ವೇದಿಕೆಯಲ್ಲಿ ಕ್ರಿಸ್ ರಾಕ್ ಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ವಿಲ್ ಸ್ಮಿಥ್ ತನ್ನ ಆಸ್ಕರ್ ಪ್ರಶಸ್ತಿ ಕಳೆದುಕೊಳ್ಳುವರೇ?

Update: 2022-03-28 14:58 GMT
ವಿಲ್ ಸ್ಮಿಥ್ (Photo: PTI)

ಲಾಸ್ ಏಂಜೆಲಿಸ್: 2022ನೇ ಸಾಲಿನ ಆಸ್ಕರ್ ಪ್ರಶಸ್ತಿಗಳ ವಿತರಣೆ ಸಮಾರಂಭದಲ್ಲಿ ಕಾರ್ಯಕ್ರಮದ ನಿರೂಪಕ ಹಾಗೂ ನಟ ಕ್ರಿಸ್ ರಾಕ್ ಅವರು ತನ್ನ ಪತ್ನಿಯನ್ನು ಹಾಸ್ಯ ಮಾಡಿದ್ದರಿಂದ ಕುಪಿತಗೊಂಡ ನಟ ವಿಲ್ ಸ್ಮಿಥ್ ವೇದಿಕೆಯತ್ತ ಧಾವಿಸಿ ರಾಕ್ ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ದಿಢೀರ್ ಘಟನೆಯಿಂದಾಗಿ ಸಮಾರಂಭದ ನೇರಪ್ರಸಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಟ್ವಿಟರಿಗರು ಚುರುಕಾಗಿದ್ದು, ಪರ-ವಿರೋಧ ಚಟಾಕಿಗಳು ಹರಿದು ಬಂದಿದ್ದವು. ನಿಮಿಷಗಳ ಬಳಿಕ ಕಿಂಗ್ ರಿಚರ್ಡ್ ಚಿತ್ರಕ್ಕಾಗಿ ಸ್ಮಿಥ್ ಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.

ಪ್ರಶಸ್ತಿ ಸ್ವೀಕಾರ ಸಮಯದಲ್ಲಿ ಭಾವೋದ್ವೇಗಕ್ಕೊಳಗಾದ ಸ್ಮಿಥ್ ಅಕಾಡೆಮಿ ಮತ್ತು ಸಹ ನಾಮನಿರ್ದೇಶಿತರ ಕ್ಷಮೆ ಯಾಚಿಸಿದರು.

ವೇದಿಕೆಯಲ್ಲಿ ಕ್ರಿಸ್ ರಾಕ್ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಸ್ಮಿಥ್ ತನ್ನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಕಳೆದುಕೊಳ್ಳಲಿದ್ದಾರೆಯೇ? ಈ ಕುರಿತು ಅಕಾಡೆಮಿಯ ನೀತಿ ಸಂಹಿತೆ ಏನು ಹೇಳುತ್ತದೆ?

ಅಕಾಡಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಲಾಸ್ ಏಂಜೆಲಿಸ್ ನ ಡಾಲ್ಬಿ ಥಿಯೇಟರ್ನಲ್ಲಿ ನಡೆದ ವರ್ಣಮಯ ಸಮಾರಂಭದಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ವಿತರಿಸಿತು. ಆದರೆ ವೇದಿಕೆಯ ಮೇಲೆ ಸ್ಮಿಥ್-ರಾಕ್ ಕಲಹ ಹಲವರನ್ನು ದಿಗ್ಮೂಢರನ್ನಾಗಿಸಿದೆ. ಪ್ರಶಸ್ತಿಗೆ ತನ್ನ ಹೆಸರು ಘೋಷಣೆಯಾದ ಬಳಿಕ ಸ್ಮಿಥ್ ನಗುನಗುತ್ತಲೇ ಫೋಟೊಗಳಿಗೆ ಭಂಗಿ ನೀಡಿದರು. ವಾಸ್ತವದಲ್ಲಿ ಅವರು ವೇದಿಕೆಯಲ್ಲಿ ರಾಕ್ ಗೆ ಕಪಾಳಮೋಕ್ಷ ಮಾಡಿ ತನ್ನ ಸ್ಥಾನಕ್ಕೆ ಮರಳುವಾಗಲೂ ಮುಗುಳ್ನಗುತ್ತಿದ್ದರು.

ಅಕಾಡೆಮಿಯು ಈಗ ಟ್ವಿಟರ್ ನಲ್ಲಿ ಅಧಿಕೃತ ಹೇಳಿಕೆಯನ್ನು ಪೋಸ್ಟ್ ಮಾಡಿದೆ. ‘ಅಕಾಡೆಮಿಯು ಯಾವುದೇ ರೂಪದಲ್ಲಿ ಹಿಂಸೆಯನ್ನು ಕ್ಷಮಿಸುವುದಿಲ್ಲ. ಈ ರಾತ್ರಿ ತಮ್ಮ ಸಮಾನರಿಂದ ಮತ್ತು ವಿಶ್ವಾದ್ಯಂತ ಚಿತ್ರಪ್ರೇಮಿಗಳಿಂದ ಮನ್ನಣೆಯ ಈ ಕ್ಷಣಕ್ಕೆ ಅರ್ಹರಾಗಿರುವ ನಮ್ಮ 94ನೇ ಅಕಾಡೆಮಿ ಪ್ರಶಸ್ತಿಗಳ ವಿಜೇತರನ್ನು ಸಂಭ್ರಮಿಸಲು ನಾವು ಆನಂದಿಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಕಾಡೆಮಿಯು ತನ್ನ ನೀತಿ ಸಂಹಿತೆಯಲ್ಲಿ ಇಂತಹ ಪ್ರಕರಣಗಳ ವಿರುದ್ಧ ಕಠಿಣ ಮಾರ್ಗಸೂಚಿಗಳನ್ನು ಹೊಂದಿದೆ ಎಂದು ಟ್ವಿಟರ್ ನಲ್ಲಿ ಹಲವರು ಬೆಟ್ಟು ಮಾಡಿದ್ದಾರೆ. ಇದು ಮೂಲಭೂತವಾಗಿ ಹಲ್ಲೆಯಾಗಿರುವುದರಿಂದ ಪ್ರಶಸ್ತಿಯನ್ನು ಮರಳಿಸುವಂತೆ ಸ್ಮಿಥ್ ಗೆ ಸೂಚಿಸಬಹುದು ಎಂದು ಹಲವರು ಹೇಳಿದ್ದಾರೆ.
ಈ ನಡುವೆ ಸ್ಮಿಥ್ ವಿರುದ್ಧ ಆರೋಪವನ್ನು ಹೊರಿಸಲು ರಾಕ್ ಸಿದ್ಧರಿಲ್ಲ ಎಂದು ಹೇಳಲಾಗಿದೆ.

ರಾಕ್ ವೇದಿಕೆಯಲ್ಲಿ ಪ್ರಶಸ್ತಿಯೊಂದನ್ನು ವಿತರಿಸುವಾಗ ಬೋಳುತಲೆಯಲ್ಲಿದ್ದ ಸ್ಮಿತ್ ಪತ್ನಿ ಜೇಡಾ ಪಿಂಕೆಟ್ ಅವರನ್ನು ತಮಾಷೆ ಮಾಡಿದ್ದರು. ತಾನು ಅಲೋಪೆಸಿಯಾದಿಂದ ಬಳಲುತ್ತಿದ್ದು, ಅದು ವಿಪರೀತ ಕೂದಲುದುರುವಿಕೆಗೆ ಕಾರಣವಾಗಿದೆ ಎಂದು ಜೇಡಾ ಹಿಂದೆ ಬಹಿರಂಗವಾಗಿಯೇ ಹೇಳಿದ್ದರು. ತನ್ನ ಪತ್ನಿಯನ್ನು ರಾಕ್ ತಮಾಷೆ ಮಾಡಿದ್ದು ಸ್ಮಿಥ್ ರನ್ನು ಕೆರಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News