×
Ad

ಖ್ಯಾತ ಸಾಹಿತಿ ಸಾರಾ ಅಬೂಬಕರ್ ರಿಗೆ ಬರಗೂರು ಪ್ರಶಸ್ತಿ ಪ್ರದಾನ

Update: 2022-03-29 15:10 IST

ಮಂಗಳೂರು, ಮಾ.29: ಖ್ಯಾತ ಸಾಹಿತಿ ಸಾರಾ ಅಬೂಬಕರ್ ಅವರಿಗೆ ಅವರ ನಿವಾಸದಲ್ಲಿಂದು ಡಾ.ಬರಗೂರು ಪ್ರತಿಷ್ಠಾನದ ಅಧ್ಯಕ್ಷರು, ಸದಸ್ಯರು ಬರಗೂರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ಬರಗೂರು ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ಸಾರಾ ಅಬೂಬಕರ್ ಸಾಹಿತ್ಯದ ಮೂಲಕ ಈ ನಾಡಿನ ಸಾಮರಸ್ಯಕ್ಕಾಗಿ ಶ್ರಮಿಸಿದವರು. ಅವರಂತಹ ಮೇರು ಸಾಹಿತಿಗೆ ಬರಗೂರು ಪ್ರತಿಷ್ಠಾನದ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಗೌರವ ಹೆಚ್ಚಿದೆ. ಅವರಿಗೆ ಪ್ರಶಸ್ತಿ ನೀಡುವ ಮೂಲಕ ನಾಡಿನ ಜನತೆಗೆ ಸಾಮರಸ್ಯದ ಸಂದೇಶ ಸಾರಿದಂತಾಗುತ್ತದೆ. ನಾಡಿನ ಬರಹಗಾರರಿಗೆ ಅವರು ಸ್ಫೂರ್ತಿ, ಮಾದರಿಯಾಗಿದ್ದಾರೆ ಎಂದು ಹೇಳಿದರು.

ಸಾಹಿತಿ ಡಾ.ಷರೀಫಾ ಮಾತನಾಡಿ, ಸಾರಾ ಅಬೂಬಕರ್ ಕನ್ನಡ ಸಾಹಿತ್ಯದ ಮೊತ್ತ ಮೊದಲ ಮುಸ್ಲಿಮ್ ಮಹಿಳಾ ಕಾದಂಬರಿಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅವರು ತಮ್ಮ ವೈಚಾರಿಕತೆಯನ್ನು ತಮ್ಮ ನಿಲುವನ್ನು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀ ಮಂತಗೊಳಿಸಿದ ಅವರ ಘನ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.

ಕರಾವಳಿ ಲೇಖಕಿಯರ ಮತ್ತು ವಾಚಕೀಯರ ಸಂಘದ ಅಧ್ಯಕ್ಷೆ ಜ್ಯೋತಿ ಮಾತನಾಡಿ, ಸಾರಾ ಅಬೂಬಕರ್ ಅವರು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸ್ಥಾಪನೆ ಮತ್ತು ಕಚೇರಿ ಆರಂಭಿಸಲು ಶ್ರಮಿಸಿದ ಉತ್ತಮ ಸಂಘಟಕಿಯಾಗಿದ್ದರು ಅವರಿಗೆ ಪ್ರಶಸ್ತಿ ಸಂದಿರುವುದು ನಮಗೆ ಹೆಮ್ಮೆ ತಂದಿದೆ ಎಂದರು.

  ಈ ಸಂದರ್ಭದಲ್ಲಿ ಬರಗೂರು ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಸುಂದರರಾಜ ಅರಸು, ಲಕ್ಷ್ಮೀ ನಾರಾಯಣ, ರಿಝ್ವಾನ್ ಪಾಶಾ ಉಪಸ್ಥಿತರಿದ್ದರು.

ದ.ಕ. ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ ಹಾಗೂ ಮಾಜಿ ಮೇಯರ್ ಶಶಿಧರ ಹೆಗ್ಡೆಯವರು ಸಾರಾ ಅಬೂಬಕರ್ ರನ್ನು ಅಭಿನಂದಿಸಿದರು.

ಮನಪಾ ಸದಸ್ಯೆ ಸಂಧ್ಯಾ ಆಚಾರ್ಯ, ಕರಾವಳಿ ಲೇಖಕಿಯರ ಮತ್ತು ವಾಚಕೀಯರ ಸಂಘದ ಪದಾಧಿಕಾರಿಗಳಾದ ಚಂದ್ರಕಲಾ ನಂದಾವರ, ಗುಲಾಬಿ ಬಿಳಿಮಲೆ, ರೋಹಿಣಿ ಮತ್ತು ಇತರ ಗಣ್ಯರಾದ  ಮಂಜುನಾಥ್ ಸಾಗರ್, ಲೋಲಾಕ್ಷ, ಪ್ರಕಾಶ್ ಸಾಲ್ಯಾನ್  ಹಾಗೂ ಸಾರಾ ಅಬೂಬಕರ್ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಸಕೀನಾ ನಾಸಿರ್ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News