ಬಿಜೆಪಿ ಎದುರಿಸಲು ಒಂದಾಗುವಂತೆ ವಿವಿಧ ರಾಜ್ಯಗಳ ಸಿಎಂಗೆ ಮಮತಾ ಬ್ಯಾನರ್ಜಿ ಪತ್ರ

Update: 2022-03-29 07:26 GMT

ಕೋಲ್ಕತಾ: ಪ್ರತಿಪಕ್ಷಗಳನ್ನು ಗುರಿಯಾಗಿಸಲು ಬಿಜೆಪಿಯು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು  ಎದುರಿಸಲು ಒಂದಾಗುವಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಇತರ ಬಿಜೆಪಿಯೇತರ ನಾಯಕರಿಗೆ ಪತ್ರ ಬರೆದಿದ್ದಾರೆ.

ಪ್ರತಿಪಕ್ಷಗಳ ಸಭೆ ಕರೆದಿರುವ ಮಮತಾ ಬ್ಯಾನರ್ಜಿ, ಕೇಂದ್ರೀಯ ಸಂಸ್ಥೆಗಳ ವಿರುದ್ಧ ರಾಜಕೀಯ ಸೇಡಿನ ಆರೋಪ ಹೊರಿಸಿದರು.

ಕೇಂದ್ರದ ಬಿಜೆಪಿ ಸರಕಾರವು ದೇಶದಲ್ಲಿ ಎಲ್ಲಿಯಾದರೂ "ಚುನಾವಣೆಗಳು ಸಮೀಪವಿರುವಾಗ" ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡಿದೆ ಎಂದು ಬಂಗಾಳದ ಮುಖ್ಯಮಂತ್ರಿ ರವಿವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

"ಎಲ್ಲರ ಅನುಕೂಲ ಹಾಗೂ  ಸೂಕ್ತತೆಗೆ ಅನುಗುಣವಾಗಿ ಒಂದು ಸ್ಥಳದಲ್ಲಿ ಮುಂದಿನ ದಾರಿಯ ಕುರಿತು ಚರ್ಚಿಸಲು ನಾವೆಲ್ಲರೂ ಒಗ್ಗೂಡಿ ಸಭೆ ನಡೆಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ದೇಶದ ಎಲ್ಲಾ ಪ್ರಗತಿಪರ ಶಕ್ತಿಗಳು ಒಗ್ಗೂಡಿ ಈ ದಮನಕಾರಿ ಶಕ್ತಿಯ ವಿರುದ್ಧ ಹೋರಾಡುವುದು ಇಂದಿನ ಅಗತ್ಯವಾಗಿದೆ’’ ಎಂದು ಮಮತಾ ಪತ್ರದಲ್ಲಿ ಬರೆದಿದ್ದಾರೆ.

"ಕೇಂದ್ರೀಯ ಸಂಸ್ಥೆಗಳಾದ ಇಡಿ, ಸಿಬಿಐ, ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ (ಸಿವಿಸಿ) ಹಾಗೂ ಆದಾಯ ತೆರಿಗೆ ಇಲಾಖೆಯನ್ನು ದೇಶಾದ್ಯಂತ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು, ಕಿರುಕುಳ ನೀಡಲು ಹಾಗೂ  ಸೇಡು ತೀರಿಸಿಕೊಳ್ಳಲು ಬಳಸಲಾಗುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಹತ್ತಿಕ್ಕುವ ಏಕೈಕ ಉದ್ದೇಶದಿಂದ ಈ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಆಡಳಿತಾರೂಢ ಬಿಜೆಪಿಯ ಉದ್ದೇಶವನ್ನು ನಾವೆಲ್ಲರೂ ವಿರೋಧಿಸಬೇಕು. ಚುನಾವಣೆ ಸಮೀಪಿಸುತ್ತಿರುವಾಗಲೇ ಕೇಂದ್ರೀಯ ಸಂಸ್ಥೆಗಳು ಕ್ರಮಕ್ಕೆ ಮುಂದಾಗಿವೆ'' ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News