ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿಕೆಶಿ ವಿದೇಶ ಪ್ರಯಾಣಕ್ಕೆ ದಿಲ್ಲಿ ಹೈಕೋರ್ಟ್ ಅನುಮತಿ

Update: 2022-03-30 16:17 GMT
PHOTO PTI

ಹೊಸದಿಲ್ಲಿ,ಮಾ.30: ಜಾರಿ ನಿರ್ದೇಶನಾಲಯ (ಈ.ಡಿ.) ತನಿಖೆಯನ್ನು ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನಲ್ಲಿ ಹೊರಗಿರುವ ಕರ್ನಾಟಕದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಯುಎಇಗೆ ಪ್ರಯಾಣಿಸಲು ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ಅನುಮತಿಯನ್ನು ನೀಡಿದೆ.

ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ನ್ಯಾ.ಆಶಾ ಮೆನನ್ ಅವರು, ಅರ್ಜಿದಾರರಿಗೆ ಮಾ.31 ಮತ್ತು ಎ.6ರ ನಡುವೆ ದುಬೈ ಮತ್ತು ಅಬುಧಾಬಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಶಿವಕುಮಾರ ವಿದೇಶದಿಂದ ಮರಳಿದ ಬಳಿಕ ಆ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿಯನ್ನು ಸಲ್ಲಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.ವಕೀಲ ಮಯಾಂಕ್ ಜೈನ್ ಮೂಲಕ ಸಲ್ಲಿಸಿದ್ದ ಅರ್ಜಿಯಲ್ಲಿ ಡಿಕೆಶಿ,‌ ದುಬೈನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅಥಿತಿಯಾಗಿ ತನ್ನ ಉಪಸ್ಥಿತಿಯು ಅಗತ್ಯವಿದೆ ಎಂದು ತಿಳಿಸಿದ್ದರು.ಈ.ಡಿ.ಯಿಂದ ಬಂಧಿಸಲ್ಪಟ್ಟಿದ್ದ ಶಿವಕುಮಾರ್ ಅವರಿಗೆ 2019,ಅಕ್ಟೋಬರ್ನಲ್ಲಿ ಜಾಮೀನು ಮಂಜೂರು ಮಾಡುವಾಗ ದಿಲ್ಲಿ ಉಚ್ಚ ನ್ಯಾಯಾಲಯವು,ಸಂಬಂಧಿಸಿದ ನ್ಯಾಯಾಲಯದ ಅನುಮತಿ ಪಡೆಯದೆ ದೇಶವನ್ನು ತೊರೆಯುವಂತಿಲ್ಲ ಎಂದು ಷರತ್ತು ವಿಧಿಸಿತ್ತು.

ಶಿವಕುಮಾರ,ದಿಲ್ಲಿಯ ಕರ್ನಾಟಕ ಭವನದ ಉದ್ಯೋಗಿ ಹನುಮಂತಯ್ಯ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ.ಡಿ.ಪ್ರಕರಣವನ್ನು ದಾಖಲಿಸಿಕೊಂಡಿದೆ. ಶಿವಕುಮಾರ ಮತ್ತು ಇತರರ ವಿರುದ್ಧ ತೆರಿಗೆ ವಂಚನೆ ಮತ್ತು ಕೋಟ್ಯಂತರ ರೂ.ಗಳ ಹವಾಲಾ ವಹಿವಾಟುಗಳ ಆರೋಪಗಳನ್ನು ಹೊರಿಸಿ ಆದಾಯ ತೆರಿಗೆ ಇಲಾಖೆಯು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಈ.ಡಿ.ಪ್ರಕರಣವು ಆಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News