಯಾನರ್ಜಿ ಅವರು ಸ್ಪೈವೇರ್ ಅನ್ನು ಬಳಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಅನಿರ್ಬನ್ ಗಂಗೂಲಿ ಆರೋಪಿಸಿದ ಕೆಲವು ದಿನಗಳ ಬಳಿಕ ಮಮತಾ ಬ್ಯಾನರ್ಜಿ ಪೆಗಾಸಸ್ ಕುರಿತು ಈ ಪ್ರತಿಪಾದನೆ ಮಾಡಿದ್ದಾರೆ. ಪತ್ರಕರ್ತರು, ಪ್ರತಿಪಕ್ಷದ ನಾಯಕರು, ನ್ಯಾಯಾಧೀಶರು ಹಾಗೂ ಇತರ ಗಣ್ಯ ವ್ಯಕ್ತಿಗಳನ್ನು ಸ್ಪೈವೇರ್ ಬಳಸಿ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪದ ಕುರಿತಂತೆ 12 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಆದರೆ, ಬೇಹುಗಾರಿಕೆಗಾಗಿ ಪೆಗಾಸಸ್ ಸಾಫ್ಟ್ವೇರ್ ಅನ್ನು ಖರೀದಿಸಲಾಗಿದೆ ಎಂಬ ಆರೋಪವನ್ನು ಕೇಂದ್ರ ಸರಕಾರ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News