ಹನಿಹನಿ ನೀರನ್ನು ಕಾಪಾಡಲು ಪಣ ತೊಡೋಣ: ಮೋದಿ

Update: 2022-03-22 18:18 GMT

ಹೊಸದಿಲ್ಲಿ,ನ.22: ದೇಶದ ಪ್ರತಿಯೊಬ್ಬ ಪ್ರಜೆಯೂ ಒಂದೊಂದು ಹನಿ ನೀರನ್ನು ಉಳಿತಾಯ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಜಲದಿನವಾದ ಮಂಗಳವಾರ ಕರೆ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜಲಸಂರಕ್ಷಣೆಯು ಸಾಮೂಹಿಕ ಚಳವಳಿಯಾಗಿ ರೂಪುಗೊಂಡಿರುವುದನ್ನು ಕಾಣಲು ಸಂತಸವಾಗುತ್ತಿದೆ ಎಂದವರು ಹೇಳಿದ್ದಾರೆ. ಜಲ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಎಲ್ಲಾ ವ್ಯಕ್ತಿಗಳು ಹಾಗೂ ಸಂಘಟನೆಗಳನ್ನು ಅವರು ಪ್ರಶಂಸಿಸಿದ್ದಾರೆ.

      ‘‘ಪ್ರತಿಯೊಂದು ಹನಿ ನೀರನ್ನು ಉಳಿಸುವ ನಮ್ಮ ಪ್ರತಿಜ್ಞೆಯನ್ನು ವಿಶ್ವ ಜಲದಿನದಂದು ನಾವು ಪುನರುಚ್ಚರಿಸುತ್ತೇವೆ. ಜಲಸಂರಕ್ಷಣೆಯನ್ನು ಹಾಗೂ ನಮ್ಮ ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಖಾತರಿಪಡಿಸುವ ನಮ್ಮ ರಾಷ್ಟ್ರವು ಜಲಜೀವನ ಮಿಶನ್ನಂತಹ ಹಲವಾರು ಕ್ರಮಗಳನ್ನು ನಮ್ಮ ರಾಷ್ಟ್ರವು ಕೈಗೊಂಡಿದೆ ಎಂದವರು ಟ್ವೀಟ್ ಮಾಡಿದ್ದಾರೆ. ಜಲಸಂರಕ್ಷಣೆಯ ಮಹತ್ವ ಹಾಗೂ ಈ ನಿಟ್ಟಿನಲ್ಲಿ ಅವರ ಸರಕಾರ ಕೈಗೊಂಡ ಪ್ರಯತ್ನಗಳ ಬಗ್ಗೆಯೂ ಮೋದಿ ವಿಡಿಯೋದಲ್ಲಿ ಪೋಸ್ಟ್ ಮಾಡಿದ್ದಾರೆ.

   ‘‘ನಾವೆಲ್ಲರೂ ಒಟ್ಟಾಗಿ ಜಲ ಸಂರಕ್ಷಣೆಯನ್ನು ಮುನ್ನಡೆಸೋಣ ಹಾಗೂ ಭೂಗ್ರಹದ ಸುಸ್ಥಿರತೆಗೆ ಕೊಡುಗೆ ನೀಡೋಣ. ಪ್ರತಿಯೊಂದು ಹನಿ ನೀರು ಕಡಾ ನಮ್ಮ ಜನರಿಗೆ ನೆರವಾಗಿದೆ ಹಾಗೂ ನಮ್ಮಸ ಪ್ರಗತಿಯನ್ನು ವೃದ್ಧಿಗೊಳಿಸಿದೆ’’ ಎಂದವರು ಹೇಳಿದರು.

   ಪ್ರತಿಯೊಂದು ಮನೆಗೆ ನಳ್ಳಿ ನೀರನ್ನು ಒದಗಿಸುವ ತನ್ನ ಸರಕಾರದ ಸಾಧನೆಯು ಅತ್ಯಂತ ಪರಿಣಾಮಕಾರಿಯಾಗಿದೆ ಹಾಗೂ ಮಹಿಳೆಯರ ಬದುಕನ್ನು ಸರಳಗೊಳಿಸಿದೆ ಎಂದು ಮೋದಿಯವರು ಜಲಶಕ್ತಿ ಸಚಿವಾಲಯದ ಟ್ವೀಟ್ ಒಂದನ್ನು ಪ್ರಸ್ತಾವಿಸಿದ್ದಾರೆ.

 ಕಳೆದ ಎರಡೂವರೆ ವರ್ಷಗಳಲ್ಲಿ ಆರು ಕೋಟಿಗೂ ಅಧಿಕ ಮನೆಗಳಿಗೆ ನಳ್ಳಿ ನೀರನ್ನು ಒದಗಿಸಲಾಗಿದೆಯೆಂದು ಜಲಶಕ್ತಿ ಸಚಿವಾಲಯವು ತಿಳಿಸಿದೆ. ನೀರನ್ನು ತರಲೆಂದೇ ಮಹಿಳೆಯರು ದೂರದ ಸ್ಥಳಗಳಿಗೆ ಪ್ರಯಾಣಿಸಬೇಕಾಗುತ್ತಿತ್ತೆಂದು ಸಚಿವಾಲಯ ಟ್ವೀಟ್ ಸಂದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News