ಫಲಿತಾಂಶ ಬಂದು 8 ದಿನ ಕಳೆದರೂ ರಚನೆಯಾಗದ ಗೋವಾ ಸರ್ಕಾರ; ಕಾಂಗ್ರೆಸ್ ಟೀಕೆ

Update: 2022-03-19 01:45 GMT

ಪಣಜಿ: ಗೋವಾ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಬಂದು ಎಂಟು ದಿನ ಕಳೆದರೂ ಹೊಸ ಸರ್ಕಾರ ರಚನೆಯಾಗದಿರುವುದು, ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ. ಸರ್ಕಾರ ರಚನೆಗೆ ಇನ್ನಷ್ಟು ವಿಳಂಬವಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

"ಪಕ್ಷೇತರರು ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವುದಾಗಿ ಫಲಿತಾಂಶ ಪ್ರಕಟವಾದ ದಿನ ಬಿಜೆಪಿ ನಾಯಕರು ಹೇಳಿದ್ದರು. ಅದಾಗಿ ವಾರ ಕಳೆದರೂ, ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಬಿಜೆಪಿ ವಿಫಲವಾಗಿದೆ. ಬಿಜೆಪಿ ಮುಖಂಡರು ಸಮಯ ವ್ಯಯಿಸುತ್ತಿದ್ದು, ಒಂದಲ್ಲ ಒಂದು ನೆಪಗಳನ್ನು ಹೇಳಿ, ಸರ್ಕಾರ ರಚನೆ ಬಗ್ಗೆ ಸ್ಪಷ್ಟ ಚಿತ್ರಣ ನೀಡಲು ವಿಫಲವಾಗಿದೆ" ಎಂದು 11 ಮಂದಿ ಕಾಂಗ್ರೆಸ್ ಸದಸ್ಯರ ಜತೆ ಪತ್ರಿಕಾಗೋಷ್ಠಿ ನಡೆಸಿದ ದಿಗಂಬರ ಕಾಮತ್ ಹೇಳಿದರು.

"ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಇದು ಬಹಿರಂಗಪಡಿಸಿದೆ. ಈ ಮೂಲಕ ಗೋವಾ ಜನತೆಗೆ ಬಿಜೆಪಿ ವಂಚಿಸಿದೆ. ಬಿಜೆಪಿಯ ವಿಳಂಬ ನೀತಿಯನ್ನು ನಾವು ಖಂಡಿಸುತ್ತೇವೆ. ಬಿಜೆಪಿಯ ಈ ಕ್ರಮ ಗೋವಾ ಜನತೆಗೆ ಮಾಡಿದ ಅನ್ಯಾಯ" ಎಂದು ಅವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಕಾನೂನು ಘಟಕದ ಮುಖ್ಯಸ್ಥ ಮತ್ತು ಶಾಸಕ ಕಾರ್ಲೋಸ್ ಅಲ್ವೆರಾಸ್ ಫೆರೇರಾ ಮಾತನಾಡಿ, ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು. ಹಂಗಾಮಿ ಮುಖ್ಯಮಂತ್ರಿ ವಾರಗಳ ಕಾಲ ಮುಂದುವರಿಯುವಂತಿಲ್ಲ. ಸದನದಲ್ಲಿ ತಮ್ಮ ಬಹುಮತ ಸಾಬೀತುಪಡಿಸಬೇಕಾಗುತ್ತದೆ. ಬಿಜೆಪಿಗೆ ಸದ್ಯಕ್ಕೆ ಬಹುಮತ ಇಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News