ಆಸ್ಕರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಿಸ್ ರಾಕ್‍ಗೆ ಕಪಾಳಮೋಕ್ಷಗೈದ ವಿಲ್ ಸ್ಮಿತ್‍ರಿಂದ ಕ್ಷಮೆಯಾಚನೆ

Update: 2022-03-29 06:15 GMT
Photo: PTI

ಲಾಸ್ ಏಂಜೆಲಿಸ್: ಆಸ್ಕರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ವಿಲ್ ಸ್ಮಿತ್ ಅವರು ಕಾರ್ಯಕ್ರಮ ನಿರೂಪಕ ಹಾಗೂ ಕಾಮಿಡಿಯನ್ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷಗೈದ ಘಟನೆಯ ಬೆನ್ನಲ್ಲೇ ವಿಲ್ ಸ್ಮಿತ್ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾರೆ. ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ತಲೆಗೂದಲು ಕುರಿತಂತೆ ಕ್ರಿಸ್ ರಾಕ್ ನೀಡಿದ ಹೇಳಿಕೆಯೊಂದು ಸ್ಮಿತ್ ಅವರನ್ನು ಕೆರಳಿಸಿತ್ತೆನ್ನಲಾಗಿದೆ. ಪ್ರಶಸ್ತಿ ಸಮಿತಿಯು ಈ ಘಟನೆಯನ್ನು ಪರಿಶೀಲಿಸುವುದಾಗಿ ಹೇಳಿದ ನಂತರ ಸ್ಮಿತ್ ಕ್ಷಮೆಯಾಚಿಸಿದ್ದಾರೆ.

"ಕ್ರಿಸ್, ನಾನು ನಿಮ್ಮಿಂದ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆ. ನಾನು ತಪ್ಪು ಮಾಡಿದ್ದೇನೆ. ನನಗೆ ಮುಜುಗರವಾಗಿದೆ ಹಾಗೂ ನಾನು ಯಾವ ರೀತಿಯ ವ್ಯಕ್ತಿಯಾಗಬೇಕೆಂದು ಬಯಸಿದ್ದೇನೆಯೋ ಆ ರೀತಿಯ ವರ್ತನೆ ನನ್ನದಾಗಿರಲಿಲ್ಲ,'' ಎಂದು ಸ್ಮಿತ್ ತಮ್ಮ ಇನ್‍ಸ್ಟಾಗ್ರಾಂ ಪುಟದಲ್ಲಿ ಬರೆದಿದ್ದಾರೆ.

"ಎಲ್ಲಾ ರೀತಿಯ ಹಿಂಸೆಯು ವಿಷಕಾರಕ ಹಾಗೂ ಹಾನಿಕಾರಕ. ಕಳೆದ ರಾತ್ರಿಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನನ್ನ ವರ್ತನೆ ಅಸ್ವೀಕಾರಾರ್ಹ ಮತ್ತು ಕ್ಷಮೆಗೆ ಅರ್ಹವಲ್ಲ,'' ಎಂದು ಸ್ಮಿತ್ ಹೇಳಿದರು.

"ನನ್ನ ಬಗೆಯ ಹಾಸ್ಯಗಳ ಬಗ್ಗೆ ಚಿಂತೆಯಿಲ್ಲ, ಆದರೆ ಜಡಾ ಅವರ ವೈದ್ಯಕೀಯ ಪರಿಸ್ಥಿತಿಯ ಕುರಿತ ಹೇಳಿಕೆ ಅತಿಯಾಗಿ ನಾನು ಭಾವುಕನಾಗಿ ಪ್ರತಿಕ್ರಿಯಿಸಿದೆ,'' ಎಂದು ಸ್ಮಿತ್ ಹೇಳಿದ್ದಾರೆ.

ಪಿಂಕೆಟ್ ಅವರು ಅಲೋಪೇಶಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News