ನಾವು ಬಿಜೆಪಿಯ ಬಿ ಟೀಮ್ ಅಲ್ಲ, ಎನ್‌ಸಿಪಿ, ಕಾಂಗ್ರೆಸ್ ಜೊತೆ ಮೈತ್ರಿಗೆ ಸಿದ್ಧ: ಎಐಎಂಐಎಂ ಸಂಸದ ಇಮ್ತಿಯಾಝ್ ಜಲೀಲ್
ಔರಂಗಾಬಾದ್: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರಕಾರದ ಅಂಗವಾಗಿರುವ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಐಎಂಐಎಂ ಸಿದ್ಧವಾಗಿದೆ. ಪ್ರಮುಖ ಪಕ್ಷಗಳು ಆರೋಪಿಸುವಂತೆ ಅಸದುದ್ದೀನ್ ಉವೈಸಿ ನೇತೃತ್ವದ ಪಕ್ಷವು ಬಿಜೆಪಿಯ 'ಬಿ' ತಂಡವಲ್ಲ ಎಂದು ಪಕ್ಷದ ಔರಂಗಾಬಾದ್ ಸಂಸದ ಇಮ್ತಿಯಾಝ್ ಜಲೀಲ್ ಹೇಳಿದ್ದಾರೆ,
ಶುಕ್ರವಾರ ರಾಜ್ಯ ಸಚಿವ ಹಾಗೂ ಎನ್‌ಸಿಪಿ ನಾಯಕ ರಾಜೇಶ್ ಟೋಪೆ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿದಾಗ ಎಐಎಂಐಎಂ ಬಯಕೆಯನ್ನು ಅವರಿಗೆ ತಿಳಿಸಿದ್ದೇನೆ ಎಂದು ಜಲೀಲ್ ಹೇಳಿದರು.
"ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಾಯಿಯನ್ನು ಕಳೆದುಕೊಂಡ ಕೆಲ ದಿನಗಳ ನಂತರ ಶುಕ್ರವಾರ ಟೋಪೆ ನನ್ನನ್ನು ಭೇಟಿ ಮಾಡಿದರು. ನಮ್ಮ ಪಕ್ಷದಿಂದ ಮುಸ್ಲಿಂ ಮತಗಳ ವಿಭಜನೆಯಿಂದಾಗಿ ಭಾರತೀಯ ಜನತಾ ಪಕ್ಷವು ಗೆಲ್ಲುತ್ತದೆ ಎಂದು ಯಾವಾಗಲೂ ಆರೋಪಿಸಲಾಗುತ್ತದೆ. ಈ ಆರೋಪವನ್ನು ತಪ್ಪೆಂದು ಸಾಬೀತುಪಡಿಸಲು ನಾವು ಮೈತ್ರಿಗೆ ಸಿದ್ಧರಿದ್ದೇವೆ ಎಂದು ಪ್ರಸ್ತಾವಿಸಿದ್ದೇನೆ. ಆದರೆ ಅವರು ನನ್ನ ಪ್ರಸ್ತಾಪದ ಬಗ್ಗೆ ಏನನ್ನೂ ಹೇಳಲಿಲ್ಲ’’ ಎಂದು ಎಐಎಂಐಎಂನ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಜಲೀಲ್ ಶುಕ್ರವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು.
"ವಾಸ್ತವವೆಂದರೆ ಈ ಪಕ್ಷಗಳಿಗೆ ಮುಸ್ಲಿಮರ ಮತಗಳು ಬೇಕು. ಎನ್‌ಸಿಪಿ ಮಾತ್ರವಲ್ಲ ಕಾಂಗ್ರೆಸ್ ನಾಯಕರು ಕೂಡ ತಾವು ಜಾತ್ಯತೀತರು ಹಾಗೂ ತಮಗೆ ಮುಸ್ಲಿಮರ ಮತಗಳು ಬೇಕು ಎಂದು ಹೇಳುತ್ತಾರೆ. ನಾವು ಕೂಡ ಅವರೊಂದಿಗೆ ಕೈಜೋಡಿಸಲು ಸಿದ್ಧರಿದ್ದೇವೆ. ಬಿಜೆಪಿ ಈ ದೇಶಕ್ಕೆ ಭಾರೀ ಹಾನಿ ಮಾಡಿದೆ. ಬಿಜೆಪಿ ಸೋಲಿಸಲು ನಾವು ಏನೂ ಮಾಡಲು ಸಿದ್ಧರಿದ್ದೇವೆ’’ ಎಂದು ಎಐಎಂಐಎಂ ನಾಯಕ ಹೇಳಿದರು.
"ಮಹಾರಾಷ್ಟ್ರದಲ್ಲಿಯೂ ಈ ಪಕ್ಷಗಳು (ಕಾಂಗ್ರೆಸ್ ಮತ್ತು ಎನ್‌ಸಿಪಿ) ಮುಸ್ಲಿಮರ ಮತಗಳನ್ನು ಬಯಸುತ್ತವೆ. ಆದರೆ ಎಐಎಂಐಎಂ ಜೊತೆ ಕೈಜೋಡಿಸಲು ಬಯಸುತ್ತಿಲ್ಲ. ನೀವು ಬಿಜೆಪಿಯ ಗೆಲುವಿಗೆ ನಮ್ಮನ್ನು ದೂಷಿಸುತ್ತೀರಿ. ನಾವು ಒಟ್ಟಾಗಿ ಚುನಾವಣೆಯನ್ನು ಎದುರಿಸೋಣ ಎಂದು ನಾನು ಪ್ರಸ್ತಾಪಿಸುತ್ತೇನೆ" ಎಂದು ಜಲೀಲ್ ಹೇಳಿದರು.
ಮೈತ್ರಿಯ ಪ್ರಸ್ತಾಪವು ಔರಂಗಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ಗೆ ಸೀಮಿತವಾಗಿದೆಯೇ ಎಂದು ಕೇಳಿದಾಗ, ಮುಂದಿನ ಕ್ರಮವು ಎನ್‌ಸಿಪಿ ಹಾಗೂ ಕಾಂಗ್ರೆಸ್‌ನಿಂದ ಎಐಎಂಐಎಂ ಪಡೆಯುವ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ ಎಂದು ಜಲೀಲ್ ಹೇಳಿದರು.