ಭಾರತದಲ್ಲಿ 20 ಸಾವಿರ ಮಕ್ಕಳು ಬೀದಿ ಬದಿಯಲ್ಲಿ: ಎನ್ಸಿಪಿಸಿಆರ್ ವರದಿ

Update: 2022-03-27 17:22 GMT

ಹೊಸದಿಲ್ಲಿ, ಮಾ. 25: ದೇಶದಾದ್ಯಂತ ಇದುವರೆಗೆ ಸುಮಾರು 20 ಸಾವಿರ ಬೀದಿ ಬದಿ ಮಕ್ಕಳನ್ನು ಗುರುತಿಸಲಾಗಿದ್ದು, ಇದೀಗ ಅವರಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್) ದ ಅಧ್ಯಕ್ಷರಾದ ಪ್ರಿಯಾಂಕಾ ಕಾನೂಂಗೊ ತಿಳಿಸಿದ್ದಾರೆ.

  ಭಾರತದಲ್ಲಿ ಬೀದಿ ಬದಿ ಮಕ್ಕಳ ಸ್ಥಿತಿ ಗತಿ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಬೀದಿ ಬದಿ ಮಕ್ಕಳ ಮಾಹಿತಿ ಅಪ್ಲೋಡ್ ಮಾಡಲು, ಅವರನ್ನು ಪತ್ತೆ ಹಚ್ಚಲು ಹಾಗೂ ಅವರ ಪುನರ್ವಸತಿ ಕೈಗೊಳ್ಳಲು ಸಾಧ್ಯವಾಗುವಂತೆ ‘ಬಾಲ್ ಸ್ವರಾಜ್’ ವೆಬ್ ಪೋರ್ಟಲ್ ಆರಂಭಿಸಲಾಗಿದೆ ಎಂದು ಹೇಳಿದರು.

ಬೀದಿ ಬದಿ ಮಕ್ಕಳ ಗುರುತಿಸುವಿಕೆ ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶ ಹಾಗೂ ಪಶ್ಚಿಮಬಂಗಾಳದ ಕೆಲವು ಭಾಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ದಿಲ್ಲಿ ಹಾಗೂ ಮಹಾರಾಷ್ಟ್ರ ಸರಕಾರಗಳು ಏನನ್ನೂ ಮಾಡುತ್ತಿಲ್ಲ ಎಂದರು.

 ಬೀದಿ ಬದಿ ಮಕ್ಕಳನ್ನು ಮೂರು ಪ್ರಕಾರಗಳಲ್ಲಿ ಗುರುತಿಸಲಾಗಿದೆ. ಮನೆ ಬಿಟ್ಟು ಓಡಿ ಬಂದಿರುವ ಮಕ್ಕಳು, ಕುಟುಂಬದ ಜತೆಯೇ ಬೀದಿ ಬದಿ ವಾಸಿಸುತ್ತಿರುವ ಮಕ್ಕಳು, ಕೊಳಗೇರಿ ಪ್ರದೇಶದ ಪಕ್ಕದ ಬೀದಿಯಲ್ಲಿ ವಾಸವಾಗಿರುವ ಮಕ್ಕಳು. 3ನೇ ಪ್ರಕಾರದ ಮಕ್ಕಳು ಹಗಲು ಪೂರ್ತಿ ಬೀದಿಯಲ್ಲೇ ಇರುತ್ತಾರೆ. ರಾತ್ರಿ ಮನೆಗೆ ಹೋಗುತ್ತಾರೆ.

ಬೀದಿ ಬದಿ ಮಕ್ಕಳ ಪತ್ತೆ ಹಾಗೂ ಅವರ ಪುನರ್ವಸತಿ ಕುರಿತಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಇಂತಹ ಮಕ್ಕಳ ಪುನರ್ವಸತಿಗೆ ಸಲಹೆ ನೀಡುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಕುರಿತು ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News