×
Ad

ರಾಜಸ್ಥಾನ ಸಿಎಂ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿ, ʼಪ್ರಮಾದವಾಗಿದೆʼ ಎಂದು ಹಿಂಪಡೆಯಲು ಬಯಸಿದ ಉದ್ಯಮಿ

Update: 2022-03-23 23:45 IST

ಮುಂಬೈ, ಮಾ. 23: ವಂಚನೆಯ ಆರೋಪದಲ್ಲಿ 14 ಮಂದಿಯ ವಿರುದ್ಧ ನಾಸಿಕ್ನ ಗಂಗಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಉದ್ಯಮಿಯೋರ್ವರು ಅನಂತರ ಪ್ರಕರಣದಿಂದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಅವರ ಹೆಸರು ಕೈ ಬಿಡಲು ಬಯಸಿರುವುದಾಗಿ ಪೊಲೀಸ್ ಅಧಿಕಾರಿ ಬುಧವಾರ ತಿಳಿಸಿದ್ದಾರೆ. ಉದ್ಯಮಿ ಸುಶೀಲ್ ಪಾಟೀಲ್ (33) ನೀಡಿದ ದೂರಿನ ಆಧಾರದಲ್ಲಿ ನಾಸಿಕ್ನ ಗಂಗಾಪುರ ಪೊಲೀಸ್ ಠಾಣೆಯಲ್ಲಿ ಮುಖ್ಯಮಂತ್ರಿಯ ಪುತ್ರ ಸೇರಿದಂತೆ 14 ಮಂದಿ ವಿರುದ್ಧ ಕಳೆದ ವಾರ ದೂರು ದಾಖಲಿಸಲಾಗಿತ್ತು.

ಪಾಟೀಲ್ ಅವರ ಪೂರಕ ಹೇಳಿಕೆಯನ್ನು ಗಂಗಾಪುರ ಪೊಲೀಸ್ ಠಾಣೆಯ ಪೊಲೀಸರು ಸೋಮವಾರ ದಾಖಲಿಸಿಕೊಂಡಿದ್ದಾರೆ. ಈ ಹೇಳಿಕೆಯಲ್ಲಿ ಪಾಟೀಲ್ ಅವರು, ಗುಜರಾತ್ ಮೂಲದ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಪ್ರಕರಣದ ಪ್ರಧಾನ ಆರೋಪಿ ಸಚಿನ್ ವಲೇರಾನಿಂದ ಉಂಟಾದ ತಪ್ಪು ತಿಳಿವಳಿಕೆಯಿಂದ ದೂರಿನಲ್ಲಿ ವೈಭವ್ ಗೆಹ್ಲೋಟ್ ಅವರ ಹೆಸರು ಸೇರಿಕೊಂಡಿದೆ ಎಂದು ಪ್ರತಿಪಾದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಟೀಲ್ ಅವರ ಹೇಳಿಕೆ ದಾಖಲಿಸಿಕೊಂಡ ಬಳಿಕ ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಪ್ರಕರಣದ ತನಿಖೆಯನ್ನು ಮಂಗಳವಾರ ಆರ್ಥಿಕ ಅಪರಾಧಗಳ ದಳಕ್ಕೆ ವರ್ಗಾಯಿಸಿದ್ದಾರೆ.

ಸಚಿನ್ ವಲೇರಾ ವೈಭವ್ ಗೆಹ್ಲೋಟ್‌ ರ ಹೆಸರು ಹೇಳಿದ್ದುದರಿಂದ ತಾನು ದೂರಿನಲ್ಲಿ ವೈಭವ್ ಗೆಹ್ಲೋಟ್ ಅವರ ಹೆಸರನ್ನು ಉಲ್ಲೇಖಿಸಿದೆ. ಆದರೆ, ತನಗೆ ಈಗ ವೈಭವ್ ಗೆಹ್ಲೋಟ್ ವಿರುದ್ಧ ಯಾವುದೇ ದೂರುಗಳು ಇಲ್ಲ ಎಂದು ಪಾಟೀಲ್ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನಾಸಿಕ್ ನ್ಯಾಯಾಲಯ ನಿರ್ದೇಶನ ನೀಡಿದ ಬಳಿಕ ಪೊಲೀಸರು 14 ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಆರೋಪಿಗಳು ಹೆಚ್ಚಿನ ಆದಾಯದ ಭರವಸೆಯೊಂದಿಗೆ ತಮ್ಮ ಕಂಪೆನಿಯಲ್ಲಿ ಸಕ್ರಿಯವಲ್ಲದ ಪಾಲುದಾರನ ಪಾತ್ರವನ್ನು ತನಗೆ ನೀಡಿದ್ದರು. ಅಲ್ಲದೆ 8 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News