ಹಣದುಬ್ಬರ ಎಲ್ಲಾ ಭಾರತೀಯರ ಮೇಲಿನ ತೆರಿಗೆ : ರಾಹುಲ್ ಗಾಂಧಿ ಟೀಕೆ
ಹೊಸದಿಲ್ಲಿ, ಮಾ.19: ಉಕ್ರೇನ್ ಯುದ್ಧ ಆರಂಭಕ್ಕೂ ಮುನ್ನ ದೇಶದಲ್ಲಿದ್ದ ದಾಖಲೆ ಮಟ್ಟದ ಹಣದುಬ್ಬರದಿಂದ ಬಡ ಮತ್ತು ಮಧ್ಯಮ ವರ್ಗದ ಜನತೆಯ ಉಸಿರು ಕಟ್ಟಿದಂತಾಗಿದೆ. ಹಣದುಬ್ಬರವು ಎಲ್ಲಾ ಭಾರತೀಯರಿಗೆ ವಿಧಿಸಿರುವ ತೆರಿಗೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.
ಮುಂದಿನ ದಿನದಲ್ಲಿ ಕಚ್ಛಾತೈಲದ ದರ ಬ್ಯಾರಲ್‌ಗೆ 100 ಡಾಲರ್‌ಗೂ ಹೆಚ್ಚಾಗುವ , ಆಹಾರ ಪದಾರ್ಥಗಳ ದರ 22%ದಷ್ಟು ಹೆಚ್ಚುವ ನಿರೀಕ್ಷೆಯಿದೆ. ಕೋವಿಡ್ ಸೋಂಕು ಜಾಗತಿಕ ಪೂರೈಕೆ ಸರಪಳಿಯನ್ನು ಅಸ್ತವ್ಯಸ್ತಗೊಳಿಸಿದೆ. ಕೇಂದ್ರ ಸರಕಾರ ಈಗಲಾದರೂ ಕಾರ್ಯನಿರ್ವಹಿಸಬೇಕಿದೆ. ಜನರನ್ನು ರಕ್ಷಿಸಿ ಎಂದವರು ಶನಿವಾರ ಟ್ವೀಟ್ ಮಾಡಿದ್ದಾರೆ.
ಕಳೆದ ವಾರ ರಾಹುಲ್ ಪ್ರಾವಿಡೆಂಟ್ ಫಂಡ್ (ಭವಿಷ್ಯ ನಿಧಿ) ಬಡ್ಡಿ ದರ ಕಡಿತದ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದರು. ಅಲ್ಲದೆ ಬಿಜೆಪಿ ಹಾಗೂ ಫೇಸ್‌ಬುಕ್ ಮಧ್ಯೆ ಸಂಪರ್ಕವಿದೆ ಎಂಬ ವರದಿಯ ಹಿನ್ನೆಲೆಯಲ್ಲೂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.