ಸರಿಸ್ಕಾ: ಭೀಕರ ಕಾಳ್ಗಿಚ್ಚು ಶಮನಕ್ಕೆ ವಾಯುಪಡೆಗೆ ಬುಲಾವ್

Update: 2022-03-30 02:00 GMT

ಜೈಪುರ/ ಅಲ್ವಾರ್: ರಾಜಸ್ಥಾನದ ಸರಿಸ್ಕಾ ಹುಲಿ ಧಾಮ ವ್ಯಾಪ್ತಿಯ ಐದು ಚದರ ಕಿಲೋಮೀಟರ್ ಬೆಟ್ಟ ಪ್ರದೇಶದಲ್ಲಿ ಭೀಕರ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಇದರ ಶಮನಕ್ಕೆ ಭಾರತೀಯ ವಾಯುಪಡೆಯ ನೆರವು ಕೋರಲಾಗಿದೆ.

ಬೆಂಕಿ ನಂದಿಸುವ ಪ್ರಯತ್ನದಲ್ಲಿ ಸಹಕರಿಸಲು ವಾಯುಪಡೆಯ ಎರಡು ಹೆಲಿಕಾಪ್ಟರ್ ಗಳನ್ನು ಕಳುಹಿಸಲು ಅಧಿಕಾರಿಗಳು ಕೋರಿದ್ದಾರೆ. ವನ್ಯಧಾಮದಲ್ಲಿ ಈಗಾಗಲೇ 600-700 ಹೆಕ್ಟೇರ್ ಅರಣ್ಯ ಕಾಳ್ಗಿಚ್ಚಿಗೆ ಆಹುತಿಯಾಗಿದ್ದು, ಬಲವಾದ ಗಾಳಿ ಮತ್ತು ಬಿಸಿಲಿನ ಝಳ, ಕಾಳ್ಗಿಚ್ಚು ಶಮನಕ್ಕೆ ಅಡ್ಡಿಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ರವಿವಾರ ಕಾಳ್ಗಿಚ್ಚು ಶಮನಗೊಳಿಸಿರುವುದಾಗಿ ಹೇಳಿದ್ದರು. ಆದರೆ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಮತ್ತಷ್ಟು ವ್ಯಾಪಕ ಪ್ರದೇಶಕ್ಕೆ ವ್ಯಾಪಿಸಿದೆ. ಎರಡು ಮರಿಗಳೊಂದಿಗೆ ಹೆಣ್ಣು ಹುಲಿ ಇರುವ ಭೂಪ್ರದೇಶದ ವ್ಯಾಪ್ತಿಗೂ ಸೋಮವಾರ ಸಂಜೆ ವೇಳೆಗೆ ಬೆಂಕಿ ಹರಡಿದೆ. ಹುಲಿ ಹಾಗೂ ಮರಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಹೆಚ್ಚುತ್ತಿರುವ ಬೆಂಕಿಯ ಕೆನ್ನಾಲಿಗೆಯನ್ನು ತಡೆಯಲು ಅಗ್ನಿಶಾಮಕ ಸಿಬ್ಬಂದಿ ಫೈರ್‍ಬ್ರೇಕ್ ಮತ್ತು ಇತರ ವಿಧಾನಗಳ ಮೂಲಕ ಹರಸಾಹಸ ಮಾಡುತ್ತಿದ್ದಾರೆ. ಅಲ್ವಾರ್ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ಭಾರತೀಯ ವಾಯುಪಡೆ, ಎರಡು ಎಂಐ-17 ವಿ5 ಹೆಲಿಕಾಪ್ಟರ್ ಗಳನ್ನು 'ಬಂಬಿ ಬಕೆಟ್' ಕಾರ್ಯಾಚರನೆಗೆ ಕಳುಹಿಸಿಕೊಟ್ಟಿದೆ. ಈ ಕಾರ್ಯಾಚರಣೆಯಡಿ ನದಿ ಅಥವಾ ಸರೋವರದಿಂದ ನೀರನ್ನು ಮೊಗೆಯುವ ಹೆಲಿಕಾಪ್ಟರ್‍ಗಳು, ಕೇಬಲ್‍ಗೆ ಅಳವಡಿಸಿದ ಬಕೆಟ್‍ಗಳ ಮೂಲಕ ಬೆಂಕಿ ಹರಡುತ್ತಿರುವ ಪ್ರದೇಶಕ್ಕೆ ಸುರಿಯತ್ತವೆ.

ಹೆಲಿಕಾಪ್ಟರ್ ಗಳು 20 ಬಾರಿ ಇಂಥ ಕಾರ್ಯಾಚರಣೆ ನಡೆಸಿದ್ದು, 60 ಸಾವಿರ ಲೀಟರ್ ನೀರನ್ನು ಕಾಳ್ಗಿಚ್ಚು ಹರಡಿರುವ ಅರಣ್ಯದಲ್ಲಿ ಸುರಿದಿವೆ ಎಂದು ಅರಣ್ಯ ಇಲಾಖೆ ಹೇಳಿದೆ. ಬೆಟ್ಟ ಪ್ರದೇಶದಲ್ಲಿ ಬೆಂಕಿಯನ್ನು ನಂದಿಸಲಾಗಿದ್ದು, ಸುಮಾರು 200 ಮಂದಿ ಅರಣ್ಯ ಸಿಬ್ಬಂದಿ ಮತ್ತು ಪ್ರಕೃತಿ ಗೈಡ್‍ಗಳು, ಗ್ರಾಮಸ್ಥರು ಬೆಂಕಿ ನಂದಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಸರಿಸ್ಕಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎನ್.ಮೀನಾ ಹೇಳಿದ್ದಾರೆ.

ಬೆಂಕಿ ಇದೀಗ ಸಂಪೂರ್ಣ ನಿಯಂತ್ರಣದಲ್ಲಿದ್ದು, ಬುಧವಾರ ವೇಳೆಗೆ ಸಂಪೂರ್ಣ ಶಮನಗೊಳ್ಳುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News