ಸುಪ್ರೀಂಕೋರ್ಟ್ ಮೂಲಭೂತ ಹಕ್ಕು ರಕ್ಷಿಸಲಿದೆ: ಹಿಜಾಬ್ ಬಗ್ಗೆ 'ವಿಸಿಕೆ' ಸಂಸ್ಥಾಪಕ ತೋಳ್ ತಿರುಮಾವಳವನ್ ವಿಶ್ವಾಸ

Update: 2022-03-28 03:06 GMT

ಕೊಯಮತ್ತೂರು: ಕರ್ನಾಟಕದಲ್ಲಿ ಹಿಜಾಬ್ ನಿಷೇಧದ ಸಂಬಂಧ ರಾಜ್ಯ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಉಲ್ಲೇಖಿಸಿದ ʼವಿಸಿಕೆʼ ಸಂಸ್ಥಾಪಕ ತೋಳ್ ತಿರುಮಾವಳವನ್ ನಾಗರಿಕರ ಮೂಲಭೂತ ಹಕ್ಕುಗಳನ್ನು ಸುಪ್ರೀಂಕೋರ್ಟ್ ರಕ್ಷಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ತೌಹೀದ್ ಜಮಾಅತ್ ಆಯೋಜಿಸಿದ್ದ, ಪವಿತ್ರ ಕುರ್‌ ಆನ್ ಗ್ರಂಥದ ತಮಿಳು ಭಾಷಾಂತರವನ್ನು ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.‌

"ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿರುವ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಅಂತಿಮವಲ್ಲ. ಕೆಲ ಮುಸ್ಲಿಂ ಸಂಘಟನೆಗಳು, ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿವೆ. ನಾಗರಿಕರ ಮೂಲಭೂತ ಹಕ್ಕುಗಳನ್ನು ಸುಪ್ರೀಂಕೋರ್ಟ್ ರಕ್ಷಿಸುತ್ತದೆ ಎಂಬ ನಿರೀಕ್ಷೆ ನಮ್ಮದು" ಎಂದು ಹೇಳಿದರು.

"ಸಮಾಜದಲ್ಲಿ ಕೋಮು ಸಾಮರಸ್ಯ ರಕ್ಷಿಸುವ ಅಗತ್ಯವಿದೆ" ಎಂದು ಪ್ರತಿಪಾದಿಸಿದ ಅವರು, ದ್ವೇಷ ರಾಜಕಾರಣದಲ್ಲಿ ಷಾಮೀಲಾಗಿರುವ ಪಕ್ಷ ಅಥವಾ ಸಂಘಟನೆಯನ್ನು ಗುರುತಿಸಿ, ದೂರ ಮಾಡಿ ಎಂದು  ಕರೆ ನೀಡಿದರು.

"ಇತ್ತೀಚೆಗೆ ನಡೆದಿರುವ ಕೊಯಮತ್ತೂರು ಚುನಾವಣೆಯಲ್ಲಿ ಬಿಜೆಪಿ ಮತಗಳಿಕೆ ಕುಸಿದಿರುವುದು ರಾಜ್ಯದಲ್ಲಿ ಪಕ್ಷಕ್ಕೆ ಹೇಗೆ ಹಿನ್ನಡೆಯಾಗಿದೆ ಎನ್ನುವುದಕ್ಕೆ ಸಾಕ್ಷಿ" ಎಂದು ಚಿದಂಬರಂ ಸಂಸದರೂ ಆಗಿರುವ ಅವರು ನುಡಿದರು.

ತೌಹೀದ್ ಜಮಾಅತ್‍ನ ಭಾರತ ಅಧ್ಯಕ್ಷ ಎಸ್.ಎಂ.ಬಕ್ಕರ್ ಅವರೂ ಸಮಾರಂಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News