×
Ad

ಉಡುಪಿ: ಕೋವಿಡ್ ವಾರಿಯರ್ಸ್‌ಗೆ ಜಿಲ್ಲಾಡಳಿತದಿಂದ ಅಭಿನಂದನೆ

Update: 2022-03-29 20:44 IST

ಉಡುಪಿ : ಎರಡು ವರ್ಷಗಳ ಕಾಲ ವಿಶ್ವವನ್ನೇ ಕಂಗೆಡಿಸಿದ ಕೋವಿಡ್ ಸಂದರ್ಭದಲ್ಲಿ ಇಡೀ ದೇಶವೇ ಕಷ್ಟದಲ್ಲಿರುವಾಗ ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದ ಆರೋಗ್ಯ ಸಿಬ್ಬಂದಿಗಳು ಹಾಗೂ ಕೋವಿಡ್ ವಾರಿಯರ್ಸ್‌ ಅವರ ಸೇವೆಯನ್ನು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಹೇಳಿದ್ದಾರೆ.

ಮಂಗಳವಾರ ನಗರದ ಅಂಬಲಪಾಡಿಯಲ್ಲಿರುವ ಶ್ಯಾಮಿಲಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೋವಿಡ್ ವಾರಿಯರ್ಸ್‌ಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ವಿವಿಧ ವಾರಿಯರ್ಸ್‌ಗಳನ್ನು ಅಭಿನಂದಿಸಿ ಅವರು ಮಾತನಾಡುತಿದ್ದರು.  

ಜನರಿಗೆ ಕೋವಿಡ್ ರೋಗದ ಬಗ್ಗೆ ಮಾಹಿತಿ ನೀಡುವುದು ಹಾಗೂ  ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಕೋವಿಡ್ ಸೋಂಕಿತರನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಕೋವಿಡ್ ವಾರಿಯರ್ಸ್‌ ಸಫಲರಾಗಿದ್ದಾರೆ. ಇವರಿಂದಾಗಿ ಪ್ರಸ್ತುತ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಯಾಗಿದೆ. ಲಸಿಕೆ ನೀಡಿಕೆ ವಿಷಯದಲ್ಲೂ ಇವರು ಮನೆಮನೆಗೆ ತೆರಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಳ್ಳುವಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಲಸಿಕಾಕರಣದಲ್ಲಿ ಜಿಲ್ಲೆಯ ಉತ್ತಮ ಸಾಧನೆಯ ಯಶಸ್ಸಿನ ಸಿಂಹಪಾಲು  ಕೋವಿಡ್ ವಾರಿಯರ್ಸ್‌ಗೆ ಸಲ್ಲುತ್ತದೆ ಎಂದರು.

ಕೋವಿಡ್ ಸಾಂಕ್ರಾಮಿಕದ ಪ್ರಾರಂಭಿಕ ದಿನಗಳಲ್ಲಿ ರೋಗ ತೀವ್ರವಾಗಿ ವ್ಯಾಪಿಸುತ್ತಿರುವಾಗ ಕೋವಿಡ್ ವಾರಿಯರ್ಸ್‌ ತೋರಿದ ಸೇವಾ ಮನೋಭಾವ ಪ್ರಶಂಸನೀಯವಾಗಿದೆ. ಈ ದಿಶೆಯಲ್ಲಿ ಜಿಲ್ಲೆಯ ಎಲ್ಲಾ ಕೋವಿಡ್ ವಾರಿಯರ್ಸ್‌ ಗಳ ಸೇವೆ ಸ್ಮರಣೀಯ. ಹೀಗಾಗಿ ಪ್ರತಿಯೊಬ್ಬರೂ ಗೌರವಕ್ಕೆ  ಅರ್ಹರು ಎಂದು ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಕೋವಿಡ್ ವಾರಿಯರ್ಸ್‌ ಸೇವೆಗೆ ನಾವೆಲ್ಲರೂ ಆಭಾರಿಗಳಾಗಿದ್ದೇವೆ. ಎಲ್ಲಾ ಆರೋಗ್ಯ ಸಿಬ್ಬಂದಿ, ದಾದಿ ಯರು, ನೌಕರರು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದ ಬೆನ್ನೆಲುಬಾಗಿದ್ದರು. ಕೋವಿಡ್ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗಿದ್ದ ಸಂದರ್ಭದಲ್ಲಿ ದಿನದ ಎರಡೂ ಪಾಳಿಯಲ್ಲಿ ಕೂಡ ಸೇವೆ ಸಲ್ಲಿಸಿ, ಕೋವಿಡ್ ನಿಯಂತ್ರಣಕ್ಕೆ ಶ್ರಮ ವಹಿಸಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಲಸಿಕೆಯ ಬಗ್ಗೆ ಅರಿವು ಮೂಡಿಸುವಲ್ಲಿ ಇವರು ಅತ್ಯುತ್ತಮ ಸೇವೆ ಸಲ್ಲಿಸಿ ಇದರಲ್ಲಿ ಸಫಲರಾಗಿದ್ದಾರೆ. ಮುಂದೆಯೂ ಕೂಡ ಕೋವಿಡ್ ವಾರಿಯರ್ಸ್‌ಗಳ ಸೇವೆ ಹೀಗೆ ಮುಂದುವರೆಯಬೇಕು ಎಂದು ಹೇಳಿದರು.

ಉಡುಪಿ ಆದರ್ಶ ಆಸ್ಪತ್ರೆಯ ಡಾ.ಚಂದ್ರಶೇಖರ್, ಪ್ರಸಾದ್ ನೇತ್ರಾಲಯ ದ ಡಾ. ಕೃಷ್ಣಪ್ರಸಾದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳು, ಆರೋಗ್ಯ ವೀಕ್ಷಣಾಧಿಕಾರಿಗಳು, ದಾದಿಯರು, ಪ್ರಯೋಗ ಶಾಲಾ ತಂತ್ರಜ್ಞರು, ದತ್ತಾಂಶ ನಮೂದಕರು, ವೈದ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರ ಸಂರಕ್ಷಣಾಧಿಕಾರಿಗಳು, ಚಾಲಕರು ಹಾಗೂ ನೌಕರರಿಗೆ ಪ್ರಶಂಸಾ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಹಾಗೂ ಕೋವಿಡ್ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸಿದ ಇತರ ಸರ್ಕಾರೇತರ ಸಂಘ-ಸಂಸ್ಥೆಗಳನ್ನು ಸಹ ಗೌರವಿಸಲಾಯಿತು. 

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀರಾಮರಾವ್,ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳಾದ  ಡಾ.ವಾಸುದೇವ ಉಪಾಧ್ಯಾಯ, ಡಾ.ರಾಜೇಶ್ವರಿ ಹಾಗೂ ಡಾ.ಕೃಷ್ಣಾನಂದ ಶೆಟ್ಟಿ  ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ವಂದಿಸಿದರು. ಹಾವಂಜೆ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News