ರಾಜಸ್ಥಾನ: ಕಾಂಗ್ರೆಸ್ ಶಾಸಕನ ಪುತ್ರ, ಇತರ ನಾಲ್ವರಿಂದ ಅಪ್ರಾಪ್ತೆಯ ಅತ್ಯಾಚಾರ ಆರೋಪ; ಪ್ರಕರಣ ದಾಖಲು

Update: 2022-03-27 17:32 GMT

ಜೈಪುರ, ಮಾ. 25: ರಾಜಸ್ಥಾನದ ದೌಸಾ ಜಿಲ್ಲೆಯ 15 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪದಲ್ಲಿ ಕಾಂಗ್ರೆಸ್ ಶಾಸಕನ ಪುತ್ರ ಹಾಗೂ ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಪ್ರಕರಣದ ಪ್ರಧಾನ ಆರೋಪಿ ಆಲ್ವಾರ್ ಜಿಲ್ಲೆಯ ರಾಜಗಢ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೊಹಾರಿ ಲಾಲ್ ಮೀನಾ ಅವರ ಪುತ್ರ ದೀಪಕ್ ಮೀನಾ ಎಂದು ಪೊಲೀಸರು ಗುರುತಿಸಿದ್ದಾರೆ.

ಸಾಮೂಹಿಕ ಅತ್ಯಾಚಾರದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗುವುದು ಎಂದು ಬೆದರಿಸಿ ಸಂತ್ರಸ್ತೆಯಲ್ಲಿ 15 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣಗಳ ಬೇಡಿಕೆ ಇರಿಸಿದ್ದ ಆರೋಪಕ್ಕೆ ಸಂಬಂಧಿಸಿ ಐವರಲ್ಲಿ ವಿವೇಕ್ ಶರ್ಮಾ ಎಂಬಾತನ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ದೌಸಾ ಜಿಲ್ಲೆಯ ಮಂಡವಾರ್ ಪೊಲೀಸ್ ಠಾಣೆಯ ಎಸ್ಎಚ್ಒ ನಾಥು ಲಾಲ್ ಹೇಳಿದ್ದಾರೆ.

 ಅಪ್ರಾಪ್ತೆಯ ಕುಟುಂಬದ ಸದಸ್ಯರು ಸಲ್ಲಿಸಿದ ದೂರಿನ ಆಧಾರದಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಬಾಲಕಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಘಟನೆ ಫೆಬ್ರವರಿಯಲ್ಲಿ ನಡೆದಿದೆ. ಆರೋಪಿಗಳು ಬಾಲಕಿಯನ್ನು ಮಹವಾ-ಮಂಡವಾರ್ನ ಹೊಟೇಲ್ ಕರೆದೊಯ್ದು ಅಪರಾಧ ಎಸಗಿದ್ದಾರೆ ಎಂದು ನಾಥು ಲಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News