ರಂಗಭೂಮಿ ದ್ವೇಷಾಸೂಯೆಗಳ ವಿರುದ್ಧ ಅಭಿವ್ಯಕ್ತಿಯಾಗಲಿ

Update: 2022-03-28 09:49 GMT

ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ವಾಣಿಜ್ಯೀಕರಣ ಗೊಳಿಸುವ ವಿದ್ಯುನ್ಮಾನ ಮಾಧ್ಯಮಗಳ ನಿರಂತರ ಪ್ರಯತ್ನಗಳ ನಡುವೆಯೇ, ರಂಗಭೂಮಿಯ ಸೃಜನಶೀಲ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾದ ಸನ್ನಿವೇಶ ಎದುರಾಗಿದೆ. ಹಾಗೆಯೇ ರಂಗಭೂಮಿಯ ಮೂಲಕ ಸಾಮಾಜಿಕ ಮನ್ವಂತರವನ್ನು ಸಾಧಿಸುವ ಪ್ರಯತ್ನಗಳೂ ಸಾಗಬೇಕಿದೆ.

ಬದಲಾದ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಗಳಲ್ಲಿ, ಪ್ರತಿ ಕ್ಷಣದ ಸಾಮಾಜಿಕ ಕ್ಷೋಭೆ ಮತ್ತು ಸಾಂಸ್ಕೃತಿಕ ಆತಂಕಗಳ ನಡುವೆ, ಮಾನವ ಸಮಾಜದ ಒಳಬೇಗುದಿಯನ್ನು, ಹರ್ಷೋಲ್ಲಾಸಗಳನ್ನು ಮತ್ತು ಸುಪ್ತ ಭಾವನೆಗಳನ್ನು ಅಂಗಿಕ ಭಾವಾಭಿನಯದ ಮೂಲಕ ಅಭಿವ್ಯಕ್ತಗೊಳಿಸುವ ಒಂದು ಸಾಂಸ್ಕೃತಿಕ ವಾಹಿನಿಯಾಗಿ ರಂಗಭೂಮಿ ಇಂದು ತನ್ನ ಸಾಮಾಜಿಕ-ನೈತಿಕ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಜಗವೇ ನಾಟಕರಂಗ ಎಂದು ಹೇಳುತ್ತಲೇ ಜನಸಾಮಾನ್ಯರ ನಿತ್ಯ ಬದುಕಿನ ಆಗುಹೋಗುಗಳನ್ನು ಪ್ರಾಕೃತಿಕ ರಂಗಭೂಮಿಯಂತೆ ಭಾವಿಸಿದ ಒಂದು ಹಿರಿಯ ತಲೆಮಾರಿನ ಆಶಯಗಳು ಹಲವು ರೀತಿಗಳಲ್ಲಿ, ಹಲವು ಮಜಲುಗಳಿಂದ, ಹಲವು ಆಯಾಮಗಳಲ್ಲಿ ಮಣ್ಣುಗೂಡುತ್ತಿರುವ ದುರಿತ ಕಾಲದಲ್ಲಿ ರಂಗಭೂಮಿ ತನ್ನೆಲ್ಲಾ ಭಾವಾಭಿಲಾಷೆಗಳನ್ನು ಹೊತ್ತು ಸಮಾಜವನ್ನು ಸರಿದಿಕ್ಕಿನಲ್ಲಿ ಕೊಂಡೊಯ್ಯುವ ಗುರುತರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಿದೆ.

ಆಧುನಿಕ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಪೀಡಿತ ಸಮಾಜ ಎಷ್ಟೇ ತನ್ನ ಪರಂಪರೆಯ ಬೇರುಗಳನ್ನು ಸಡಿಲಗೊಳಿಸುತ್ತಿದ್ದರೂ, ಇಂದಿಗೂ ಸಹ ಸಮಾಜದ ತಳಮಟ್ಟದಲ್ಲಿನ ಮನಸ್ಸುಗಳು ಒಂದು ಬದಲಾವಣೆಗಾಗಿ ತುಡಿಯುತ್ತಲೇ ಇವೆ, ಹಾಗೆಯೇ ಮನ್ವಂತರದ ಹಾದಿಗಳಿಗೆ ಮಿಡಿಯುತ್ತಲೇ ಇವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಬಂಡವಾಳಶಾಹಿ ವ್ಯವಸ್ಥೆ ಮತ್ತು ಜಾಗತಿಕ ಹಣಕಾಸು ಬಂಡವಾಳದ ಸಾಮ್ರಾಜ್ಯ ಎಷ್ಟೇ ವಿಲಾಸಿ ಜಗತ್ತನ್ನು ನಿರ್ಮಿಸಲೆತ್ನಿಸುತ್ತಿದ್ದರೂ, ಪ್ರತಿಯೊಂದು ಭವ್ಯ ಮಹಲುಗಳ ಹಿಂದೆ ಒಂದು ಜೋಪಡಿಯಂತೂ ಇದ್ದೇ ಇರುತ್ತದೆ. ಸಮಾಜದ ತಳಮಟ್ಟದ ಜನಸಮುದಾಯಗಳು ಎದುರಿಸುತ್ತಿರುವ ನಿತ್ಯ ಬದುಕಿನ ಪ್ರಶ್ನೆಗಳು ಹಸಿವು, ನಿರುದ್ಯೋಗ, ಅನಕ್ಷರತೆ, ಅಶುಚಿತ್ವ, ಅನಾರೋಗ್ಯ, ಅಪೌಷ್ಟಿಕತೆ ಮತ್ತು ವಿವಿಧ ರೀತಿಯ ಅಸಮಾನತೆಗಳನ್ನು ಎದುರಿಸುತ್ತಲೇ ಇದೆ. ಈ ಜ್ವಲಂತ ಸಮಸ್ಯೆಗಳಿಗೆ ಬಂಡವಾಳಶಾಹಿ ವ್ಯವಸ್ಥೆಯಾಗಲೀ, ನವ ಉದಾರವಾದದ ಡಿಜಿಟಲ್ ಯುಗವಾಗಲೀ ಪರಿಹಾರಗಳನ್ನು ಸೂಚಿಸುವುದಿಲ್ಲ. ಬದಲಾಗಿ, ಈ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸುವಂತೆ ಮಾಡಲು ಸಮಾಜಘಾತುಕ ಶಕ್ತಿಗಳಿಗೆ ಪ್ರೇರಣೆ, ಪ್ರೋತ್ಸಾಹ ಮತ್ತು ಉತ್ತೇಜನ ನೀಡುತ್ತದೆ. ಮಾನವ ಸಮಾಜ ನಿರಂತರವಾಗಿ ಉತ್ಪಾದಿಸುತ್ತಲೇ ಇರುವ ವಾಣಿಜ್ಯ ಮೌಲ್ಯದ ಸರಕುಗಳೊಂದಿಗೆ, ಮಾನವನ ಶ್ರಮ, ಶ್ರಮಶಕ್ತಿ ಮತ್ತು ಶ್ರಮದ ಎಲ್ಲ ಮಾರ್ಗಗಳನ್ನೂ ವಾಣಿಜ್ಯೀಕರಿಸುವ ಮೂಲಕ, ಕಾಪೋರೇಟ್ ಕೇಂದ್ರಿತ ಮಾರುಕಟ್ಟೆ ವ್ಯವಸ್ಥೆ ಖುದ್ದು ಮನುಷ್ಯನನ್ನೇ ಒಂದು ವಿನಿಮಯ ಯೋಗ್ಯ ಸರಕಾಗಿ ಪರಿವರ್ತಿಸಿಬಿಟ್ಟಿದೆ. ಈ ಆಧುನಿಕ ಹರಾಜು ಮಾರುಕಟ್ಟೆಯಲ್ಲಿ ಮನುಷ್ಯನ ಅಸ್ಮಿತೆ, ಅನನ್ಯತೆ ಮತ್ತು ಅಸ್ತಿತ್ವಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯೀಕರಣಕ್ಕೊಳಗಾಗಿ, ಬಿಕರಿಯಾಗುವ ವಸ್ತುಗಳಾಗಿ ಬಿಡುತ್ತವೆ.

ಈ ಕ್ರೂರ ವ್ಯವಸ್ಥೆಯೊಳಗಿನ ಬೇಗುದಿಗಳನ್ನು ಮತ್ತು ಒಳಸುಳಿಗಳನ್ನು ಅರಿತು, ಮಾನವ ಸಮಾಜದ ಉನ್ನತಿಗಾಗಿ ಶ್ರಮಿಸಬೇಕಾದ ಬೌದ್ಧಿಕ ಜಗತ್ತಿನಲ್ಲಿ ಸಾಹಿತ್ಯ ಮತ್ತು ರಂಗಭೂಮಿ ಪ್ರಮುಖ ಪಾತ್ರ ವಹಿಸಲೇಬೇಕಾಗುತ್ತದೆ. ತುಳಿತಕ್ಕೊಳಗಾದ ಜನಸಮುದಾಯಗಳ ನಿತ್ಯ ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಎರಡೂ ಕ್ಷೇತ್ರಗಳು ಕಾಲಾನುಕಾಲದಿಂದಲೂ ತಮ್ಮ ಪಾತ್ರ ನಿರ್ವಹಿಸುತ್ತಾ ಬಂದಿವೆ. ಅಕ್ಷರ ರೂಪದಲ್ಲಿ ಸೃಜಿಸುವ ಸಾಹಿತ್ಯಕ ಪ್ರಕಾರಗಳು ಮತ್ತು ಭಾವಾಭಿನಯದ ಮೂಲಕ ಸೃಜಿಸುವ ರಂಗಭೂಮಿಯ ವಿವಿಧ ಆಯಾಮಗಳು ಸಮಾಜದ ಓರೆಕೋರೆಗಳನ್ನು ತಿದ್ದುತ್ತಾ, ಹೊಸ ಮಾರ್ಗಗಳ ಅವಿಷ್ಕಾರಗಳನ್ನು ಶೋಧಿಸುತ್ತಾ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ ಬಂದಿವೆ.

ಹಾಗಾಗಿಯೇ ಸಾಹಿತ್ಯ ಮತ್ತು ರಂಗಭೂಮಿಯನ್ನು ಪ್ರತಿನಿಧಿಸುವ ಸಾಂಸ್ಥಿಕ ಚೌಕಟ್ಟುಗಳು ಪೂರ್ಣ ಸ್ವಾಯತ್ತತೆ ಯೊಂದಿಗೆ ಇರಬೇಕೆಂಬ ಆಶಯವೂ ಆಗಿಂದಾಗ್ಗೆ ವ್ಯಕ್ತವಾಗುತ್ತಿ ರುತ್ತದೆ. ಸಾಂಸ್ಕೃತಿಕ ಭೂಮಿಕೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದು ಕೊಂಡಷ್ಟೂ, ಸಮಾಜದಲ್ಲಿ ಗುಪ್ತವಾಹಿನಿಯಂತೆ ಪ್ರವಹಿಸುತ್ತಲೇ ಇರುವ ಶಾಂತಿ ಭಂಜಕ, ಸೌಹಾರ್ದ ಭಂಜಕ ಶಕ್ತಿಗಳು ಮೇಲುಗೈ ಸಾಧಿಸುವುದು ಸುಲಭವಾಗುತ್ತದೆ. ಇತ್ತೀಚೆಗೆ ಮೈಸೂರಿನಲ್ಲಿ ಸಮಾರೋಪಗೊಂಡ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಮತ್ತು ಹೊಸ ರೂಪದೊಂದಿಗೆ ಅನಾವರಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಈ ನಿಟ್ಟಿನಲ್ಲಿ ಆತಂಕ ಮೂಡಿಸುವಂತಹ ಪೂರ್ವಸೂಚನೆಗಳನ್ನು ನೀಡಿವೆ. ಅಲ್ಪಸಂಖ್ಯೆಯ ಜನಸಮುದಾಯಗಳ ಸಂಕುಚಿತ ಆಶಯಗಳನ್ನೇ ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಿನಲ್ಲಿ ಸಾರ್ವತ್ರೀಕರಿಸುವ ಪ್ರಯತ್ನಗಳ ನಡುವೆಯೇ ಸಮಾಜದ ಕೆಳಸ್ತರದ ಜನಜೀವನದ ಬೇರುಗಳನ್ನು ವಿಷಮಯ ಮಾಡಲಾಗುತ್ತಿರುವುದು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಬಹುಸಂಸ್ಕೃತಿಯ, ಬಹುಭಾಷಿಕ ಬಹುತ್ವದ ಆಶಯಗಳೊಂದಿಗೆ ರೂಪುಗೊಂಡಿರುವ ಭಾರತೀಯ ಸಮಾಜವನ್ನು ಜಾತಿ, ಮತ, ಧರ್ಮ ಮತ್ತು ಅಸ್ಮಿತೆಗಳ ಚೌಕಟ್ಟುಗಳಲ್ಲಿ ಬಂಧಿಸುತ್ತಿರುವ ವಿಧ್ವಂಸಕ ಶಕ್ತಿಗಳ ವಿರುದ್ಧ ಇಡೀ ಸಮಾಜವನ್ನು ಜಾಗೃತಗೊಳಿಸುವ ಶಕ್ತಿ ಮತ್ತು ಸಂಪನ್ಮೂಲಗಳು ರಂಗಭೂಮಿಯಲ್ಲಿದೆ. ತನ್ನೆಲ್ಲಾ ವ್ಯಕ್ತಿಗತ ಅಸ್ಮಿತೆಗಳನ್ನು ಕಳಚಿಕೊಂಡು, ತನ್ನೆಲ್ಲಾ ಸಾಮಾಜಿಕ- ಸಾಂಸ್ಕೃತಿಕ ಸಂಕೋಲೆಗಳಿಂದ ಮುಕ್ತರಾಗಿ ವಾಸ್ತವ ಸಮಾಜಕ್ಕೆ ಮುಖಾಮುಖಿಯಾಗುವ, ಗತ ಸಮಾಜಕ್ಕೆ ಕನ್ನಡಿಯಾಗುವ, ಭವಿಷ್ಯದ ಸಮಾಜಕ್ಕೆ ಮುನ್ನುಡಿಯಾಗುವ ಒಂದು ಮಾರ್ಗದಲ್ಲಿ ರಂಗಕರ್ಮಿ ಮುನ್ನಡೆಯಬೇಕಾಗುತ್ತದೆ. ಈ ಕಾರಣಕ್ಕಾಗಿಯಾದರೂ ರಂಗಭೂಮಿಯ ಮೇಲೆ ಸಮಾಜದ ಎಲ್ಲ ವ್ಯತ್ಯಯ, ವೈರುಧ್ಯಗಳನ್ನೂ ತಮ್ಮ ಪಾತ್ರಗಳ ಮೂಲಕ ಬಿಂಬಿಸುವ ರಂಗಕರ್ಮಿಗಳು ಸೌಹಾರ್ದ ಸಮಾಜದ ಅಭಿವ್ಯಕ್ತಿಯಾಗಿ ಕಂಡುಬರುತ್ತಾರೆ.

ಆದರೆ ಬದಲಾಗುತ್ತಿರುವ ಭಾರತದಲ್ಲಿ ಈ ರಂಗಭೂಮಿಯ ವಾತಾವರಣ ಹಂತಹಂತವಾಗಿ ಕಲುಷಿತವಾಗುತ್ತಿದೆ. ಜಾತಿ-ಮತದ ತಾರತಮ್ಯಗಳನ್ನು ಸಂಸ್ಕೃತಿಯ ಹೆಸರಿನಲ್ಲಿ ಪೋಷಿಸುತ್ತಿರುವ ಸಾಂಸ್ಥಿಕ ಶಕ್ತಿಗಳು ಸಾಹಿತ್ಯವಲಯವನ್ನು ಈಗಾಗಲೇ ಸಾಕಷ್ಟು ಕಲುಷಿತಗೊಳಿಸಿಬಿಟ್ಟಿವೆ. ಇತ್ತೀಚಿನ ದಿನಗಳಲ್ಲಿ ಈ ಮಾಲಿನ್ಯದ ಸರಕುಗಳು ರಂಗಭೂಮಿಯನ್ನೂ ಪ್ರವೇಶಿಸಿವೆ. ಅಸ್ಮಿತೆಗಳ ಸರಳುಗಳಲ್ಲಿ ರಂಗಭೂಮಿಯ ಪರಿಕಲ್ಪನೆಯನ್ನೇ ಬಂಧಿಸುವ ಮೂಲಕ, ಇಲ್ಲಿನ ಸೃಜನಶೀಲತೆಯನ್ನು, ಸಮಾಜಮುಖಿ ಧೋರಣೆಯನ್ನು ಹಾಗೂ ಜನಪರ ಕಾಳಜಿಯುಕ್ತ ಸಾರ್ವತ್ರಿಕತೆಯನ್ನು ಅಲ್ಲಗಳೆಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇತ್ತೀಚಿನ ರಂಗಾಯಣದ ಬಹುರೂಪಿ ಈ ನಿಟ್ಟಿನಲ್ಲಿ ಒಂದು ಸ್ಪಷ್ಟ ನಿದರ್ಶನ.

ಆದರೂ ರಂಗಭೂಮಿ ತನ್ನ ವೃತ್ತಿಪರತೆಯನ್ನು ಮತ್ತು ಮೂಲ ಸಾಂಸ್ಕೃತಿಕ ಬೇರುಗಳನ್ನು ಉಳಿಸಿಕೊಂಡು ಬಂದಿರುವುದು ಮನಸ್ಸಿಗೆ ಹಿತ ನೀಡುವ ಒಂದು ವಿಚಾರ. ಸಾಮಾಜಿಕ ಅನ್ಯಾಯಗಳ ವಿರುದ್ಧ, ಸಾಂಸ್ಕೃತಿಕ ತಾರತಮ್ಯಗಳ ವಿರುದ್ಧ, ಸಾಮುದಾಯಿಕ ದೌರ್ಜನ್ಯಗಳ ವಿರುದ್ಧ ದನಿ ಎತ್ತುವ ರಂಗಭೂಮಿಯ ಪ್ರಯೋಗಗಳು ಮತ್ತು ಪ್ರಯತ್ನಗಳು ಸದಾ ಸ್ಥಾಪಿತ ವ್ಯವಸ್ಥೆಯ ಆರಾಧಕರಿಂದ ವಿರೋಧ ಎದುರಿಸುತ್ತಲೇ ಇರುತ್ತವೆ. ಈ ಪ್ರಯತ್ನಗಳಿಗೆ ಆಳುವ ವ್ಯವಸ್ಥೆ ತನ್ನೆಲ್ಲಾ ಸಂಪನ್ಮೂಲಗಳನ್ನೊದಗಿಸಿ, ಸ್ಥಾಯಿ ಸ್ವರೂಪವನ್ನು ನೀಡಿದಾಗ, ರಂಗಭೂಮಿಗೆ ಸಾಂಸ್ಕೃತಿಕ ಸವಾಲುಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಸ್ಥಾಪಿತ ವ್ಯವಸ್ಥೆಯ ದಮನಕಾರಿ ಸಿದ್ಧಾಂತಗಳು, ರಂಗಭೂಮಿಯ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಹಿಂಸಾತ್ಮಕ ಮಾರ್ಗಗಳನ್ನೂ ಅನುಮೋದಿಸುವುದನ್ನು, ಸಫ್ದಾರ್ ಹಷ್ಮಿ ಅವರ ಹತ್ಯೆಯ ಸಂದರ್ಭದಲ್ಲಿ ಕಂಡಿದ್ದೇವೆ. ತನ್ನ ಸುತ್ತಲಿನ ಸಮಾಜದಲ್ಲಿ ನಿತ್ಯ ಸಂಭವಿಸುತ್ತಿರುವ ದೌರ್ಜನ್ಯ, ತಾರತಮ್ಯ, ಅತ್ಯಾಚಾರ, ಸುಲಿಗೆ, ದರೋಡೆ, ಅಸ್ಪಶ್ಯತೆಯಂತಹ ಹೀನ ಆಚರಣೆ, ಲಿಂಗ ಅಸಮಾನತೆ, ಇವೆಲ್ಲವನ್ನೂ ತನ್ನೊಡಲೊಳಗೆ ಹುದುಗಿಸಿಕೊಂಡು, ಅಂತರ್ಮುಖಿಯಾಗಿಸಿಕೊಂಡು, ಸರ್ವಜನ ಹಿತದ ಆಶಯದೊಂದಿಗೆ, ಸಮಾಜದ ಮುಂದೆ ಅನಾವರಣಗೊಳ್ಳುವ ರಂಗಭೂಮಿಯ ಪ್ರಯೋಗಗಳು ತಮ್ಮ ಸೃಜನಶೀಲತೆಯಿಂದಲೇ ಜನಮನ್ನಣೆ ಗಳಿಸಲು ಸಾಧ್ಯ. ಆದರೆ ಈ ಸೃಜನಶೀಲತೆಯನ್ನು ಹೊಸಕಿಹಾಕುವ ಮತೀಯ ಭಾವನೆಗಳು, ಜಾತಿಪೀಡಿತ ಮನಸುಗಳು ಮತ್ತು ಮತಾಂಧತೆಯ ಮಜಲುಗಳು ಸ್ಥಾಪಿತ ವ್ಯವಸ್ಥೆಯ ಆಜ್ಞಾಪಾಲನೆಯ ವಾಹಿನಿಗಳಂತೆ ಕಾರ್ಯನಿರ್ವಹಿಸುತ್ತಿರುತ್ತವೆ. ಈ ವಿಕೃತಿಯನ್ನು ಮೆಟ್ಟಿ ನಿಂತು ತನ್ನ ಸೃಜನಶೀಲತೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಆಧುನಿಕ ರಂಗಭೂಮಿ ಎದುರಿಸುತ್ತಿದೆ. ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ವಾಣಿಜ್ಯೀಕರಣಗೊಳಿಸುವ ವಿದ್ಯುನ್ಮಾನ ಮಾಧ್ಯಮಗಳ ನಿರಂತರ ಪ್ರಯತ್ನಗಳ ನಡುವೆಯೇ, ರಂಗಭೂಮಿಯ ಸೃಜನಶೀಲ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾದ ಸನ್ನಿವೇಶ ಎದುರಾಗಿದೆ. ಹಾಗೆಯೇ ರಂಗಭೂಮಿಯ ಮೂಲಕ ಸಾಮಾಜಿಕ ಮನ್ವಂತರವನ್ನು ಸಾಧಿಸುವ ಪ್ರಯತ್ನಗಳೂ ಸಾಗಬೇಕಿದೆ. ಮಾನವ ಸಮಾಜದ ಉನ್ನತಿಗೆ ಅತ್ಯವಶ್ಯವಾದ ಭ್ರಾತೃತ್ವ ಮತ್ತು ಮನುಜಪ್ರೀತಿಯ ಸಂವೇದನೆಗಳನ್ನು ಸಂರಕ್ಷಿಸುವ ಬಹುದೊಡ್ಡ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡೇ, ಆಧುನಿಕ ರಂಗಭೂಮಿ ತನ್ನ ಸಾಂಸ್ಕೃತಿಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕಿದೆ. ಸಮಾಜಭಂಜಕ ಶಕ್ತಿಗಳ ನಿರಂತರ ದಾಳಿಯ ನಡುವೆಯೇ ಈ ಸವಾಲನ್ನು ಎದುರಿಸಿ ನಿಲ್ಲುವ ಧೀ ಶಕ್ತಿ, ರಂಗಭೂಮಿಯನ್ನು ಪ್ರತಿನಿಧಿಸುವ ಪ್ರತಿಯೊಂದು ಸೃಜನಶೀಲ ಮನಸ್ಸಿಗೂ ಇರಬೇಕಾಗುತ್ತದೆ.

ಈ ಆಶಯದೊಂದಿಗೇ ವಿಶ್ವರಂಗಭೂಮಿಯ ದಿನವನ್ನು ಆಚರಿಸೋಣ. ರಂಗಭೂಮಿಯನ್ನು ಪ್ರತಿನಿಧಿಸುವ ಸಮಸ್ತ ಜನಕೋಟಿಗೆ ಈ ದಿನದ ಶುಭಾಶಯಗಳು.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News