×
Ad

‘ಸ್ಪೀಕರ್’ ಘನತೆಗೆ ಧಕ್ಕೆಯಾಗದಿರಲಿ

Update: 2022-03-25 00:05 IST

ಸದನದಲ್ಲಿ ಸ್ಪೀಕರ್ ಸ್ಥಾನದಲ್ಲಿ ಕುಳಿತು ವಿಶ್ವೇಶ್ವರ ಹೆಗಡೆ ಕಾಗೇರಿಯವರು ತನ್ನನ್ನು ತಾನು ‘ಆರೆಸ್ಸೆಸ್’ ಎಂದು ಘೋಷಿಸಿ ಹೆಮ್ಮೆ ಪಟ್ಟುಕೊಂಡಿದ್ದಾರೆ ಮತ್ತು ಸಚಿವ ಅಶೋಕ್ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಸ್ಪೀಕರ್ ಕಾಗೇರಿಯವರು ಅಷ್ಟಕ್ಕೇ ಸುಮ್ಮನಿರದೇ, ವಿರೋಧ ಪಕ್ಷದ ನಾಯಕರನ್ನುದ್ದೇಶಿಸಿ ‘ನೀವು ಕೂಡ ಒಂದು ದಿನ ಆರೆಸ್ಸೆಸ್ ಎಂದು ಹೇಳುತ್ತೀರಿ’ ಎಂದು ಕಣಿ ನುಡಿದಿದ್ದಾರೆ. ಬಿಜೆಪಿಯು ಆರೆಸ್ಸೆಸ್‌ನ ರಾಜಕೀಯ ಘಟಕ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಅದನ್ನು ಈವರೆಗೆ ಮುಚ್ಚಿಟ್ಟುಕೊಂಡು ಬರಲಾಗುತ್ತಿತ್ತು. ಅಷ್ಟೇ ಅಲ್ಲ, ಆರೆಸ್ಸೆಸ್ ಕೂಡ ಪದೇ ಪದೇ ‘ನಾವು ಸರಕಾರದಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ’ ಎಂದು ಸಮಜಾಯಿಶಿ ನೀಡುತ್ತಲೂ ಬರುತ್ತಿತ್ತು. ಆದರೆ ಬಿಜೆಪಿ ಸರಕಾರದ ಸೂತ್ರ ಆರೆಸ್ಸೆಸ್ ಕೈಯಲ್ಲಿದೆ ಎನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ. ಬಿಜೆಪಿ ನಾಯಕರು ಕನಿಷ್ಠ ಸದನದೊಳಗೆ ತಾವು ಆರೆಸ್ಸೆಸ್‌ನಿಂದ ಬಂದಿದ್ದೇವೆ ಎಂದು ಹೇಳುವುದಕ್ಕೆ ಮುಜುಗರ ಪಡುವ ಸನ್ನಿವೇಶವಿತ್ತು. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಸಂವಿಧಾನದ ವಿರುದ್ಧ ಹುಂಬ ಧೈರ್ಯ ಪ್ರದರ್ಶಿಸುತ್ತಾ, ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಿದ್ದಾರೆ. ಜೊತೆ ಜೊತೆಗೆ ‘ನಾವು ಆರೆಸ್ಸೆಸ್‌ನಿಂದ ಬಂದಿದ್ದೇವೆ’ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ.

ಇದೀಗ ಸದನದ ಮುಖ್ಯ ಅಧ್ಯಾಪಕನಂತಹ ಸ್ಥಾನದಲ್ಲಿ ಕುಳಿತ ಸ್ಪೀಕರ್ ಕಾಗೇರಿಯವರೂ ‘ನಾನೂ ಆರೆಸ್ಸೆಸ್‌ನಿಂದ ಬಂದಿದ್ದೇನೆ. ನೀವೆಲ್ಲರೂ ಆರೆಸ್ಸೆಸ್‌ನ್ನು ಒಪ್ಪಿಕೊಳ್ಳಬೇಕು’ ಎಂಬರ್ಥದ ಮಾತುಗಳನ್ನಾಡಿರುವುದು ವಿಧಾನಸಭೆಯ ಘನತೆಗೆ ಮಾಡಿದ ಧಕ್ಕೆಯಾಗಿದೆ. ಆರೆಸ್ಸೆಸ್ ದೇಶಪ್ರೇಮಿ ಸಂಘಟನೆ ಎಂದು ಬಿಜೆಪಿ ನಂಬಿದೆ ಮತ್ತು ಆರೆಸ್ಸೆಸ್‌ನ ದೇಶಪ್ರೇಮದ ವ್ಯಾಖ್ಯಾನವೇನು ಎನ್ನುವುದು ಗುಟ್ಟಾಗಿಯೇನೂ ಇಲ್ಲ. ಸಂವಿಧಾನದ ಬಗ್ಗೆ, ರಾಷ್ಟ್ರಧ್ವಜದ ಬಗ್ಗೆ ಅದು ಎಷ್ಟರಮಟ್ಟಿಗೆ ಗೌರವವನ್ನು ಹೊಂದಿದೆ ಎನ್ನುವುದು ಪ್ರಶ್ನಾರ್ಹವಾಗಿದೆ. ಕೆಲವೇ ದಿನಗಳ ಹಿಂದೆ ಕಲ್ಲಡ್ಕದ ಆರೆಸ್ಸೆಸ್‌ನ ರಾಜ್ಯ ನಾಯಕರೊಬ್ಬರು ‘ರಾಷ್ಟ್ರ ಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಲಿದೆ’ ಎಂದು ಹೇಳಿಕೆ ನೀಡಿ, ರಾಷ್ಟ್ರಧ್ವಜವನ್ನು ಅವಮಾನಿಸಿದ್ದರು. ಇಂದು ಕಾಗೇರಿಯವರು ‘ನಾನು ಆರೆಸ್ಸೆಸ್‌ನಿಂದ ಬಂದಿದ್ದೇನೆ’ ಎಂದು ಸ್ಪೀಕರ್ ಸ್ಥಾನದಲ್ಲಿ ಕುಳಿತು ಹೇಳಿಕೆ ನೀಡುವ ಮೂಲಕ, ಕಲ್ಲಡ್ಕದ ಆರೆಸ್ಸೆಸ್ ನಾಯಕರ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿದಂತಾಗಿದೆ. ಸದನದಲ್ಲಿ ಚರ್ಚೆ ವಿಪರೀತಕ್ಕೆ ಹೋಗಿ ‘ಆರೆಸ್ಸೆಸ್‌ನವರು ಸಂವಿಧಾನದ ವಿರುದ್ಧ ಹಲವು ಬಾರಿ ಪ್ರತಿಭಟನೆಗಳನ್ನು ಮಾಡಿದ್ದಾರೆ. ಸಂವಿಧಾನವನ್ನು ದಹಿಸಿದ್ದಾರೆ’ ಎಂದು ವಿರೋಧ ಪಕ್ಷ ನುಡಿದಾಗ, ‘ನೀವು ಎಲ್ಲಿಂದ ಎಲ್ಲಿಗೋ ಹೋಗುತ್ತಿದ್ದೀರಿ, ನಿಮ್ಮ ರಾಜಕೀಯವಿದ್ದರೆ ಹೊರಗೆ ಮಾತನಾಡಿಕೊಳ್ಳಿ’ ಎಂದು ಕಾಗೇರಿ ಸಲಹೆ ನೀಡಿ, ವಿಷಯಾಂತರ ಮಾಡಿದರು. ‘ಆರೆಸ್ಸೆಸ್‌ನ್ನು ಹೊಗಳಿ’ ತನ್ನ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದ್ದು ಕಾಗೇರಿಯವರು. ನಿಜಕ್ಕೂ ಆರೆಸ್ಸೆಸ್‌ನ್ನು ಹೊಗಳುವುದಿದ್ದರೆ ಆ ಸ್ಥಾನದಿಂದ ಕೆಳಗಿಳಿಯಬೇಕಾಗಿತ್ತು. ಸ್ವತಃ ಅವರೇ ವೈಯಕ್ತಿಕ ರಾಜಕೀಯವನ್ನು ಮಾತನಾಡಿ, ಬಳಿಕ ಉಳಿದವರಿಗೆ ಸಲಹೆ ನೀಡಿದರೆ ಅದರಿಂದ ಏನು ಪ್ರಯೋಜನ?

‘ಇಂದು ಎಲ್ಲೆಡೆ ಆರೆಸ್ಸೆಸ್‌ನಿಂದ ಬಂದ ನಾಯಕರೇ ಆಳುತ್ತಿದ್ದಾರೆ’ ಎಂದು ಸಚಿವ ಅಶೋಕ್ ಹೇಳುತ್ತಿದ್ದಾರೆ. ಸರಿ, ಇದರಿಂದ ದೇಶಕ್ಕೆ ಎಷ್ಟರ ಮಟ್ಟಿಗೆ ಪ್ರಯೋಜನವಾಗಿದೆ? ದೇಶ ಜಾತ್ಯತೀತ ನಾಯಕರ ಕೈಯಿಂದ ಆರೆಸ್ಸೆಸ್‌ನಿಂದ ಬಂದ ನಾಯಕರ ಕೈಗೆ ಜಾರುತ್ತಿರುವುದಕ್ಕೂ, ವರ್ಷದಿಂದ ವರ್ಷಕ್ಕೆ ದೇಶ ಅಭಿವೃದ್ಧಿಯಲ್ಲಿ ಹಿಂದೆ ಸರಿಯುತ್ತಿರುವುದಕ್ಕೂ ಸಂಬಂಧವಿದೆ ಎನ್ನುವುದನ್ನು ಅಶೋಕ್ ಅವರೇ ಪರೋಕ್ಷವಾಗಿ ನುಡಿಯುತ್ತಿದ್ದಾರೆ. ಇತ್ತೀಚಿನವರೆಗೂ ಆರೆಸ್ಸೆಸ್ ಮುಖ್ಯ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತಿರಲಿಲ್ಲ. ಕೆಲವು ದೇಶಪ್ರೇಮಿ ಕಾರ್ಯಕರ್ತರು ಬಲವಂತವಾಗಿ ಆರೆಸ್ಸೆಸ್ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಕ್ಕಾಗಿ ಸುಮಾರು 20 ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆಯಬೇಕಾಗಿ ಬಂತು. ಆರೆಸ್ಸೆಸ್‌ನೊಳಗಿರುವ ನಾಯಕರು ಪದೇ ಪದೇ ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಾ, ಸಂವಿಧಾನವನ್ನು ಅವಮಾನಿಸಿದ್ದಾರೆ.

ದಲಿತರ ಮೀಸಲಾತಿಯ ಬಗ್ಗೆ ಆಕ್ಷೇಪಗಳನ್ನು ನುಡಿಯುತ್ತಾ ಜಾತಿ ಶೋಷಣೆಯನ್ನು ಸಮರ್ಥಿಸಿದ್ದಾರೆ. ಮಹಾತ್ಮಾಗಾಂಧೀಜಿಯನ್ನು ಕೊಂದ ನಾಥೂರಾಂಗೋಡ್ಸೆ ಆರೆಸ್ಸೆಸ್ ಚಿಂತನೆಯ ಸಮರ್ಥಕನಾಗಿದ್ದ. ಈತ ಸ್ವತಂತ್ರ ಭಾರತದ ಮೊತ್ತ ಮೊದಲ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿದ್ದಾನೆ. ಮಾಲೆಗಾಂವ್ ಸ್ಫೋಟ, ಅಜ್ಮೀರ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಂತಹ ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾದ ಆರೋಪ ಹೊತ್ತವರೆಲ್ಲ ಆರೆಸ್ಸೆಸ್ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ. ಆರೆಸ್ಸೆಸ್‌ನ ವಿರುದ್ಧ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಇಂದು ಬಿಜೆಪಿಯವರು ಹೆಮ್ಮೆ ಪಡುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರು ಆರೆಸ್ಸೆಸ್‌ನ್ನು ನಿಷೇಧಿಸಿದ್ದರು. ಪಟೇಲ್ ನಿಷೇಧಿಸಿದ ಸಂಘಟನೆಯೊಂದರ ಹಿನ್ನೆಲೆಯಿಂದ ಬಂದಿದ್ದೇನೆ ಎಂದು ಹೇಳಲು ಹೆಮ್ಮೆ ಪಡುವ ಸ್ಪೀಕರ್‌ನ ಮೂಲಕ ಸದನ ಮುನ್ನಡೆಯುತ್ತದೆ ಎನ್ನುವುದು ವಿಧಾನಸಭೆಯ ದುರದೃಷ್ಟವೇ ಸರಿ.

ಈ ದೇಶದಲ್ಲಿ ಎಲ್ಲ ಉನ್ನತ ಸ್ಥಾನಗಳನ್ನು ಆರೆಸ್ಸೆಸ್‌ನಿಂದ ಬಂದ ಮುಖಂಡರು ಅಲಂಕರಿಸುತ್ತಿದ್ದಾರೆ ಎನ್ನುವುದು ಆರೆಸ್ಸೆಸ್‌ನ ಹಿರಿಮೆಯನ್ನು ಹೇಳುವುದಿಲ್ಲ. ಅದು ಈ ದೇಶ ಯಾವ ದಿಕ್ಕಿಗೆ ಜಾರುತ್ತಿದೆ ಎನ್ನುವುದನ್ನು ಹೇಳುತ್ತದೆ. ನೆಹರೂ, ಅಂಬೇಡ್ಕರ್, ಗಾಂಧಿ, ಪಟೇಲರಂತಹ ನಾಯಕರಿಂದ ರೂಪುಗೊಂಡ ಭಾರತ ಇದು. ನೆಹರೂರಂತಹ ನಾಯಕರು ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದವರು ಮಾತ್ರವಲ್ಲ, ತಮ್ಮ ಕುಟುಂಬದ ಸಕಲ ಸಂಪತ್ತನ್ನೂ ಆ ಹೋರಾಟಕ್ಕೆ ಅರ್ಪಿಸಿದವರು. ಅವರ ತಂದೆಯೂ ಸ್ವಾತಂತ್ರ ಹೋರಾಟಗಾರರೇ ಆಗಿದ್ದರು. ಅಂತಹ ನೆಹರೂ ಅವರನ್ನು ವಿಶ್ವ ಇಂದಿಗೂ ಗೌರವಿಸುತ್ತಿದೆ. ಭಾರತವನ್ನು ನೆಹರೂ ಆಳಿದ ದೇಶವೆಂದು ವಿಶ್ವ ಗೌರವಿಸುತ್ತಿದೆಯೇ ಹೊರತು, ದೇಶಕ್ಕಾಗಿ ಎಂದೂ ಹೋರಾಡದ, ಯಾವ ಸ್ವಾತಂತ್ರ ಹೋರಾಟದ ಹಿನ್ನೆಲೆಯೂ ಇಲ್ಲದ ಆರೆಸ್ಸೆಸ್ ನಾಯಕರ ದೇಶವೆಂದು ಗುರುತಿಸುವುದಿಲ್ಲ. ಆರೆಸ್ಸೆಸ್‌ನ್ನು ವಿಶ್ವ ಯಾಕೆ ನೆನೆಯುತ್ತಿದೆಯೆಂದರೆ, ಗಾಂಧಿಯ ರಕ್ತದ ಕಳಂಕ ಅದರ ಮೇಲಿದೆ ಎನ್ನುವ ಕಾರಣಕ್ಕೆ. ಇಂತಹ ಆರೆಸ್ಸೆಸ್ ಕೈಗೆ ಭಾರತ ಜಾರುತ್ತಿರುವುದಕ್ಕಾಗಿ ಇಡೀ ವಿಶ್ವ ಮರುಗುತ್ತಿದೆ. ಆರೆಸ್ಸೆಸ್ ದೇಶಾದ್ಯಂತ ಗಟ್ಟಿಯಾಗುತ್ತಿದ್ದಂತೆಯೇ ಇಲ್ಲಿ ಜಾತೀಯತೆ, ಕೋಮುಗಲಭೆ ಹೆಚ್ಚಾಗುತ್ತಿವೆೆ. ಶಿಕ್ಷಣ ಉಳ್ಳವರ ಸೊತ್ತಾಗುತ್ತಿದೆ. ಮನುವಾದ ಬೆಳೆಯುತ್ತಿದೆ. ದೇಶದ ಅಭಿವೃದ್ಧಿಗೆ ಭಾರೀ ಹಿನ್ನಡೆಯಾಗುತ್ತಿದೆ. ಇವೆಲ್ಲಕ್ಕೂ ಸ್ಪೀಕರ್ ಕಾಗೇರಿಯವರು ಹೆಮ್ಮೆ ಪಡುತ್ತಿದ್ದಾರೆ ಎಂದು ನಾಡಿನ ಜತೆ ಭಾವಿಸಬೇಕಾಗುತ್ತದೆ. ತಮ್ಮ ಮಾತಿಗಾಗಿ ಸ್ಪೀಕರ್ ಸದನದ ಕ್ಷಮೆಯಾಚಿಸಿ, ಅದರ ಘನತೆ, ಗೌರವವನ್ನು ಉಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News