ಉತ್ತರಪ್ರದೇಶ: 14 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಪ್ರಕರಣ; ಓರ್ವ ಆರೋಪಿಯ ಬಂಧನ
ಲಕ್ನೊ: ಉತ್ತರಪ್ರದೇಶದ ಕಾನ್ಪುರದಲ್ಲಿ 14 ವರ್ಷದ ಬಾಲಕಿಯನ್ನು ಅಪಹರಿಸಿದ ಇಬ್ಬರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.
ಅಪ್ರಾಪ್ತ ಬಾಲಕಿ ತನ್ನ ಮನೆಯ ಹೊರಗೆ ತನ್ನ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ಹಿಡಿದು ಅಪಹರಿಸಿ ನಂತರ ಅತ್ಯಾಚಾರವೆಸಗಿದ್ದಾರೆ.
ಪೊಲೀಸರ ಪ್ರಕಾರ, ಕಾನ್ಪುರದಲ್ಲಿ ಇಬ್ಬರು ಸಹೋದರರಾದ ಚುಟ್ಕನ್ ಮತ್ತು ಬದ್ಕನ್ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಬಾಲಕಿ ನಾಪತ್ತೆಯಾದಾಗ ಸಂತ್ರಸ್ತೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಇಡೀ ಹಳ್ಳಿ ಜನರು ಹುಡುಗಿಯನ್ನು ಹುಡುಕಾಡಿದ್ದಾರೆ. ಆದರೆ ಆಕೆ ಪತ್ತೆಯಾಗಲಿಲ್ಲ.
ಹಗ್ಗದಿಂದ ಕಟ್ಟಿದ ಸ್ಥಿತಿಯಲ್ಲಿ ಪೊದೆಯೊಂದರಲ್ಲಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದಾಳೆ ಹಾಗೂ ಆಕೆಯ ಬಾಯಿಯನ್ನು ಬಟ್ಟೆಯಿಂದ ಮುಚ್ಚಲ್ಪಟ್ಟಿತ್ತು ಎಂದು ಬಾಲಕಿಯ ಸಂಬಂಧಿಕರೊಬ್ಬರಿಗೆ ಮಾಹಿತಿ ಸಿಕ್ಕಿತು.
ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆಗಾಗಿ ತಂಡವನ್ನು ಅಪರಾಧ ಸ್ಥಳಕ್ಕೆ ಕಳುಹಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.