×
Ad

ಫ್ರಾನ್ಸ್‌ನಲ್ಲಿನ ಕ್ರೀಡಾಕೂಟಕ್ಕೆ ಆಯ್ಕೆ: ಗ್ರಾಮೀಣ ಕ್ರೀಡಾಪಟುವಿಗೆ ನೆರವಿಗೆ ಮನವಿ

Update: 2022-03-24 21:35 IST
 ಮಾಧುರ್ಯ ಶೆಟ್ಟಿ

ಉಡುಪಿ, ಮಾ.24: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಒಡಿಸ್ಸಾದ ಭುವನೇಶ್ವರದಲ್ಲಿ ಇತ್ತೀಚೆಗೆ ನಡೆದ ಸೆಲೆಕ್ಷನ್ ಟ್ರಯಲ್ಸ್‌ನ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದ ಅಜ್ಜರಕಾಡು ಸರಕಾರಿ ಪ್ರೌಢಶಾಲೆಯ 10ನೆ ತರಗತಿ ವಿದ್ಯಾರ್ಥಿನಿ, ಮೂಲತಃ ಹಿಲಿಯಾಣ ಗ್ರಾಮದ ಮಾಧುರ್ಯ ಶೆಟ್ಟಿ, ಫ್ರಾನ್ಸ್‌ನಲ್ಲಿ ಮೇ ತಿಂಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಕೃಷ್ಣಮೂರ್ತಿ ಶೆಟ್ಟಿ ಹಾಗೂ ಪೂರ್ಣಿಮ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಮಾಧುರ್ಯ ಅವರದ್ದು ತೀರಾ ಬಡ ಕುಟುಂಬ. ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು 2.5ಲಕ್ಷ ರೂ. ಹಣದ ಅಗತ್ಯವಿದ್ದು, ದಾನಿಗಳು ಈ ಕ್ರೀಡಾಪಟುವಿಗೆ ಆರ್ಥಿಕ ನೆರವು ನೀಡುವಂತೆ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಚ್.ಲಿಂಗರಾಜು ಸುದ್ದಿಗೋಷ್ಠಿಯಲ್ಲಿಂದು ಮನವಿ ಮಾಡಿದ್ದಾರೆ.

ಇವರು ಪ್ರಾಥಮಿಕ ಶಾಲೆಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡು ವಲಯ, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಛಾಪನ್ನು ಮೂಡಿಸಿದ್ದಾರೆ. ಅಜ್ಜರಕಾಡು ಯುವಜನ ಸೇವಾ ಇಲಾಖೆಯ ಕ್ರೀಡಾ ವಸತಿ ಶಾಲೆಯಲ್ಲಿರುವ ಈಕೆ, ಪ್ರಸ್ತುತ ಕ್ರೀಡಾಶಾಲೆಯ ಅನಂತರಾಮ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. 6ನೇ ತರಗತಿಯಿಂದಲೂ ಶಾಟ್‌ಪುಟ್, ತಟ್ಟೆ ಎಸೆತದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಇವರು, ವಲಯ, ತಾಲೂಕು, ಜಿಲ್ಲಾ ಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

2018ರಲ್ಲಿ ರಾಜ್ಯಮಟ್ಟದ ಅಮೆಚೂರ್ ಅಥ್ಲೆಟಿಕ್ ಮೀಟ್ ಶಾಟ್‌ಪುಟ್ ನಲ್ಲಿ ಚಿನ್ನದ ಪದಕ, 2019ರಲ್ಲಿ ಶಾಟ್‌ಪುಟ್, ಡಿಸ್ಕಸ್ ಥ್ರೋನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡು ಪಂಜಾಬ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ಮೇ 14ರಿಂದ 22ರವರೆಗೆ ಫ್ರಾನ್ಸ್‌ನ ನೋರ್‌ಮ್ಯಾಂಡಿಯಲ್ಲಿ ಜರಗುವ 19ನೆ ಅಂತಾರಾಷ್ಟ್ರೀಯ ಸ್ಕೂಲ್ ಫೆಡರೇಶನ್ ಜಿಮ್‌ನಾಷಿಯಡ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಬಡ ಕುಟುಂಬದ ವಿದ್ಯಾರ್ಥಿನಿಗೆ ಕ್ರೀಡಾಭಿಮಾನಿಗಳು ನೆರವು ನೀಡುವ ಮೂಲಕ ಸಾಧನೆಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಲಾಗಿದೆ. ಕೆನರಾ ಬ್ಯಾಂಕ್ ಶಾಖೆ ಬೆಳ್ವೆ, ಖಾತೆ ಸಂಖ್ಯೆ 0647108056741, ಐಎಫ್‌ಎಸ್‌ಸಿ ಸಂಖ್ಯೆ: ಸಿಎನ್‌ಆರ್‌ಬಿ0000647 ನೆರವು ನೀಡಬಹುದು.

ಸುದ್ದಿಗೋಷ್ಠಿಯಲ್ಲಿ ಹಿಲಿಯಾಣ ಸರಕಾರಿ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಸುಗಂಧಿ, ಅಜ್ಜರಕಾಡು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸಿಂಥಿಯಾ ಕ್ರಾಸ್ತ, ಪೂರ್ಣಿಮ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News