ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಪಕ್ಷ ಅಗತ್ಯ ಎಂದ ಕೇಂದ್ರ ಸಚಿವ ನಿತಿನ್ ಗಡ್ಕರಿ

Update: 2022-03-28 12:51 GMT

ಮುಂಬೈ: ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಪಕ್ಷ ಅಗತ್ಯವಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರಲ್ಲದೆ, ಚುನಾವಣಾ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷವು ಬಲವರ್ಧನೆಗೊಳ್ಳುವುದೆಂದು ಹಾಗೂ ಅದರ ನಾಯಕರು ಹತಾಶೆಯಿಂದ ಬೇರೆ ಪಕ್ಷಗಳಿಗೆ ವಲಸೆ ಹೋಗುವುದಿಲ್ಲವೆಂಬುದು ತಮ್ಮ ಪ್ರಾಮಾಣಿಕ ನಿರೀಕ್ಷೆಯಾಗಿದೆ ಎಂದು ತಿಳಿಸಿದ್ದಾರೆ.

ಮುಂಬೈಯಲ್ಲಿ ಲೋಕಮತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಅವರು ಮೇಲಿನಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ದುರ್ಬಲಗೊಂಡರೆ ಪ್ರಾದೇಶಿಕ ಪಕ್ಷಗಳು ವಿಪಕ್ಷ ಸ್ಥಾನವನ್ನು ಗಳಿಸುತ್ತವೆ ಇದು ಒಳ್ಳೆಯ ಚಿಹ್ನೆಯಲ್ಲ ಎಂದು ಅವರು ಹೇಳಿದರು.

"ಪ್ರಜಾಪ್ರಭುತ್ವ ಎರಡು ಚಕ್ರಗಳಲ್ಲಿ ನಡೆಯುತ್ತದೆ- ಆಡಳಿತ ಪಕ್ಷ ಮತ್ತು ವಿಪಕ್ಷ. ಬಲಿಷ್ಠ ವಿಪಕ್ಷ ಪ್ರಜಾಪ್ರಭುತ್ವಕ್ಕೆ ಅಗತ್ಯ. ಆದುದರಿಂದ ಕಾಂಗ್ರೆಸ್ ಪಕ್ಷ  ಬಲಿಷ್ಠವಾಗಬೇಕೆಂಬುದು ನನ್ನ ಪ್ರಾಮಾಣಿಕ ನಿರೀಕ್ಷೆ,'' ಎಂದು ಅವರು ಹೇಳಿದರು.

"ಜವಾರಲಾಲ್ ನೆಹರೂ ಒಂದು ಉದಾಹರಣೆಯಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಚುನಾವಣೆಯಲ್ಲಿ ಸೋತಾಗಲೂ ನೆಹರೂ ಅವರಿಗೆ ಗೌರವ ತೋರಿದರು. ಆದುದರಿಂದ ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ ಪಾತ್ರ ಬಹಳ ಮುಖ್ಯ,'' ಎಂದು ಅವರು ಹೇಳಿದರು.

ಸೋಲುಗಳಿಂದ ಕಾಂಗ್ರೆಸ್ ನಾಯಕರು ಧೃತಿಗೆಡಬಾರದು ಬದಲು ಪಕ್ಷದಲ್ಲಿಯೇ ಉಳಿಯಬೇಕು ಎಂದೂ ಅವರು ಹೇಳಿದರು.

"ಕಾಂಗ್ರೆಸ್ ಬಲಷ್ಠವಾಗಿ ಉಳಿಯುತ್ತದೆ ಎಂದು ನಾನು ಪ್ರಾಮಾಣಿಕವಾಗಿ ನಿರೀಕ್ಷಿಸುತ್ತೇನೆ. ಪಕ್ಷದ ಸಿದ್ಧಾಂತವನ್ನು ನಂಬುವವರು ಪಕ್ಷದಲ್ಲಿಯೇ ಉಳಿಯಬೇಕು ಹಾಗೂ ಹತಾಶೆಗೊಳ್ಳದೆ ತಮ್ಮ ಕೆಲಸ ಮುಂದುವರಿಸಬೇಕು. ಸೋಲು ಇದ್ದರೆ, ಒಂದು ದಿನ ಗೆಲುವೂ ಇರಲಿದೆ,'' ಎಂದು ಇತ್ತೀಚಿಗಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವೈಫಲ್ಯದ ಕುರಿತು ಗಡ್ಕರಿ ಹೇಳಿದರು.

ಬಿಜೆಪಿಗೆ ಒಂದು ಕಾಲದಲ್ಲಿ ಸಂಸತ್ತಿನಲ್ಲಿ ಕೇವಲ ಎರಡು ಸೀಟುಗಳಿದ್ದವು ಆದರೆ ಸಮಯ ಸಂದಂತೆ ಬದಲಾವಣೆಗಳಾದವು ಮುಂದೆ ವಾಜಪೇಯಿ ಪ್ರಧಾನಿಯಾದರು. ಹತಾಶ ಸ್ಥಿತಿಯಲ್ಲಿ ಯಾರೂ ತಮ್ಮ ಸಿದ್ಧಾಂತವನ್ನು ಕೈಬಿಡಬಾರದು,'' ಎಂದು ಅವರು ಹೇಳಿದರು.

ಆದರೆ ನಿತಿನ್ ಗಡ್ಕರಿ ಅವರ ಈ ಅಭಿಪ್ರಾಯಗಳು ಅವರ ಪಕ್ಷದ ಅನಧಿಕೃತ ಉದ್ದೇಶ 'ಕಾಂಗ್ರೆಸ್ ಮುಕ್ತ ಭಾರತ' ಕ್ಕೆ ತದ್ವಿರುದ್ಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News