ಯುದ್ಧಪೀಡಿತ ಉಕ್ರೇನ್ ನಲ್ಲಿ ಇನ್ನೂ 50 ಭಾರತೀಯರಿದ್ದಾರೆ: ವಿದೇಶಾಂಗ ಸಚಿವಾಲಯ ಮಾಹಿತಿ
ಹೊಸದಿಲ್ಲಿ: ಯುದ್ಧಪೀಡಿತ ಉಕ್ರೇನ್ ನಿಂದ ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಮೂಲಕ 20,000 ಕ್ಕೂ ಅಧಿಕ ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲಾಗಿದೆ. ಆದರೆ ಅಲ್ಲಿ ಇನ್ನೂ 50 ಮಂದಿ ಭಾರತೀಯರು ಇದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಉಕ್ರೇನ್‌ನಲ್ಲಿ ಇನ್ನೂ 50 ಮಂದಿ ಭಾರತೀಯರು ಇದ್ದು, ಈ ಪೈಕಿ 15ರಿಂದ 20 ಮಂದಿ ಭಾರತಕ್ಕೆ ಮರಳಲು ಬಯಸಿದ್ದಾರೆ. ಅವರಿಗೆ ಎಲ್ಲ ರೀತಿಯ ನೆರವು ನೀಡಿ ಕರೆತರಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "‘ಆಪರೇಷನ್ ಗಂಗಾ’ ಕಾರ್ಯಾಚರಣೆ ಇನ್ನೂ ಚಾಲ್ತಿಯಲ್ಲಿದೆ. ಸ್ವದೇಶಕ್ಕೆ ಮರಳಲು ಇಚ್ಛಿಸುವವರನ್ನು ಕರೆತರಲು ನಾವೇನು ಮಾಡಬಹುದೋ ಅದನ್ನು ಮಾಡಲಿದ್ದೇವೆ" ಎಂದು ಅವರು ಹೇಳಿದ್ದಾರೆ.
ಕಳೆದ ಮೂರು ದಿನಗಳ ಹಿಂದಿನ ಲೆಕ್ಕಾಚಾರದ ಪ್ರಕಾರ ಉಕ್ರೇನ್‌ನಲ್ಲಿ ಇನ್ನೂ 50 ಮಂದಿ ಭಾರತೀಯರಿದ್ದು, 15ರಿಂದ 20 ಮಂದಿ ಸ್ವದೇಶಕ್ಕೆ ವಾಪಸಾಗಲು ಬಯಸುತ್ತಿದ್ದಾರೆ ಆದರೆ ಉಳಿದವರು ಸದ್ಯದ ಪರಿಸ್ಥಿತಿಯಲ್ಲಿ ಹಿಂತಿರುಗುವ ಯೋಚನೆ ಮಾಡುತ್ತಿಲ್ಲ. ಅಲ್ಲಿರುವ ಎಲ್ಲ ಭಾರತೀಯರ ಜತೆ ಸಂಪರ್ಕದಲ್ಲಿದ್ದೇವೆ’ ಎಂದು ಅವರು ಹೇಳಿದ್ದಾರೆ.