ʼಕಾಶ್ಮೀರಿ ಫೈಲ್ಸ್‌ʼಗಿರುವ ವಿನಾಯಿತಿ ʼಜೈ ಭೀಮ್‌ʼಗೆ ಯಾಕಿಲ್ಲವೆಂದ ದಲಿತ ಯುವಕನಿಗೆ ದೇವಸ್ಥಾನದಲ್ಲಿ ದೌರ್ಜನ್ಯ: ಆರೋಪ

Update: 2022-03-24 08:52 GMT
Photo: /twitter/spnnewsindia

ಜೈಪುರ್:‌ ರಾಜಸ್ಥಾನ ದ ಆಲ್ವರ್‌ ಜಿಲ್ಲೆಯಲ್ಲಿ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ದಲಿತ ದೌರ್ಜನ್ಯದ ಬಗ್ಗೆ ದನಿಯೆತ್ತಿದ್ದ 32 ವರ್ಷದ ದಲಿತ ಯುವಕನನ್ನು ಸ್ಥಳೀಯ ದೇವಾಲಯದ ನೆಲಹಾಸಿಗೆ ಮೂಗು ಸವರಿ ಕ್ಷಮೆ ಕೇಳುವಂತೆ ಮಾಡಿ ಅವಮಾನಿಸಿರುವ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೇಶ್‌ ಕುಮಾರ್‌ ಮೇಘವಾಲ್‌ ದೌರ್ಜನ್ಯಕ್ಕೊಳಗಾದ ಯುವಕ. ಮಾರ್ಚ್‌ 18 ರಂದು, ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರಕ್ಕೆ ಸಂಭಂಧಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ ಸಂತ್ರಸ್ತ ಯುವಕ,”ಕಾಶ್ಮೀರ್‌ ಫೈಲ್ಸ್‌ ಚಿತ್ರಕ್ಕೆ ನೀಡಿದ ತೆರಿಗೆ ವಿನಾಯಿತಿ ದಲಿತ ದೌರ್ಜನ್ಯದ ಕುರಿತ ಸಿನೆಮಾಗಳಿಗೆ ಯಾಕೆ ನೀಡುತ್ತಿಲ್ಲ” ಎಂದು ಪ್ರಶ್ನಿಸಿದ್ದ ಎಂದು indianexpress.com ವರದಿ ಮಾಡಿದೆ.

ಈ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ಮೇಘವಾಲ್,”ನಾನು ಸಿನೆಮಾದ ಟ್ರೇಲರ್‌ ನೋಡಿ, ಪೋಸ್ಟ್‌ ಹಾಕಿದ್ದೆ. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯದ ಸಿನೆಮಾಗಳಿಗೆ ತೆರಿಗೆ ಮುಕ್ತಗೊಳಿಸಲಾಗುತ್ತಿದೆ. ಅದು ಸರಿ, ಆದರೆ ದಲಿತರು ಮತ್ತು ಇತರ ಸಮುದಾಯಗಳ ಮೇಲೆ ದೌರ್ಜನ್ಯಗಳೂ ನಡೆಯುತ್ತಿವೆ. ಜೈ ಭೀಮ್‌ನಂತಹ ಚಲನಚಿತ್ರಗಳನ್ನು ಏಕೆ ತೆರಿಗೆ ಮುಕ್ತಗೊಳಿಸಲಾಗಿಲ್ಲ? ಎಂದು ಪೋಸ್ಟ್‌ ಹಾಕಿದ್ದೆ” ಎಂದು ತಿಳಿಸಿದ್ದಾರೆ.

 ಕೆಲವರು ತನ್ನ ಎಫ್‌ಬಿ ಪೋಸ್ಟ್‌ನಲ್ಲಿ ಧಾರ್ಮಿಕ ಘೋಷಣೆಗಳನ್ನು ಕಮೆಂಟ್ ಮಾಡಲು ಪ್ರಾರಂಭಿಸಿದರು ಎಂದು ಮೇಘವಾಲ್ ಹೇಳಿದ್ದಾರೆ. ಬಳಿಕ, ತನಗೆ ಬೆದರಿಕೆಗಳು ಬರಲಾರಂಭಿಸಿದವು ಮತ್ತು ಕ್ಷಮೆ ಕೇಳುವಂತೆ ಒತ್ತಡ ಬಂದವು ಎಂದು ಮೇಘವಾಲ್ ಹೇಳಿದ್ದಾರೆ.

"ಗ್ರಾಮಸ್ಥರು ಮತ್ತು ಮಾಜಿ ಸರಪಂಚ್ ಗ್ರಾಮದ ದೇವಸ್ಥಾನದಲ್ಲಿ ಕ್ಷಮೆಯಾಚಿಸುವಂತೆ ನನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಅವರು ನನ್ನನ್ನು ಬೈಯಲು ಪ್ರಾರಂಭಿಸಿದರು ಮತ್ತು ನನ್ನ ಇಚ್ಛೆಗೆ ವಿರುದ್ಧವಾಗಿ ದೇವಸ್ಥಾನದ ನೆಲಕ್ಕೆ ನನ್ನ ಮೂಗು ಉಜ್ಜುವಂತೆ ಒತ್ತಾಯಿಸಿದರು” ಎಂದು ಮೇಘವಾಲ್‌ ತಿಳಿಸಿದ್ದಾರೆ.

ಘಟನೆಯ ನಂತರ, ಮೇಘವಾಲ್ ಅವರ ದೂರಿನ ಆಧಾರದ ಮೇಲೆ, ಬೆಹ್ರೋರ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 143, 342, 323, 504, 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಮತ್ತು 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

"ದೂರು ದಾಖಲಿಸಿದ ಬಳಿಕ ನಾನು ಅಪಾರ ಒತ್ತಡದಲ್ಲಿದ್ದೇನೆ ಮತ್ತು ನನ್ನ ಸುರಕ್ಷತೆಯ ಬಗ್ಗೆ ಭಯಪಡುತ್ತೇನೆ" ಎಂದು ಮೇಘವಾಲ್ ಆತಂಕ ವ್ಯಕ್ತಪಡಿಸಿದ್ದಾರೆ.

11 ಆರೋಪಿಗಳ ಪೈಕಿ ಏಳು ಜನರನ್ನು ಬಂಧಿಸಿದ್ದೇವೆ. ಅಜಯ್ ಕುಮಾರ್ ಶರ್ಮಾ, ಸಂಜೀತ್ ಕುಮಾರ್, ಹೇಮಂತ್ ಶರ್ಮಾ, ಪರ್ವೀಂದ್ರ ಕುಮಾರ್, ರಾಮೋತರ್, ನಿತಿನ್ ಜಂಗಿದ್ ಮತ್ತು ದಯಾರಾಮ್ ಎಂಬ ಆರೋಪಿಗಳನ್ನು ಸದ್ಯ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬೆಹ್ರೋರ್ ಸರ್ಕಲ್‌ ಇನ್ಸಪೆಕ್ಟರ್‌  ರಾವ್ ಆನಂದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News