ರಾಷ್ಟ್ರೀಯ ಬದಲಾವಣೆ ತರಲು ಪ್ರಶಾಂತ್ ಕಿಶೋರ್ ಜತೆ ಮಾತುಕತೆ ನಡೆಯುತ್ತಿದೆ: ತೆಲಂಗಾಣ ಸಿಎಂ ಕೆಸಿಆರ್

Update: 2022-03-21 17:47 GMT

ಹೊಸದಿಲ್ಲಿ, ಮಾ. 21: ರಾಷ್ಟ್ರೀಯ ಬದಲಾವಣೆ ತರಲು ರಾಜಕೀಯ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗೆ ತಾನು ಮಾತುಕತೆಯಲ್ಲಿ ತೊಡಗಿದ್ದೇನೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಸೋಮವಾರ ಹೇಳಿದ್ದಾರೆ.

“ರಾಜಕೀಯ ಬದಲಾವಣೆ ತರಲು ತಾನು ಪ್ರಶಾಂತ್ ಕಿಶೋರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಪ್ರಶಾಂತ್ ಕಿಶೋರ್ ಅವರು ಈ ವಿಷಯದ ಕುರಿತಂತೆ ನನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಯಾರಿಗೆ ಸಮಸ್ಯೆ ಇದೆ? ಅವರು ಯಾಕೆ ಅಳುತ್ತಿದ್ದಾರೆ?’’ ಎಂದು ಅವರು ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಅವರು ಕೆಸಿಆರ್ ಅವರನ್ನು ಕಳೆದ ತಿಂಗಳು ಹೈದರಾಬಾದ್‌ ನ ಫಾರ್ಮ್ಹೌಸ್ನ ಹೊರಗೆ ಭೇಟಿಯಾಗಿದ್ದರು. 

2024ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಮೈತ್ರಿಕೂಟವನ್ನು ರಚಿಸುವ ಚಂದ್ರಶೇಖರ್ ರಾವ್ ಅವರ ಪ್ರಯತ್ನದ ನಡುವೆ ಈ ಬೆಳವಣಿಗೆ ಊಹಾಪೋಹಕ್ಕೆ ಕಾರಣವಾಗಿತ್ತು. ಈ ತಿಂಗಳು ಪ್ರಧಾನಿ ಮೋದಿ ಹಾಗೂ ಬಿಜೆಪಿಯ ವಿರುದ್ಧ ಚಂದ್ರಶೇಖರ ರಾವ್ ಅವರ ವಾಗ್ದಾಳಿ ಉಲ್ಬಣಗೊಂಡಿರುವುದು ಎದ್ದು ಕಾಣುತ್ತಿದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ರಾಮಾನುಜಾಚಾರ್ಯರ ಪ್ರತಿಮೆ ಸ್ಥಾಪಿಸಲು ಹೈದರಾಬಾದ್‌ ಗೆ ಭೇಟಿ ನೀಡಿದ್ದರು. ಆದರೆ, ಚಂದ್ರಶೇಖರ್ ರಾವ್ ಅವರು ಅನಾರೋಗ್ಯದ ಕಾರಣ ಉಲ್ಲೇಖಿಸಿ ಈ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News