ಸಸಿಹಿತ್ಲು ಪ್ರದೇಶವನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ: ಸಚಿವ ಸುನೀಲ್ ಕುಮಾರ್

Update: 2022-03-24 16:03 GMT

ಬೆಂಗಳೂರು, ಮಾ. 24: ‘ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಜೈನಕಾಶಿಯನ್ನು ಕೇಂದ್ರ ಸರಕಾರದ ‘ಜೈನ್ ಸಕ್ರ್ಯೂಟ್'ಗೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜೊತೆಗೆ ಕಾರ್ಕಳ, ಮೂಡಬಿದರೆ ಕಡಲಕೆರೆ, ಸಸಿಹಿತ್ಲು ಕಡಲ ತೀರದಲ್ಲಿ ಸರ್ಫಿಂಗ್ ಕೇಂದ್ರ ಸ್ಥಾಪಿಸಲು ಸರಕಾರ ಕ್ರಮ ವಹಿಸಲಿದೆ' ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪರವಾಗಿ ಸಚಿವ ಸುನೀಲ್ ಕುಮಾರ್ ಉತ್ತರಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಉಮಾನಾಥ್ ಎ.ಕೋಟ್ಯಾನ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘2020ರಲ್ಲಿ ಸಸಿಹಿತ್ಲು ಕಡಲ ತೀರದಲ್ಲಿ ಸರ್ಫಿಂಗ್ ಸ್ಕೂಲ್, ಶೌಚಾಲಯ, ಪಾರ್ಕಿಂಗ್, ಸ್ವಾಗತ ಕಮಾನು, ಪರಗೋಲಾದೊಂದಿಗೆ ವಾಕಿಂಗ್ ಟ್ರ್ಯಾಕ್, ಕಿಯಾಸ್ಕ್‍ಗಳು, ರಸ್ತೆ, ಚರಂಡಿ ಮತ್ತು ಕಾಲುಪಥ ಅಭಿವೃದ್ದಿಗೆ 10 ಕೋಟಿ ರೂ.ವೆಚ್ಚದ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿತ್ತು.

ಆದರೆ, ಸದರಿ ಕಾಮಗಾರಿಗೆ ಸಿಆರ್‍ಝಡ್ ಅನುಮೋದನೆ ದೊರೆತಿಲ್ಲ. ಆದುದರಿಂದ ಸಿಆರ್‍ಝಡ್ ಅನುಮತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿದೆ. ಜೊತೆಗೆ ಮೇಲ್ಕಂಡ ಯೋಜನೆಯನ್ನು ಮಾರ್ಪಡಿಸಿ ಸಸಿಹಿತ್ಲು ಕಡಲ ತೀರದಲ್ಲಿ 5.36 ಕೋಟಿ ರೂ.ವೆಚ್ಚದಲ್ಲಿ ಜೆಎಲ್‍ಆರ್ ಸಂಸ್ಥೆ ವತಿಯಿಂದ ವಿವಿಧ ಪ್ರವಾಸಿ ಸೌಲಭ್ಯಗಳನ್ನು ಒಳಗೊಂಡ ಘಟಕ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ' ಎಂದು ತಿಳಿಸಿದರು.

ಆರಂಭಕ್ಕೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ, ‘ನಾನು ಪ್ರವಾಸೋದ್ಯಮ ಇಲಾಖೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಸಸಿಹಿತ್ಲು ಪ್ರದೇಶದಲ್ಲಿ ಏಷ್ಯಾದಲ್ಲೇ ವಿಶೇಷ. ಕ್ರೀಡೆಗೆ ವಿಫುಲ ಅವಕಾಶಗಳಿವೆ. ಆದುದರಿಂದ ಆ ಪ್ರದೇಶದಲ್ಲಿ ಸರ್ಫಿಂಗ್ ಕೇಂದ್ರ ಸ್ಥಾಪಿಸಬೇಕು' ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News