×
Ad

ಕಾಶ್ಮೀರದ ಮಾನವ ಹಕ್ಕು ಹೋರಾಟಗಾರ ಖುರ್ರಮ್ ಪರ್ವೇಝ್ ಕಸ್ಟಡಿ 50 ದಿನ ವಿಸ್ತರಣೆ

Update: 2022-03-25 23:43 IST
Photo: PTI

ಹೊಸದಿಲ್ಲಿ, ಮಾ. 25: ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾನವ ಹಕ್ಕು ಹೋರಾಟಗಾರ ಖುರ್ರಮ್ ಪರ್ವೇಜ್ ಅವರ ಬಂಧನದ ಕಾಲಾವಧಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯ ಗುರುವಾರ 50 ದಿನ ವಿಸ್ತರಿಸಿದೆ. ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಮುನೀರ್ ಅಹ್ಮದ್ ಕಟಾರಿಯಾ ಹಾಗೂ ಅರ್ಶಿದ್ ಅಹ್ಮದ್ ಟೋಂಚ್ ಅವರ ಕಸ್ಟಡಿಯನ್ನೂ ನ್ಯಾಯಾಲಯ ವಿಸ್ತರಿಸಿದೆ. ಪರ್ವೇಝ್ ಅವರನ್ನು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ನವೆಂಬರ್ 22ರಂದು ಬಂಧಿಸಲಾಗಿತ್ತು. 

ಕ್ರಿಮಿನಲ್ ಸಂಚು ಹಾಗೂ ಸರಕಾರದ ವಿರುದ್ಧ ಸಮರ ಸಾರುತ್ತಿದ್ದ ಆರೋಪವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅವರ ಮೇಲೆ ಹೊರಿಸಿತ್ತು. ಪರ್ವೇಝ್ ಅವರು ಶ್ರೀನಗರಲ್ಲಿರುವ ಲಾಭ ರಹಿತ ಅಭಿಯಾನ ಹಾಗೂ ಪ್ರತಿಪಾದಕ ಸಂಘಟನೆಗಳ ಒಕ್ಕೂಟವಾಗಿರುವ ಜಮ್ಮು ಕಾಶ್ಮೀರ ಕೊಲೀಶನ್ ಆಫ್ ಸಿವಿಲ್ ಸೊಸೈಟಿಗೆ ಸೇರಿದವರು. ಪಾಕಿಸ್ತಾನ ಉಗ್ರಗಾಮಿ ಗುಂಪಿನ ಕಾರ್ಯಕರ್ತರೊಂದಿಗೆ ಪರ್ವೇಝ್ ಅವರು ಸಂಪರ್ಕ ಇರಿಸಿಕೊಂಡಿದ್ದರು.

ಈ ಕಾರ್ಯಕರ್ತರು ಉಗ್ರರ ಗುಂಪುಗಳಿಗೆ ಬೇಕಾದ ವಸ್ತುಗಳನ್ನು ಪೂರೈಸುತ್ತಿದ್ದರು ಎಂದು ಎನ್ಐಎಯ ಅಧಿಕಾರಿಗಳು ಆರೋಪಿಸಿದ್ದಾರೆ.

ಪ್ರಕರಣದಲ್ಲಿ ತನಿಖೆಯ ಅವಧಿ ವಿಸ್ತರಿಸುವಂತೆ ಕೋರಿ ಎನ್ಐಎ ಸಲ್ಲಿಸಿದ ಮನವಿಯನ್ನು ಗುರುವಾರ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರು ಪರ್ವೇಝ್ ಬಂಧನದ ಅವಧಿಯನ್ನು 50 ದಿನಗಳ ಕಾಲ ವಿಸ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News