ಪೆಟ್ರೋಲ್‌ ಬೆಲೆಯ ಬಗೆಗಿನ ತನ್ನ ಹಳೆಯ ಹೇಳಿಕೆಯನ್ನು ಕೆದಕಿದ್ದಕ್ಕೆ ವರದಿಗಾರನ ಮೇಲೆ ಸಿಟ್ಟಾದ ಪತಂಜಲಿ ರಾಮ್‌ದೇವ್‌ !

Update: 2022-03-30 14:59 GMT

ಹೊಸದಿಲ್ಲಿ: ಯೋಗ ಗುರು ಮತ್ತು ಉದ್ಯಮಿ ರಾಮ್‌ದೇವ್ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಎಲ್‌ಪಿಜಿ ಬೆಲೆ ಏರಿಕೆಯ ಕುರಿತು ನೀಡಿದ್ದ ಹೇಳಿಕೆಯ ಬಗ್ಗೆ ಪ್ರಶ್ನಿಸಿದ ಮಾಧ್ಯಮ ವರದಿಗಾರನ ಮೇಲೆ ರಾಮ್‌ದೇವ್‌ ಗರಂ ಆಗಿದ್ದಾರೆ. ಸದ್ಯ ಆ ವೀಡಿಯೊ ವೈರಲ್‌ ಆಗಿದೆ.

ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವರದಿಗಾರ, ರಾಮ್‌ದೇವ್ ಅವರಿಗೆ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಿದ ಮಾಧ್ಯಮದ ಹೇಳಿಕೆಗಳನ್ನು ತೋರಿಸುವುದನ್ನು ನೋಡಬಹುದಾಗಿದೆ.

“ಪೆಟ್ರೋಲ್ ಬೆಲೆಯನ್ನು 40 ರೂಗೆ ಮತ್ತು ಎಲ್‌ಪಿಜಿ ಬೆಲೆಯನ್ನು 300 ರೂ.ಗೆ ಇಳಿಸುವ ಸರ್ಕಾರ ಬೇಕೇ ಅಥವಾ (ಪೆಟ್ರೋಲ್‌ ದರ) 75ಕ್ಕೆ ಮಾರುವ ಸರ್ಕಾರ ನಿಮಗೆ ಬೇಕೆ  ಎಂದು ನೀವು ಜನರನ್ನು ಕೇಳಿದ್ದೀರಿ. ಈಗ ನೀವು ಏನು ಹೇಳುತ್ತೀರಿ?" ಎಂದು ವರದಿಗಾರ ರಾಮದೇವ್ ಅವರನ್ನು ಕೇಳಿದ್ದಾರೆ.

ಈ ಪ್ರಶ್ನೆಯಿಂದ ಸಿಟ್ಟಿಗೆದ್ದ ರಾಮ್‌ದೇವ್ ವರದಿಗಾರನನ್ನು ದೂಡಲು ಪ್ರಯತ್ನಿಸಿದ್ದಾರೆ. ಬೇರೆ ವರದಿಗಾರರ ಮತ್ತೊಂದು ಪ್ರಶ್ನೆಗೆ ತೆರಳಿದರು. ವರದಿಗಾರ ಅದೇ ಪ್ರಶ್ನೆಯನ್ನು ಕೇಳುವುದನ್ನು ಮುಂದುವರಿಸಿದಾಗ ರಾಮ್‌ದೇವ್ ಸಹನೆಯನ್ನು ಕಳೆದುಕೊಂಡು ವರದಿಗಾರನತ್ತ ಪ್ರತಾಪ ತೋರಿಸಿದ್ದಾರೆ .

“ಹೌದು ನಾನು ಆಗ ಹಾಗೆ ಹೇಳಿದ್ದೇನೆ, ಈಗ ನಾನು ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ನೀನೇನು ಮಾಡುವೆ? ಅದಕ್ಕಾಗಿ ನನ್ನ ಬಾಲವನ್ನು ಕತ್ತರಿಸುತ್ತೀಯಾ?” ಎಂದು ಅವರು ವರದಿಗಾರರನ್ನು ಕೇಳಿದ್ದಾರೆ.

ಅದಾಗ್ಯೂ, ವರದಿಗಾರ ಪ್ರಶ್ನೆ ಕೇಳುವದನ್ನು ನಿಲ್ಲಿಸದಿದ್ದು, ರಾಮ್‌ದೇವ್ "ಚುಪ್ ಹೋ ಜಾ, ಆಗೇ ಸೇ ಪುಚೇಗಾ ತೋ ತೀಕ್ ನೈ ಹೋಗಾ" (ಮುಚ್ಚಿ, ನೀವು ಮತ್ತೆ ಅದನ್ನೇ ಕೇಳಿದರೆ, ಅದು ನಿಮಗೆ ಒಳ್ಳೆಯದಾಗುವುದಿಲ್ಲ) ಎಂದು ಬೆದರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News