×
Ad

ಅಸಭ್ಯ ನಿಂದನೆಗಳನ್ನು ಕೇಳದೇ ತಂದೆ, ಮಗಳಿಗೆ ಜೊತೆಯಾಗಿ ನಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ: ಹೈಕೋರ್ಟ್

Update: 2022-03-24 18:17 IST

ಕೊಚ್ಚಿ: ತನ್ನ ಹದಿಹರೆಯದ ಪುತ್ರಿಯ ಬಗ್ಗೆ ಅಸಭ್ಯ ಮಾತುಗಳನ್ನು ಕೇಳದೆ ಒಬ್ಬ ತಂದೆ ಆಕೆಯ ಜತೆ ರಸ್ತೆಯಲ್ಲಿ ಸಾಗುವುದು ಅಸಾಧ್ಯವಾಗಿರುವುದು ದುರಾದೃಷ್ಟಕರ, ಇಂತಹ ಘಟನೆಗಳು ನಿಲ್ಲಬೇಕು, ಎಂದು ಕೇರಳ ಹೈಕೋರ್ಟ್ ಹೇಳಿದೆ.

ಯುವತಿಯೊಬ್ಬಳ ಬಗ್ಗೆ ಅಸಭ್ಯ ಮಾತುಗಳನ್ನಾಡಿದ್ದೇ ಅಲ್ಲದೆ ಅದನ್ನು ವಿರೋಧಿಸಿದ ಆಕೆಯ ತಂದೆ ಮೇಲೆ ಹಲ್ಲೆಗೈದ ಆರೋಪ ಹೊತ್ತ ವ್ಯಕ್ತಿಯೊಬ್ಬನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ವೇಳೆ ಹೈಕೋರ್ಟ್ ಮೇಲಿನಂತೆ ಹೇಳಿದೆ.

ತನ್ನ 14 ವರ್ಷದ ಪುತ್ರಿಯ ಬಗ್ಗೆ ಅಲ್ಲಸಲ್ಲದ ಮಾತುಗಳನ್ನು ಕೇಳಿ ಆಕ್ಷೇಪಿಸಿದ ನಿವೃತ್ತ ಎಸ್ಸೈ ಆಗಿರುವ ವ್ಯಕ್ತಿಯ ಮೇಲೆ ಆರೋಪಿ ಹೆಲ್ಮೆಟ್‍ನಿಂದ ಹಲ್ಲೆಗೈದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

ಯುವತಿಯ ತಂದೆ ತನ್ನ ಮೇಲೆ ಹಾಗೂ ತನ್ನ ಜತೆಗಿದ್ದ ವ್ಯಕ್ತಿಯ ಮೇಲೆ ಹಲ್ಲೆಗೈದಿದ್ದಾರೆಂದು ಆರೋಪಿ ನ್ಯಾಯಾಲಯದ ಮುಂದೆ ಹೇಳಿದಾಗ, ಮಕ್ಕಳ ಬಗ್ಗೆ ಅಸಭ್ಯ ಮಾತುಗಳನ್ನು ಕೇಳಿದಾಗ ಹೆತ್ತವರ ಸಾಮಾನ್ಯ ಪ್ರತಿಕ್ರಿಯೆಯಿದು ಎಂದು ನ್ಯಾಯಾಲಯ ಹೇಳಿತು.

ಪ್ರಕರಣದ ಬಗ್ಗೆ ಪರಾಮರ್ಶಿಸಿ ಹಾಗೂ ಆರೋಪಗಳ ಸ್ವರೂಪವನ್ನು ಗಣನೆಗೆ ತೆಗೆದುಕೊಂಡು  ಅರ್ಜಿದಾರನಿಗೆ ನಿರೀಕ್ಷಣಾ ಜಾಮೀನು ನೀಡದೇ ಇರಲು ನ್ಯಾಯಾಲಯ ನಿರ್ಧರಿಸಿದೆ ಎಂದು ಹೈಕೋರ್ಟ್ ಹೇಳಿದೆ.

ಆರೋಪಿಯು ತನಿಖಾಧಿಕಾರಿ ಮುಂದೆ ಶರಣಾದರೆ ಆತನನ್ನು ಅದೇ ದಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು ಎಂದೂ ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News