ಅಂಡಮಾನ್-ನಿಕೋಬಾರ್‌ಗೆ ಅಸಾನಿ ಚಂಡಮಾರುತ ಭೀತಿ: ತಗ್ಗು ಪ್ರದೇಶಗಳಿಂದ ನಾಗರಿಕರ ತೆರವು

Update: 2022-03-20 14:45 GMT
photo courtesy:twitter

ಹೊಸದಿಲ್ಲಿ,ಮಾ.20: ಅಸಾನಿ ಚಂಡಮಾರುತವು ಅಪ್ಪಳಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆಂಡಮಾನ್ ಮತ್ತು ನಿಕೋಬಾರ್ ದ್ವೀಪಸ್ತೋಮದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾವಿರಾರು ಜನರನ್ನು ರವಿವಾರ ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ. ಕಳೆದ ಎರಡು ದಿನಗಳಿಂದ ಅಂಡಮಾನ್ ನಿಕೋಬಾರ್ ದ್ವೀಪಸಮೂಹಲ್ಲಿ ಭಾರೀ ಗಾಳಿ ಹಾಗೂ ಮಳೆಯಾಗುತ್ತಿದೆ.
 ‌
ಮುಂದಿನ 24 ತಾಸುಗಳಲ್ಲಿ ಸಮುದ್ರದಲ್ಲಿ ನಿಮ್ನ ಒತ್ತಡವುಂಟಾಗಲಿದ್ದು, ಮಾರ್ಚ್ 24ರಂದು ಪ್ರಬಲ ಚಂಡಮಾರುತವಾಗಿ ರೂಪುಗೊಳ್ಳಲಿದೆ ಎಂದು ಭಾರತದ ಹವಾಮಾನ ಇಲಾಖೆ ವರದಿ ಮಾಡಿದೆ. ಶ್ರೀಲಂಕಾದಿಂದ ಅಸಾನಿ ಚಂಡಮಾರುತವೆಂದು ಹೆಸರಿಸಲ್ಪಟ್ಟ ಈ ಚಂಡಮಾರುತವು ಆಂಡಮಾನ್-ನಿಕೋಬಾರ್ ನಿಂದ ಬಾಂಗ್ಲಾ ಹಾಗೂ ಉತ್ತಮ ಮ್ಯಾನ್ಮಾರ್‌ನ ಕರಾವಳಿ ತೀರಗಳೆಡೆಗೆ ಸಾಗಲಿದೆ. ಆದಾಗ್ಯೂ ಈ ಚಂಡಮಾರುತದಿಂದ ಭಾರತದ ಮುಖ್ಯಭೂಮಿ ಪ್ರದೇಶಕ್ಕೆ ಯಾವುದೇ ನೇರ ಅಪಾಯವಿಲ್ಲವೆಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಚಂಡಮಾರುತ ಅಪ್ಪಳಿಸುವ ಸಾಧ್ಯತೆಯ ಹಿನ್ನಲೆಯಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗಾಗಿ ವಿವಿಧ ಸ್ಥಳಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರನ್ನು ನಿಯೋಜಿಸಲಾಗಿದೆ ಂದು ಅಂಡಮಾನ್-ನಿಕೋಬಾರ್ ಆಡಳಿತ ತಿಳಿಸಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅಂಡಮಾನ್-ನಿಕೋಬಾರ್‌ನ ಎಲ್ಲಾ ಶಾಲೆಗಳು ಹಾಗೂ ಕಾಲೇಜುಗಳನ್ನು ಸೋಮವಾರ ಮುಚ್ಚುಗಡೆಗೊಳಿಸಲು ಆದೇಶಿಸಿದೆ. 

ಪೋರ್ಟ್ ಬ್ಲೇರ್ ಹಾಗೂ ಆಸುಪಾಸಿನ ದ್ವೀಪಗಳ ನಡುವಿನ ನೌಕೆಗಳ ಯಾನವನ್ನು ಕೂಡಾ ರದ್ದುಪಡಿಸಲಾಗಿದೆ. ಅಂಡಮಾನ್ ಸಮುದ್ರ ಹಾಗೂ ಸಮೀಪದ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆಗೆ ಇಳಿಯದಂತೆ ಕೇಂದ್ರಾಡಳಿತ ಸೂಚನೆ ನೀಡಿದೆ.
 ಜನರ ಸುರಕ್ಷತೆಗಾಗಿ ಆಂಡಮಾನ್-ನಿಕೋಬಾರ್ ಆಡಳಿತವು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಿದೆಯೆಂದು ವಿಪತ್ತು ನಿರ್ವಹಣ ಕಾರ್ಯದರ್ಶಿ ಪಂಕಜ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News