ಇಬ್ಬರು ಭಾರತೀಯರು ಸೇರಿದಂತೆ 25 ನೂತನ ಭಯೋತ್ಪಾದಕರ ಪಟ್ಟಿ ಬಿಡುಗಡೆ ಮಾಡಿದ ಸೌದಿ

Update: 2022-04-01 12:08 GMT
Saudi Arabia’s Presidency of State Security  (Twitter)

ರಿಯಾದ್: ಸೌದಿ ಅರೇಬಿಯಾ ಗುರುವಾರ ಭಯೋತ್ಪಾದಕರ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಸೇರಿದಂತೆ 25 ಮಂದಿಯ ಹೆಸರುಗಳಿವೆ.

ಪಟ್ಟಿಯಲ್ಲಿರುವ ಇಬ್ಬರು ಭಾರತೀಯರನ್ನು ಚಿರಂಜೀವ್ ಕುಮಾರ್ ಸಿಂಗ್ ಮತ್ತು ಮನೋಜ್ ಸಬರ್ವಾಲ್ ಎಂದು ಗುರುತಿಸಲಾಗಿದೆ.

ಐಆರ್‌ಜಿಸಿ-ಕ್ಯೂಎಫ್‌ನ ಬೆಂಬಲದೊಂದಿಗೆ ಭಯೋತ್ಪಾದಕ ಹೌದಿ ಸಂಘಟನೆ ಪರವಾಗಿ ಹಣಕಾಸು ಒದಗಿಸಲು ಅನುಕೂಲವಾಗುವಂತೆ ಮಾಡುವಲ್ಲಿ ಭಾಗಿಯಾದ 25 ಮಂದಿಯನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ ಎಂದು ಸೌದಿ ಅರೇಬಿಯಾದಲ್ಲಿನ ʼಪ್ರೆಸಿಡೆನ್ಸಿ ಆಫ್ ಸ್ಟೇಟ್ ಸೆಕ್ಯುರಿಟಿʼಯ ಅಧಿಕೃತ ಹೇಳಿಕೆ ತಿಳಿಸಿದೆ.

ಯೆಮೆನ್ ಮೂಲದ ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆ ಹೌದಿಗೆ ಹಣಕಾಸು ಒದಗಿಸಲು ಅನುಕೂಲವಾಗುವಂತೆ ಮಾಡುವಲ್ಲಿ ತೊಡಗಿಸಿಕೊಂಡ ಆರೋಪ ಇವರ ಮೇಲಿದೆ ಎಂದು saudigazette.com ವರದಿ ಮಾಡಿದೆ.  ಐಆರ್‌ಜಿಸಿ-ಕ್ಯೂಎಫ್ (ಇರಾನಿಯನ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್-ಕುಡ್ಸ್ ಫೋರ್ಸ್) ಬೆಂಬಲದೊಂದಿಗೆ ಯೆಮೆನ್‌ನಲ್ಲಿರುವ ಹೌದಿ ಭಯೋತ್ಪಾದಕ ಸಂಘಟನೆಗೆ ಧನಸಹಾಯ ಮಾಡಿದ್ದಾರೆ ಎಂದು ವರದಿಯಾಗಿವೆ.

ಅಲ್ ಜಝೀರಾದ ವರದಿಯ ಪ್ರಕಾರ, ಮನೋಜ್ ಸಬರ್ವಾಲ್ ಮ್ಯಾರಿಟೈಮ್ ಶಿಪ್ಪಿಂಗ್ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದರು. ಅವರು ಈ ಹಿಂದೆ ಇರಾನ್‌ನಲ್ಲಿ ಕಳ್ಳಸಾಗಣೆದಾರರ ಪಟ್ಟಿಯಲ್ಲಿದ್ದರು.

ಚಿರಂಜೀವ್ ಕುಮಾರ್ ಸಿಂಗ್ ಅವರು ʼಔರಮ್ ಶಿಪ್ ಮ್ಯಾನೇಜ್‌ಮೆಂಟ್ ಫ್ರೀಝೋನ್ʼ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಎಂದು ವರದಿಯಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಈ ಕಂಪನಿಯನ್ನು ಅಮೆರಿಕ ನಿಷೇಧಿಸಿತ್ತು. ಕಂಪನಿಯು ಹೌದಿ ಮತ್ತು ಬಂಡುಕೋರ-ನಿಯಂತ್ರಿತ ಬಂದರುಗಳಿಗೆ ತೈಲ ಪೂರೈಕೆಯನ್ನು ನಿಯಂತ್ರಿಸುತ್ತದೆ ಎಂದು ವರದಿ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News