×
Ad

ಪಂಜಾಬ್‌: ಆಮ್ ಆದ್ಮಿ ಪಕ್ಷದ 10 ಶಾಸಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

Update: 2022-03-19 11:54 IST
Photo: Twitter/@ANI

ಚಂಡೀಗಢ,ಮಾ.19: ಪಂಜಾಬ್‌ನಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರಕ್ಕೇರಿರುವ ಆಮ್ ಆದ್ಮಿ ಪಕ್ಷ ಸರಕಾರದ ಸಂಪುಟದ 10 ಮಂದಿ ಸಚಿವರು ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಚಂಡೀಗಢದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರು ನೂತನ ಸಚಿವರುಗಳಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

      ದಿರ್ಬಾ ವಿಧಾನಸಭಾಕ್ಷೇತ್ರದಿಂದ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹರ್‌ಪಾಲ್ ಸಿಂಗ್ ಚೀಮಾ, ಮಲೌಟ್‌ನ ಶಾಸಕಿ ಮತ್ತು ಮಾಜಿ ಆಪ್ ಸಂಸದ ಸಾಧು ಸಿಂಗ್ ಅವರ ಪುತ್ರಿ ಬಲಜೀತ್‌ಕೌರ್, ಜಂದಿಯಾಲಾದ ಶಾಸಕ ಹರ್‌ಭಜನ್ ಸಿಂಗ್, ಮಾನ್ಸಾದ ಶಾಸಕ ವಿಜಯ್ ಶಿಂಗ್ಲಾ, ಭೋವಾದ ಶಾಸಕ ಲಾಲ್‌ಚಂದ್ ಕತಾರ್‌ಚಾಕ್, ಎಎಪಿ ಯುವ ಘಟಕದ ಅಧ್ಯಕ್ಷ ಹಾಗೂ ಬರ್ನಾಲಾದಿಂದ ಎರಡನೆ ಬಾರಿಗೆ ಆಯ್ಕೆಯಾಗಿರುವ ಶಾಸಕ ಗುರುಮಿತ್ ಸಿಂಗ್ ಮಿತ್‌ಹಯರ್, ಅಜನಾಲಾದ ಶಾಸಕ ಗುಲದೀಪ್ ಸಿಂಗ್ ಧಲಿವಾಲ್, ಪಾಟ್ಟಿ ಕ್ಷೇತ್ರದ ಶಾಸಕ ಲಾಲ್‌ಜಿತ್‌ಸಿಂಗ್ ಭುಲ್ಲರ್. ಹೊಶಿಯಾರ್ ಪುರದ ಶಾಕ ಬ್ರಹ್ಮಶಂಕರ್ ಜಿಂಪಾ ಹಾಗೂ ಆನಂದಪುರ ಸಾಹಿಬ್‌ನ ಶಾಸಕ ಹರಜಿತ್‌ಸಿಂಗ್ ಭೈನ್ಸ್ ಇಂದು ಪ್ರಮಾಣವಚನ ಸ್ವೀಕರಿಸಿದ ಸಚಿವರು.

    ಪ್ರಮಾಣವಚನ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಭಗವಂತಸಿಂಗ್ ಮಾನ್ ಅವರು ನೂತನ ಸಂಪುಟದ ಚೊಚ್ಚಲ ಸಭೆ ನಡೆಸಿದರು. ಖಾಲಿ ಬಿದ್ದಿರುವ 25 ಸಾವಿರಕ್ಕೂ ಅಧಿಕ ಸರಕಾರಿ ಹುದ್ದೆಗಳಿಗೆ ನೇಮಕಾತಿಯನ್ನು ನಡೆಸುವ ಮಹತ್ವದ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯಿತು. ಈ ಪೈಕಿ 10 ಸಾವಿರ ಹುದ್ದೆಗಳು ಪೊಲೀಸ್ ಇಲಾಖೆಯದ್ದಾಗಿದ್ದು, ಉಳಿದ 15 ಸಾವಿರ ಹುದ್ದೆಗಳು ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ಸೇರಿದ್ದಾಗಿವೆ.

 ಈ ಮಧ್ಯೆ ಪಂಜಾಬ್ ವಿಧಾನಸಭೆಯ ಹಂಗಾಮಿ ಸ್ಪೀಕರ್ ಇಂದರ್‌ಬೀರ್ ಸಿಂಗ್ ನಿಜ್ಜಾರ್ ಅವರು ಶಾಸಕರಿಗೆ ಪ್ರಮಾಣವಚನ ಬೋಧಿಸಿದರು.

  ಪಂಜಾಬ್ ಸಂಪುಟದಲ್ಲಿ ಮುಖ್ಯಮಂತ್ರಿ ಭಗವಂತಸಿಂಗ್ ಸೇರಿದಂತೆ 18 ಸಚಿವ ಸ್ಥಾನಗಳಿಗೆ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News