ತನ್ನ ಕೋವಿಡ್ ಲಸಿಕೆ ಪ್ರಮಾಣಪತ್ರಗಳನ್ನು ತಿರುಚಲಾಗಿದೆ ಎಂದು ನ್ಯಾಯಾಲಯದ ಮೊರೆ ಹೋದ ಅರುಣ್ ಫೆರೇರಾ
ಮುಂಬೈ: ಕೋವಿನ್ ಆ್ಯಪ್ ಮೂಲಕ ತನ್ನ ಕುಟುಂಬ ಪಡೆದುಕೊಂಡಿರುವ ತನ್ನ ಕೋವಿಡ್ ಲಸಿಕಾ ಪ್ರಮಾಣಪತ್ರಕ್ಕಿಂತ ಬಿನ್ನವಾದ ಕೋವಿಡ್-19 ಲಸಿಕಾ ಪ್ರಮಾಣಪತ್ರವನ್ನು ತನಗೆ ನೀಡಲಾಗಿದೆ ಎಂದು ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಅರುಣ್ ಫೆರೇರಾ ಆರೋಪಿಸಿದ್ದು ಈ ಕುರಿತಂತೆ ತನಿಖೆಗೆ ಕೋರಿ ವಿಶೆಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು indianexpress ವರದಿ ಮಾಡಿದೆ.
ತಮ್ಮ ಅರ್ಜಿಯೊಂದಿಗೆ ಅವರು ಎರಡೂ ಕೋವಿಡ್ ಲಸಿಕೆ ಪ್ರಮಾಣಪತ್ರಗಳನ್ನು ಲಗತ್ತಿಸಿದ್ದಾರೆ. ಪ್ರಸ್ತುತ ಫೆರೇರಾ ಅವರು ತಲೋಜಾ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಜನವರಿ 4ರಂದು ತಾವು ಜೈಲಿನ ಅಧೀಕ್ಷಕರಿಗೆ ಮೌಖಿಕ ಮನವಿ ಮಾಡಿ ತಮ್ಮ ಎರಡೂ ಕೋವಿಡ್ ಲಸಿಕೆ ಪ್ರಮಾಣಪತ್ರ ಕೋರಿದ್ದರು, ಆಗ ನಿಮ್ಮ ಕುಟುಂಬವನ್ನು ಸಂಪರ್ಕಿಸಿ ಕೋವಿನ್ ಆ್ಯಪ್ ಮೂಲಕ ಪ್ರಮಾಣಪತ್ರ ಪಡೆಯಿರಿ ಎಂದು ಅವರಿಗೆ ಸೂಚಿಸಲಾಗಿತ್ತು. ಅಂತೆಯೇ ಅವರು ಲಸಿಕೆ ಪ್ರಮಾಣಪತ್ರವನ್ನು ಪಡೆದು ಅದರ ಪ್ರತಿ ನೀಡುವಂತೆ ಕುಟುಂಬಕ್ಕೆ ಕೇಳಿಕೊಂಡಿದ್ದರು. ನಂತರ ಜೈಲಿನ ಅಧಿಕಾರಿಗಳೂ ಅವರಿಗೆ ಲಸಿಕೆ ಪ್ರಮಾಣಪತ್ರ ಒದಗಿಸಿದ್ದರು.
ಆದರೆ ಎರಡೂ ಪ್ರಮಾಣಪತ್ರಗಳನ್ನು ಪರಿಶೀಲಿಸಿದಾಗ ಅದರಲ್ಲಿ ಹೆಸರು, ಆಧಾರ್ ಸಂಖ್ಯೆ, ಉಲ್ಲೇಖ ಐಡಿಯನ್ನು ತಪ್ಪಾಗಿ ಉಲ್ಲೇಖಿಸಿರುವುದು ಕಂಡು ಬಂದಿದ್ದು ಆದರೆ ಎರಡೂ ಡೋಸ್‍ಗಳ ಬ್ಯಾಚ್ ಸಂಖ್ಯೆ ಒಂದೇ ಆಗಿತ್ತು ಎಂದು ಅರುಣ್ ಫೆರೇರಾ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಡಿಜಿಟಲ್ ಡೇಟಾಬೇಸ್‍ನಲ್ಲಿ ತಿರುಚುವಿಕೆ ನಡೆದಿದೆ, ಇದೊಂದು ಗಂಭೀರ ವಿಚಾರವಾಗಿದ್ದು ತನಿಖೆ ನಡೆಸಬೇಕು ಎಂದು ಅವರ ಅರ್ಜಿ ಕೋರಿದೆ.
ವಿಚಾರಣಾ ನ್ಯಾಯಾಲಯವು ಈ ಅರ್ಜಯನ್ನು ಅರ್ಜಿದಾರರಿಗೆ ವಾಪಸ್ ಕಳುಹಿಸಿ ಪ್ರಕರಣದ ವ್ಯಾಪ್ತಿಯಲ್ಲಿರುವ ನ್ಯಾಯಾಲಯದ ಮುಂದೆ ಅದನ್ನು ಹಾಜರುಪಡಿಸುವಂತೆ ಹೇಳಿದೆ.