ಪಶ್ಚಿಮ ಬಂಗಾಳ ಉಪ ಚುನಾವಣೆ: ಟಿಎಂಸಿಯಿಂದ ಶತ್ರುಘ್ನ ಸಿನ್ಹ, ಬಾಬುಲ್ ಸುಪ್ರಿಯೊ ನಾಮಪತ್ರ ಸಲ್ಲಿಕೆ

Update: 2022-03-21 17:38 GMT

ಕೋಲ್ಕತಾ, ಮಾ. 21: ಪಶ್ಚಿಮಬಂಗಾಳದಲ್ಲಿ ಎಪ್ರಿಲ್ 12ರಂದು ನಡೆಯಲಿರುವ ಲೋಕಸಭೆ ಹಾಗೂ ವಿಧಾನ ಸಭೆ ಉಪ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳಾದ ಶತ್ರುಘ್ನ ಸಿನ್ಹ ಹಾಗೂ ಬಾಬೂಲ್ ಸುಪ್ರಿಯೊ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಶತ್ರುಘ್ನ ಸಿನ್ಹ ಅವರನ್ನು ಅಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಹಾಗೂ ಬಾಬುಲ್ ಸುಪ್ರೀಯೊ ಅವರನ್ನು ಬಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿದೆ. ಅಲಿಪೊರೆ ಸರ್ವೇ ಕಟ್ಟಡದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬುಲ್ ಸುಪ್ರಿಯೋ, ‘‘ಪ್ರತಿಷ್ಠಿತ ಬಾಲಿಗಂಜ್ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ ದೀದಿ (ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ)ಗೆ ನಾನು ಅಭಾರಿಯಾಗಿದ್ದೇನೆ. ನನಗೆ ನಿಜವಾಗಿಯೂ ಗೌರವ ಇದೆ.

ನಾನು ಈ ಸವಾಲನ್ನು ಸ್ವೀಕರಿಸುತ್ತೇನೆ’’ ಎಂದಿದ್ದಾರೆ. ಬಾಬುಲ್ ಸುಪ್ರಿಯೊ ಅವರು ಕಳೆದ ವರ್ಷ ಸೆಪ್ಟಂಬರ್ನಲ್ಲಿ ಟಿಎಂಸಿಗೆ ಸೇರ್ಪಡೆಯಾದ ಬಳಿಕ ಬಿಜೆಪಿಯ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಅಸನ್ಸೋಲ್ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸುವುದು ಅನಿವಾರ್ಯವಾಯಿತು. ಹಾಲಿ ಶಾಸಕ ಹಾಗೂ ರಾಜ್ಯ ಸಚಿವ ಸುಬ್ರತಾ ಮುಖರ್ಜಿ 2021 ನವೆಂಬರ್ ನಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬಾಲಿಗಂಜ್ ವಿಧಾನ ಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಬಿಜೆಪಿಯ ಮಾಜಿ ನಾಯಕ ಶತ್ರುಘ್ನ ಸಿನ್ಹ ಅವರು ಪಶ್ಚಿಮ ಬರ್ದಮಾನ್ನ ಜಿಲ್ಲಾ ದಂಡಾಧಿಕಾರಿ ಅವರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ತನ್ನನ್ನು ಹೊರ ರಾಜ್ಯದವನು ಎಂಬುದಕ್ಕೆ ಬಿಜೆಪಿಯನ್ನು ರವಿವಾರ ತರಾಟೆಗೆ ತೆಗೆದುಕೊಂಡಿದ್ದ ನಟ, ರಾಜಕಾರಣಿ ಶತ್ರುಘ್ನ ಸಿನ್ಹ, ಬಿಜೆಪಿ ನರೇಂದ್ರ ಮೋದಿ ಅವರನ್ನು ವಾರಣಾಸಿಯಿಂದ ಕಣಕ್ಕಿಳಿಸಿದ್ದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News