×
Ad

ಗೋವಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ಇತರ ಪಕ್ಷಗಳ ಶಾಸಕರು ಕಾಂಗ್ರೆಸನ್ನು ಸಂಪರ್ಕಿಸಿದ್ದಾರೆ: ದಿಗಂಬರ್ ಕಾಮತ್

Update: 2022-03-19 14:53 IST
 Facebook/Digambar Kamat

ಪಣಜಿ: ಗೋವಾದಲ್ಲಿ ಸರಕಾರ ರಚಿಸಲು ಭಾರತೀಯ ಜನತಾ ಪಕ್ಷವು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಇತರ ಪಕ್ಷಗಳ ಶಾಸಕರು ಕಾಂಗ್ರೆಸ್ ಅನ್ನು ಸಂಪರ್ಕಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗಂಬರ್ ಕಾಮತ್ ಶುಕ್ರವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

"ಭಾರತೀಯ ಜನತಾ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ. ಗೋವಾದ ಜನರು ರಾಜ್ಯವನ್ನು ಆಳುವ ಸರಕಾರದಿಂದ ವಂಚಿತರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ" ಎಂದು ಕಾಮತ್ ಹೇಳಿದ್ದಾರೆ.

ಮಾರ್ಚ್ 10 ರಂದು ಪ್ರಕಟವಾದ ರಾಜ್ಯ ಚುನಾವಣಾ ಫಲಿತಾಂಶಗಳಲ್ಲಿ, 40 ಸದಸ್ಯ ಬಲದ ಅಸೆಂಬ್ಲಿಯಲ್ಲಿ  20 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ ಕೇವಲ ಒಂದು ಸ್ಥಾನ ಕೊರತೆ ಎದುರಿಸುತ್ತಿದೆ.

ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಇಬ್ಬರು ಶಾಸಕರು ಹಾಗೂ  ಮೂವರು ಸ್ವತಂತ್ರ ಶಾಸಕರ ಬೆಂಬಲವನ್ನು ಪಡೆದುಕೊಂಡಿದ್ದಾಗಿ ಬಿಜೆಪಿ ಹೇಳಿಕೊಂಡಿದೆ. ಆದರೆ, ಸರಕಾರ ರಚನೆಗೆ ಬಿಜೆಪಿ ಇನ್ನೂ ರಾಜ್ಯಪಾಲರನ್ನು ಸಂಪರ್ಕಿಸಿಲ್ಲ. ಬಿಜೆಪಿಯ ರಾಜ್ಯ ಘಟಕವು ತನ್ನ ಶಾಸಕಾಂಗ ಪಕ್ಷದ ಮುಖ್ಯಸ್ಥರನ್ನೂ ಆಯ್ಕೆ ಮಾಡಿಲ್ಲ.

ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಹಾಗೂ ಅದರ ಮಿತ್ರಪಕ್ಷ ಗೋವಾ ಫಾರ್ವರ್ಡ್ ಪಕ್ಷ ಒಂದರಲ್ಲಿ ಜಯ ಗಳಿಸಿದೆ. ಬಿಜೆಪಿ ಮೂರನೇ ಒಂದು ಭಾಗದಷ್ಟು ಮತಗಳನ್ನು ಗಳಿಸಿದರೆ, ಕಾಂಗ್ರೆಸ್ 23.46 ಶೇ. ಮತ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News