×
Ad

ಚೆನ್ನೈ: 60 ವರ್ಷದ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಎಬಿವಿಪಿ ಮಾಜಿ ಅಧ್ಯಕ್ಷನ ಬಂಧನ

Update: 2022-03-20 19:39 IST
Photo: Facebook

ಚೆನ್ನೈ: 2020 ರಲ್ಲಿ ವೃದ್ಧ ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಾಜಿ ಅಧ್ಯಕ್ಷ ಡಾ. ಸುಬ್ಬಯ್ಯ ಷಣ್ಮುಗಂ ಅವರನ್ನು ಚೆನ್ನೈ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅವರನ್ನು  ಮ್ಯಾಜಿಸ್ಟ್ರೇಟ್ ಮಾರ್ಚ್ 31 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಚೆನ್ನೈನ 60 ವರ್ಷದ ಮಹಿಳೆಯೊಬ್ಬರು ನಗರದ ನಂಗನಲ್ಲೂರು ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಪಾರ್ಕಿಂಗ್ ಪ್ರದೇಶದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ನಂತರ ಷಣ್ಮುಗಂ ತನ್ನ ಮನೆ ಬಾಗಿಲಿಗೆ ಮೂತ್ರ ವಿಸರ್ಜನೆ ಮಾಡಿದ್ದಲ್ಲದೇ, ಬಳಸಿದ ಮಾಸ್ಕ್‌ ಗಳನ್ನು ಮತ್ತು ಕಸವನ್ನು ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಜುಲೈ 11, 2020 ರಂದು ನೀಡಿದ ದೂರಿನಲ್ಲಿ ಮಹಿಳೆಯು, ಷಣ್ಮುಗಂ ತನ್ನ ಮನೆ ಬಾಗಿಲಿಗೆ ಕಸ ಎಸೆದು ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ಕ್ಲಿಪ್ ಅನ್ನು ಸಲ್ಲಿಸಿದ್ದರು.

ಎಬಿವಿಪಿ ನಾಯಕ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು ಮತ್ತು ವೀಡಿಯೊವನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ಮಹಿಳೆಯ ಪಾರ್ಕಿಂಗ್ ಜಾಗವನ್ನು ತಾನು ತಾತ್ಕಾಲಿಕವಾಗಿ ಬಳಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದ ಆತ, ನಂತರ ಇನ್ನೊಂದು ಪ್ರದೇಶವನ್ನು ಕಂಡುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.

ದಿ ನ್ಯೂಸ್ ಮಿನಿಟ್ ಪ್ರಕಾರ, ಮಹಿಳೆ ದೂರು ಸಲ್ಲಿಸಿದ ಎರಡು ವಾರಗಳ ನಂತರ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಷಣ್ಮುಗಂ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 271 (ಕ್ವಾರಂಟೈನ್ ನಿಯಮಕ್ಕೆ ಅವಿಧೇಯತೆ) ಮತ್ತು ಸೆಕ್ಷನ್ 427 (ಹಾನಿ ಉಂಟುಮಾಡುವ ಕಿಡಿಗೇಡಿತನ) ಮತ್ತು ತಮಿಳುನಾಡು ಮಹಿಳಾ ಕಿರುಕುಳ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಮಹಿಳೆಯ ಕುಟುಂಬದವರು‌, ಅದನ್ನು ಹಿಂಪಡೆಯುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ. ಕೆಲವು ದಿನಗಳ ನಂತರ, ಕುಟುಂಬದವರು ತಮ್ಮ ದೂರನ್ನು ಹಿಂಪಡೆದಿದ್ದಾರೆ ಎಂದು ಎಬಿವಿಪಿ ಹೇಳಿತ್ತು.

ದೂರನ್ನು ಹಿಂಪಡೆದರೂ, ಎಫ್‌ಐಆರ್ ದಾಖಲಿಸಿದ ನಂತರ ಮಹಿಳೆಯ ಕುಟುಂಬವು ಪ್ರಕರಣವನ್ನು ಮುಂದುವರಿಸಿದೆ ಎಂದು ಪೊಲೀಸರು ರವಿವಾರ ಹೇಳಿದ್ದಾರೆ. ಆಗಿನ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಸರ್ಕಾರವು ತನಿಖೆ ನಡೆಸದ ಅದೇ ಎಫ್‌ಐಆರ್ ಅನ್ನು ಆಧರಿಸಿ ಷಣ್ಮುಗಂ ಬಂಧನವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಏತನ್ಮಧ್ಯೆ, ಷಣ್ಮುಗಂ ಬಂಧನದ ನಂತರ ಎಬಿವಿಪಿ, ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಗಳಿಂದ ತಮಗೆ "ಸೂಕ್ಷ್ಮ ಬೆದರಿಕೆ" ಬರುತ್ತಿದೆ ಎಂದು ಮಹಿಳೆಯರ ಕುಟುಂಬ ಆರೋಪಿಸಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News