×
Ad

ದಿನೇಶ್ ಕೊಲೆ ಪ್ರಕರಣ; ಸಮರ್ಪಕ ತನಿಖೆಗೆ ದಲಿತ ಕುಂದುಕೊರತೆ ಸಭೆಯಲ್ಲಿ ಆಗ್ರಹ

Update: 2022-03-30 17:06 IST

ಮಂಗಳೂರು :  ದಿನೇಶ್ ಕನ್ಯಾ ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಆರೋಪಿಗೆ ಜಾಮೀನು ದೊರೆತಿದೆ. ಜಾಮೀನನ್ನು ರದ್ದು ಮಾಡಿ, ಪ್ರಕರಣದ ಸಮರ್ಪಕ ತನಿಖೆ ನಡೆಸಬೇಕು ಎಂಬ ಆಗ್ರಹ  ದಲಿತ ನಾಯಕರಿಂದ ವ್ಯಕ್ತವಾಗಿದೆ.

ಬುಧವಾರ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಲಿತ ನಾಯಕರಾದ ಶೇಖರ ಲಾಯಿಲ ವಿಷಯ ಪ್ರಸ್ತಾಪಿಸಿ,  ದಿನೇಶ್ ಮನೆಯವರಿಗೆ ಸರಕಾರದಿಂದ 25 ಲ.ರೂ. ಪರಿಹಾರ ನೀಡಬೇಕು ಎಂದೂ ಆಗ್ರಹಿಸಿದರು.

ಮೃತ ದಿನೇಶ್ ಮನೆಯವರಿಗೆ ಬೆದರಿಕೆ ಕರೆಗಳು ಬರುತ್ತಿದ್ದು ಅವರಿಗೆ ರಕ್ಷಣೆ ನೀಡಬೇಕು ಎಂದು ಆನಂದ್ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಎಸ್‌ಪಿ ಸೋನಾವಣೆ ಪ್ರತಿಕ್ರಿಯಿಸಿ, ‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮರ್ಪಕವಾಗಿ ತನಿಖೆ ನಡೆಸಲಾಗುತ್ತಿದೆ’ ಎಂದರು.

ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಈ ಬಗ್ಗೆ ದಲಿತ ಕಾಲನಿಗಳಲ್ಲಿಯ ಜಾಗೃತಿ ಮೂಡಿಸಬೇಕು ಎಂದು ಅಶೋಕ್ ನಾಯ್ಕ್ ಎಂಬವರು ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋನಾವಣೆ ಅವರು, ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಆರಂಭಿಸಲಾಗಿದೆ. ಇದನ್ನು ಇನ್ನಷ್ಟು ವ್ಯಾಪಕವಾಗಿ ನಡೆಸಲಾಗುವುದು ಎಂದರು.

ಜಿಲ್ಲಾ ಮಟ್ಟದಲ್ಲಿ  ನಡೆಯುವಂತೆ ಪೊಲೀಸ್ ಠಾಣಾ ಮಟ್ಟದಲ್ಲಿಯೂ ವ್ಯವಸ್ಥಿತವಾಗಿ ಎಸ್‌ಸಿ, ಎಸ್‌ಟಿ ಸಭೆ ನಡೆಯಬೇಕು. ಕೆಲವು ಠಾಣೆಗಳಲ್ಲಿ ಸಭೆಯ ಬಗ್ಗೆ ತಡವಾಗಿ ಮಾಹಿತಿ ನೀಡಲಾಗುತ್ತಿದೆ. ತಿಂಗಳ ನಿರ್ದಿಷ್ಟ ದಿನದಂದು ಸಭೆ ನಿಗದಿಗೊಳಿಸಬೇಕು ಎಂದು ಕೆಲವು ಮಂದಿ ಮನವಿ ಮಾಡಿದರು. ಈ ಬಗ್ಗೆ ಎಸ್‌ಪಿ ಠಾಣಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು.

ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಬ್ಯಾಂಕ್‌ಗಳಲ್ಲಿ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಅವರು, ‘ಯಾವುದೇ ಅರ್ಜಿ ಬಂದ 30 ದಿನಗೊಳಗೆ ವಿಲೇವಾರಿ ಮಾಡಲು ರಿಸರ್ವ್ ಬ್ಯಾಂಕ್‌ನ ಸೂಚನೆ ಇದೆ. ಅಲ್ಲದೆ ಪ್ರತಿ ಶಾಖೆಯಲ್ಲಿಯೂ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿ ಪರಿಹಾರ ಪಡೆಯಲು ಅವಕಾಶವಿದೆ. ಯಾವುದೇ ಯೋಜನೆಯಡಿ ಅರ್ಹರಿಗೆ ಸೌಲಭ್ಯ ದೊರೆಯದಿದ್ದರೆ ಆನ್‌ಲೈನ್ ಮೂಲಕ ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಎಎಸ್‌ಪಿ ಕುಮಾರಚಂದ್ರ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಇನ್ಸ್‌ಪೆಕ್ಟರ್ ರಾಮಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News