‘ಬಂಗಾರದ ಮನುಷ್ಯ’ನಿಗೆ ಸುವರ್ಣ ಸಂಭ್ರಮ!

Update: 2022-04-01 06:50 GMT

ಸಿದ್ಧಲಿಂಗಯ್ಯ ಅವರ ನಿರ್ದೇಶನದ, ಡಾ.ರಾಜ್-ಭಾರತಿ ಅಭಿನಯದ ಬಂಗಾರದ ಮನುಷ್ಯ ಚಿತ್ರ ತೆರೆಕಂಡು (31-3-1972) ಐವತ್ತು ವರ್ಷಗಳು ತುಂಬಿವೆ. ಗಾಂಧಿಯುಗದ ಆದರ್ಶಗಳನ್ನು ಮೈಗೂಡಿಸಿಕೊಂಡ ಕತೆಯನ್ನೊಳ ಗೊಂಡು, ಆ ಕಾಲಕ್ಕೆ ಅದ್ದೂರಿ ಯಾಗಿ ನಿರ್ಮಾಣಗೊಂಡ ಚಿತ್ರವು ಆ ಮಟ್ಟದ ಯಶಸ್ಸನ್ನು ಕಾಣುತ್ತದೆಂಬ ಕಲ್ಪನೆ ಯಾರಲ್ಲೂ ಇರಲಿಲ್ಲ. ಅಕ್ಕನ ಗಂಡನ ಸಾವಿನಿಂದ ಅನಾಥವಾದ ಅವಳ ಮನೆಯ ಪುನರ್ನಿರ್ಮಾಣಕ್ಕೆ ಅರ್ಪಿಸಿಕೊಳ್ಳುವ ವಿದ್ಯಾವಂತ ರಾಜೀವನ ಬದುಕಿನ ವೃತ್ತಾಂತ ಪ್ರೇಕ್ಷಕರನ್ನು ಸೆರೆ ಹಿಡಿದ ಪರಿ ಇಂದಿಗೂ ಒಂದು ವಿಸ್ಮಯ. ಒಂದು ಜನಪ್ರಿಯ ಚಿತ್ರಕ್ಕೆ ಅಗತ್ಯವಾದ ಎಲ್ಲ ಪರಿಕರಗಳನ್ನು ಸಮ ಪ್ರಮಾಣದಲ್ಲಿ ತುಂಬಿದ ಅವರ ಕೌಶಲ್ಯ ಮತ್ತೆ ಎಲ್ಲೂ ಪುನರಾವರ್ತನೆಯಾಗಲಿಲ್ಲ. ಮಲೆನಾಡು ಮತ್ತು ಬಯಲುಸೀಮೆಯ ಹೊರಾಂಗಣ, ಬಣ್ಣದ ಛಾಯಾಗ್ರಹಣ, ಅರ್ಥಗರ್ಭಿತ ಸಾಹಿತ್ಯ, ಮಧುರವಾದ ಗೀತೆಗಳು, ಹದವರಿತ ಅಭಿನಯ, ಅಪೂರ್ವ ಸಂಯೋಜನೆಯ ಸಮೂಹ ನೃತ್ಯ. ಸರಸ, ವಿರಸ, ಹಾಸ್ಯ, ಹಗೆತನ, ಪ್ರೀತಿ, ಔದಾರ್ಯ- ಮಹಾಕಾವ್ಯದ ಮಟ್ಟದಲ್ಲಿ ನಿರ್ವಹಣೆಗೊಂಡ ಮಾನವನರಾಗಭಾವ, ದ್ವೇಷಾಸೂಯೆ, ಕುಟುಂಬವನ್ನು ಕಟ್ಟುವ, ಒಡೆಯುವ, ಗ್ರಾಮವನ್ನು ಪುನರ್ ನಿರ್ಮಿಸುವ ಕ್ರಿಯೆ, ತಾಕಲಾಟಗಳು, ಗ್ರಾಮ ಮತ್ತು ಕುಟುಂಬದ ಬದುಕಿನ ಸಮಾನಾಂತರ ಎಳೆಗಳ ಸೂಕ್ಷ್ಮ್ಮತೆ- ಇವೆಲ್ಲವೂ ‘ಬಂಗಾರದ ಮನುಷ್ಯ’ ಚಿತ್ರವನ್ನು ಅನನ್ಯ ಅನುಭವವಾಗಿಸಿದವು.

ಚಿತ್ರದ ಆರಂಭದಿಂದಲೇ ನಿರ್ದೇಶಕರು ಹೊಸತೊಂದು ಜಾಡು ಹಿಡಿದಿರುವುದು ಸ್ಪಷ್ಟವಾಗುತ್ತದೆ. ಹಿನ್ನೆಲೆಯ ಸಂಗೀತವೇ ಇಲ್ಲದೆ ರೈಲಿನ ಚಲನೆಯ ವಿವಿಧ ಆಯಾಮಗಳನ್ನು ಸೆರೆ ಹಿಡಿದು ಶೀರ್ಷಿಕೆಗಳನ್ನು ತೋರಿಸುತ್ತಾ ಹೋಗುವ ನಿರ್ದೇಶಕರು ಒಂದು ಬಗೆಯ ಸಸ್ಪೆನ್ಸ್ ಸೃಷ್ಟಿಸುತ್ತಾರೆ. ರೈಲಿನ ಒಡಲಿನ ಬೆಂಕಿಗೆ ಸುರಿಯುವ ಕಲ್ಲಿದ್ದಲು, ಭುಸುಗುಡುವ ಆವಿ, ಕಿರ್ರೆನ್ನುವ ಗಾಲಿಗಳು, ಕಿವಿ ತೂತಾಗುವಂತೆ ಕೇಳಿಸುವ ಸೀಟಿಯ ನಂತರ ಹಸಿರ ಗದ್ದೆ ಬಯಲುಗಳಲ್ಲಿ ಮೆಲುದನಿಯಲ್ಲಿ ಮಾತನಾಡುವಂತೆ ಸಾಗುವ ರೈಲು ಕೊನೆಯಲ್ಲಿ ನಿಲ್ದಾಣದಲ್ಲಿ ನಿಂತಾಗ ತೋರಿಸುವುದು ನಾಯಕನ ಕಾಲುಗಳನ್ನು (ಆ ಕಾಲಕ್ಕೆ ನಾಯಕನ ಎಂಟ್ರಿಯನ್ನು ಈ ರೀತಿಯ ಶೈಲಿಯಲ್ಲಿ ತೋರಿಸುವ ಕ್ರೇಜ್ ಇತ್ತು. ‘ಬಂಗಾರದ ಮನುಷ್ಯ’ ಚಿತ್ರದ ಆ ದೃಶ್ಯಕ್ಕೆ ಅನೇಕ ವಿಮರ್ಶಕರು ಆಕ್ಷೇಪಿಸಿದ್ದರು) ಅದರ ನಂತರ ಮಲೆನಾಡ ಕಣಿವೆ ಹೊಲಗಳಲ್ಲಿ ಆರಂಭವಾಗುವ ‘‘ನಗು ನಗುತಾ ನಲಿ’’ ಹಾಡು. ಅದೊಂದು ಜೀವ ವಿಕಾಸದ ಹಾಡು. ನಿಸರ್ಗದ ಭವ್ಯತೆಯ ನಂತರ ಬಾಲ್ಯಾವಸ್ಥೆ, ಶಿಕ್ಷಣಾವಸ್ಥೆ, ಮದುವೆ, ಮುಪ್ಪಿನ ವಿವಿಧ ಹಂತಗಳನ್ನು ತಟ್ಟುತ್ತಾ ಕೊನೆಯಾಗುವ ಹಾಡು ಬಿಚ್ಚಿಕೊಳ್ಳುವುದು ನಾಯಕನ ಬಾವನ ಸಾವಿನಲ್ಲಿ!

ಹೀಗೆ ಅನಾಥವಾದ ಸಂಸಾರದ ಹೊಣೆ ಹೊತ್ತ ರಾಜೀವ ನೆಲೆಯಾಗುವುದು ಹಳ್ಳಿಯಲ್ಲಿ. ತರ್ಕಕ್ಕೂ ಸಿಗದ ರೀತಿಯಲ್ಲಿ ಬೆಳವಣಿಗೆ ಕಾಣುವ ರಾಜೀವ ಕೊನೆಗೂ ಉದ್ಧರಿಸಿದವರಿಂದಲೇ ದೂರವಾಗುವ ದುರಂತವನ್ನು ತಂದುಕೊಳ್ಳುತ್ತಾನೆ.

ಈ ಮುಖ್ಯ ಕತೆಗೆ ಸಮಾನಾಂತರವಾಗಿ ಹಲವಾರು ಎಳೆಗಳನ್ನು ನೇಯುತ್ತಾ ಹಳ್ಳಿಯ ಸ್ಥಿತ್ಯಂತರಗಳ ಚಿತ್ರಗಳನ್ನು ನಿರ್ದೇಶಕ ಬಿಡಿಸಿಡುತ್ತಾರೆ. ರಾಚೂಟಪ್ಪನೆಂಬ ಹಳ್ಳಿಯ ಔದಾರ್ಯ ಪುರುಷ, ಜಮೀನು ಕಳೆದುಕೊಂಡ ಚನ್ನನ ಪರಿತಾಪ, ರಾಜೀವ-ಲಕ್ಷ್ಮಿಯರ ವಿಶಿಷ್ಟ ಪ್ರೇಮಕಥನ. ಲಕ್ಷ್ಮಿಯ ದುರಂತ ಸಾವು. ಇವರೆಲ್ಲರ ಜೊತೆಗೆ ಗ್ರಾಮ ಪುನರ್ನಿರ್ಮಾಣದ ಎಳೆಗಳೂ ಸೇರಿಕೊಂಡು ಸಮಗ್ರ ಸಂಸ್ಕೃತಿಯೊಂದು ಮಾತನಾಡು ತ್ತಿರುವ ಅನುಭವವಾಗುತ್ತದೆ. ರಾಜ್, ಬಾಲಕೃಷ್ಣ, ಭಾರತಿ, ಲೋಕನಾಥ್, ದ್ವಾರಕೀಶ್, ಆರತಿ, ಆದವಾನಿ ಲಕ್ಷ್ಮೀದೇವಿ, ವಜ್ರಮುನಿ ಅವರ ಪಾತ್ರೋಚಿತ ಅಭಿನಯಕ್ಕೂ ಈ ಚಿತ್ರದ ಯಶಸ್ಸಿನಲ್ಲಿ ಪಾಲಿದೆ. ಡಾ.ರಾಜ್ ಅವರ ವೃತ್ತಿ ಬದುಕಿನ ಒಂದು ಹೊರಳು ಈ ಚಿತ್ರದಿಂದಲೇ ಆರಂಭವಾಯಿತೆನ್ನಬಹುದು. ಪ್ರೇಕ್ಷಕರ ಕಣ್ಣಿನಲ್ಲಿ ರಾಜ್‌ರವರ ಪಾತ್ರಗಳು ಆದರ್ಶದ, ತ್ಯಾಗದ, ಪ್ರೀತಿಯ ಅತಿಮಾನವ ಬಿಂಬಗಳಾಗಿ ಬೆಳೆಯಲು ಈ ಚಿತ್ರ ನಾಂದಿ ಹಾಡಿತು. ಟಿ.ಕೆ. ರಾಮರಾಯರ ಸಾಧಾರಣ ಕಾದಂಬರಿಯೊಂದನ್ನು ಆಧರಿಸಿದ ಚಿತ್ರಕತೆಗೆ ಸಿದ್ಧಲಿಂಗಯ್ಯನವರು ಅನೇಕ ಮಾರ್ಪಾಡುಗಳನ್ನು ತಂದರು. ಮುಖ್ಯವಾಗಿ ಕತೆಯಲ್ಲಿ ರಾಜೀವನ ಪ್ರೇಯಸಿಯಾಗಿದ್ದ ಆರತಿಯ ಪಾತ್ರವನ್ನು ಬಾವನ ಎರಡನೆಯ ಹೆಂಡತಿಯನ್ನಾಗಿ ರೂಪಿಸಿದ್ದು, ಒಂದು ನಾಯಕನ ಇಮೇಜಿಗೆ ಧಕ್ಕೆ ಬರಬಾರದೆಂಬ ಕಾರಣದಿಂದ ಆ ಮಾರ್ಪಾಡು. ಹಾಗೆಯೇ ಗ್ರಾಮ ಪುನರ್ನಿರ್ಮಾಣ ಸಹ ಅವರ ಕಲ್ಪನೆಯ ಕೂಸು.

Writer - ಡಾ.ಕೆ. ಪುಟ್ಟಸ್ವಾಮಿ

contributor

Editor - ಡಾ.ಕೆ. ಪುಟ್ಟಸ್ವಾಮಿ

contributor

Similar News