ಜನರ ಬಗ್ಗೆ ಪ್ರಧಾನಿ ಕಾಳಜಿ ವಹಿಸುತ್ತಿಲ್ಲ: ರಾಹುಲ್ ಗಾಂಧಿ ಆರೋಪ
Update: 2022-03-24 21:24 IST
ಹೊಸದಿಲ್ಲಿ, ಮಾ. 24: ಪ್ರಧಾನಿ ನರೇಂದ್ರ ಮೋದಿ ಅವರು ಜನರು, ಕಾರ್ಮಿಕರು ಹಾಗೂ ಕೋವಿಡ್ ರೋಗಿಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಉಂಟಾದ ಆರ್ಥಿಕ ಕುಸಿತದಿಂದ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ಭಾರತ ಗಮನಿಸಿದೆ ಎಂದು ಅವರು ವರದಿಯೊಂದನ್ನು ಉಲ್ಲೇಖಿಸಿ ಹೇಳಿದ್ದಾರೆ. ಅಲ್ಲದೆ, ಕೋವಿಡ್ ರೋಗಿಗಳಿಗೆ ಸರಕಾರದ ಆಯುಷ್ಮಾನ್ ಭಾರತ್ ಯೋಜನೆಯಿಂದ ಉಚಿತ ಚಿಕಿತ್ಸೆ ದೊರಕಿಲ್ಲ ಎಂದು ತಿಳಿಸಿದರು. ‘‘ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆಯೇ? ಇಲ್ಲ. ಬಡವರು ಹಾಗೂ ಕಾರ್ಮಿಕರು ಕನಿಷ್ಠ ಆದಾಯ ಪಡೆಯುತ್ತಿದ್ದಾರೆಯೇ? ಇಲ್ಲ. ಮುಳುಗುತ್ತಿರುವ ಸಣ್ಣ ಕೈಗಾರಿಕೆಗಳನ್ನು ರಕ್ಷಿಸಲಾಗುತ್ತಿದೆಯೇ? ಇಲ್ಲ. ಪ್ರಧಾನಿ ಅವರು ಕಾಳಜಿ ವಹಿಸುತ್ತಿಲ್ಲ’’ ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.