ವಿವೇಕ್‌ ಅಗ್ನಿಹೋತ್ರಿಗೆ ಹೇಳಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾವನ್ನು ಯೂಟ್ಯೂಬ್‌ ನಲ್ಲಿ ಹಾಕಿಸಿ: ಕೇಜ್ರಿವಾಲ್‌

Update: 2022-03-24 17:58 GMT

ಹೊಸದಿಲ್ಲಿ: ಕಾಶ್ಮೀರ್‌ ಫೈಲ್ಸ್‌ಗೆ ತೆರಿಗೆ ವಿನಾಯಿತಿ ನೀಡುವ ಬದಲು ಯೂಟ್ಯೂಬಲ್ಲಿ ಸಿನೆಮಾ ಹಾಕಲಿ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರೀವಾಲ್‌ ಹೇಳಿದ್ದಾರೆ.  ದಿಲ್ಲಿಯ ಸದನದಲ್ಲಿ ಮಾತನಾಡಿರುವ ಅರವಿಂದ್‌ ಕೇಜ್ರೀವಾಲ್‌ ಅವರು, “ದಿ ಕಾಶ್ಮೀರ್‌ ಫೈಲ್ಸ್‌ ಸಿನೆಮಾಗೆ ತೆರಿಗೆ ವಿನಾಯಿತಿ ಕೇಳ್ತಿದ್ದಾರೆ. ಅದರ ಬದಲು ವಿವೇಕ್‌ ಅಗ್ನಿಹೋತ್ರಿಗೆ ಹೇಳಿ ಯೂಟ್ಯೂಬಲ್ಲಿ ಅಪ್ಲೋಡ್‌ ಮಾಡಲು ಹೇಳಿ, ಎಲ್ಲರೂ ಉಚಿತವಾಗಿ ನೋಡಬಹುದು” ಎಂದು ಹೇಳಿದ್ದಾರೆ. 

ಸದ್ಯ, ಕೇಜ್ರೀವಾಲ್‌ ಹೇಳಿಕೆಯ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ.

"ಅವರು ಹೇಳುತ್ತಾರೆ ನಮ್ಮದು ವಿಶ್ವದಲ್ಲೇ ಅತಿದೊಡ್ಡ ಪಕ್ಷವೆಂದು, ಆದರೆ ನಮ್ಮ ಅತೀ ಸಣ್ಣ ಪಕ್ಷ ಎಂದು ನಾನು ಹೇಳುತ್ತೇನೆ. ಆದರೂ ನೀವು ನಮಗೆ ಹೆದರಿದ್ದು ಯಾಕೆ? ಹೇಡಿತನದಿಂದ ಹೆದರಿ ಓಡಿದ್ದೇಕೆ? ನಿಮಗೆ ಧಮ್ಮಿದ್ದರೆ ನಮ್ಮೊಂದಿಗೆ ಚುನಾವಣೆಯಲ್ಲಿ ಸ್ಫರ್ಧಿಸಿ. ಕೆಲವರು ಇಲ್ಲಿ ಕಾಶ್ಮೀರ್‌ ಫೈಲ್ಸ್‌ ಅನ್ನು ಟ್ಯಾಕ್ಸ್‌ ಫ್ರೀ ಮಾಡಿ ಅಂತ ಬೊಬ್ಬೆ ಹಾಕುತ್ತಿದ್ದರು. ಅಲ್ಲಿ ಇನ್ನು ಕೆಲವು ಬಿಜೆಪಿಗರು ಮದ್ಯದ ಅಂಗಡಿಗಳನ್ನು ಬಂದ್‌ ಮಾಡಿ ಅಂತ ಅರಚಾಡುತ್ತಿದ್ದರು. ಅವರಿಗೇ ಗೊತ್ತಿಲ್ಲ, ಇವತ್ತು ಏನು ಕಾಶ್ಮೀರ್‌ ಫೈಲ್ಸ್‌ ಬಗ್ಗೆ ಘೋಷಣೆ ಕೂಗಬೇಕು ಅಂತ. ಸದ್ಯ ಈ ದೇಶದಲ್ಲಿರುವ ಬಿಜೆಪಿಯ ಎಲ್ಲರೂ ಗಲ್ಲಿಗಲ್ಲಿಗೆ ಹೋಗಿ ಸಿನಿಮಾ ಪೋಸ್ಟರ್‌ ಗಳನ್ನು ಅಂಟಿಸುತ್ತಿದ್ದಾರೆ. ಮನೆಗೆ ಹೋಗಿ ಮಕ್ಕಳು ಅಪ್ಪಾ ಇವತ್ತು ಏನು ಮಾಡಿದ್ದೀರಿ ಅಂತ ಕೇಳಿದಾಗ ನಾನು ʼಸಿನಿಮಾ ಪೋಸ್ಟರ್‌ʼ ಅಂಟಿಸಿ ಬಂದೆ ಅನ್ನುವುದಾ?

"8 ವರ್ಷ ಕೇಂದ್ರ ಸರಕಾರ ಚಲಾಯಿಸುತ್ತಿರುವ ಪ್ರಧಾನಿ ಏನೂ ಮಾಡಿಲ್ಲ ಹಾಗಾಗಿ ಅವರೀಗ ವಿವೇಕ್‌ ಅಗ್ನಿಹೋತ್ರಿಯ ಕಾಲಿಗೆ ಬಿದ್ದು ಗೋಳಾಡುತ್ತಿದ್ದಾರೆ. ನೀವು ಟ್ಯಾಕ್ಸ್‌ ಫ್ರೀ ಮಾಡಿ ಎಂದು ಬೊಬ್ಬಿರಿಯುತ್ತಿದ್ದೀರಿ. ಆದರೆ, ಅದರ ಬದಲು ವಿವೇಕ್‌ ಅಗ್ನಿಹೋತ್ರಿಗೆ ಹೇಳಿಸಿ ಅದನ್ನು ಯೂಟ್ಯೂಬ್‌ ನಲ್ಲಿ ಹಾಕಲು ಹೇಳಿ. ಎಲ್ಲರೂ ಒಂದೇ ದಿನದಲ್ಲಿ ಸಿನಿಮಾ ನೋಡುತ್ತಾರೆ. ಮೊನ್ನೆ ಯಾರೋ ಒಬ್ಬರು ಪಾರ್ಕ್‌ ನಲ್ಲಿ ಉಚಿತ ಪ್ರದರ್ಶನ ಮಾಡುತ್ತೇವೆ ಎಂದು ಟ್ವೀಟ್‌ ಮಾಡುವಾಗ ಅಗ್ನಿಹೋತ್ರಿ ಕೂಡಲೇ ಟ್ವಿಟರ್‌ ನಲ್ಲಿ ಅದಕ್ಕೆ ವಿರೋಧ ವ್ಯಕ್ತಪಡಿಸಿ ಹರ್ಯಾಣಾ ಸಿಎಂಗೆ ಟಿಕೆಟ್‌ ಸಹಿತ ಪ್ರದರ್ಶನ ಮಾಡಿಸುವಂತೆ ಹೇಳಿದ್ದ. ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೆಲವರು ಕೋಟ್ಯಂತರ ಹಣ ವಸೂಲಿ ಮಾಡುತ್ತಿದ್ದಾರೆ, ಆದರೆ ನಿಮಗೆ ಅವರು ಪೋಸ್ಟರ್‌ ಅಂಟಿಸುವ ಕೆಲಸ ನೀಡಿದ್ದಾರೆ. ಏನು ಗತಿಕೇಡು ಬಂದಿದೆ ನಿಮಗೆ, ಇನ್ನಾದರೂ ಕಣ್ಣುತೆರೆಯಿರಿ. ನಿಮ್ಮನ್ನು ಮೇಕೆಗಳಂತೆ ನಡೆಸಲಾಗುತ್ತಿದೆ."

ಕೃಷಿ ಕಾಯ್ದೆಗಳನ್ನು ಪರಿಚಯಿಸಿದಾಗ ಮೋದೀಜಿ ಮಾಸ್ಟರ್‌ ಸ್ಟ್ರೋಕ್‌ ವಾಹ್‌ ಮೋದಿ ವಾಹ್‌ ಅಂತ ಟ್ವೀಟ್‌ ಮಾಡಿದ್ರಿ. ಅದನ್ನು ಹಿಂಪಡೆದಾಗಲೂ, ವಾಹ್‌ ಮೋದೀಜಿ ವಾಹ್‌ ಮಾಸ್ಟರ್‌ ಸ್ಟ್ರೋಕ್‌ ಅಂತ ಗುಣಗಾಣ ಮಾಡಿದ್ರಿ. ನಿಮಗೆಲ್ಲಾ ಏನಾಗಿದೆ? ನಿಮ್ಮನ್ನು ಏನು ಮಾಡಿಟ್ಟಿದ್ದಾರೆ? ಬಿಜೆಪಿ ಕಾರ್ಯಕರ್ತರೇ ನೀವು ನನ್ನ ಸಹೋದರರಂತೆ. ದಯವಿಟ್ಟು ನೀವು ನೀವಾಗಿರಿ. ಇನ್ನಾದರೂ ದೇಶದ ಬಗ್ಗೆ ಆಲೋಚನೆ ಮಾಡಿ. ಹಿಟ್ಲರ್‌ ಕೂಡಾ ಇದ್ದ. ಆತ ಏನಿಲ್ಲವೆಂದರೂ ಆತನ ಚಮಚಾಗಳಿಗೆ ಉದ್ಯೋಗ ನೀಡಿದ್ದ. ಇತಿಹಾಸ ನೋಡಿ ಒಮ್ಮೆ. ಆದರೆ ಇವರು ಏನು ಕೊಟ್ಟಿದ್ದಾರೆ ನಿಮಗೆ? ನಿಮ್ಮ ಮಕ್ಕಳಿಗೆ ಉದ್ಯೋಗ? ನಿಮ್ಮ ಮನೆಯ ಆಹಾರಕ್ಕೇನಾದರೂ ವ್ಯವಸ್ಥೆ? ನಿಮ್ಮ ವಿದ್ಯುತ್‌ ಗೆ ಏನಾದರೂ ವ್ಯವಸ್ಥೆ? ನಿಮಗೆ ಕರೆಂಟ್‌ ಫ್ರೀ ನೀಡಬೇಕಾದರೆ ಕೇಜ್ರಿವಾಲ್‌ ಬರಬೇಕಾಗಿದೆ. ದಿಲ್ಲಿಯಲ್ಲಿ 12 ಲಕ್ಷ ಮಂದಿಗೆ ಉದ್ಯೋಗ ನೀಡಿದ್ದೇವೆ. ಶಾಲೆ, ಆಸ್ಪತ್ರೆಗಳನ್ನೆಲ್ಲಾ ಸರಿಪಡಿಸಿದ್ದೇವೆ. ನಾಳೆ ನಿಮ್ಮ ಮನೆಯಲ್ಲಿ ರೋಗ ಬಂದರೂ ಕೇಜ್ರಿವಾಲ್‌ ಸಿಗುತ್ತಾನೆಯೇ ಹೊರತು ಮೋದಿಯಲ್ಲ. ಇನ್ನಾದರೂ ನೀವೆಲ್ಲಾ ಬಿಜೆಪಿ ಬಿಟ್ಟು ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿ" ಎಂದು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News