×
Ad

'ಪರೇಶಾನಿ ಪೆ ಚರ್ಚಾ 'ಯಾವಾಗ ನಡೆಸುತ್ತೀರಿ?: ಪ್ರಧಾನಿ ಮೋದಿಗೆ ಎನ್ಸಿಪಿ ಪ್ರಶ್ನೆ

Update: 2022-04-01 20:14 IST
Sharad pawar(photo pti)

ಮುಂಬೈ,ಎ.1: ಪ್ರಧಾನಿ ನರೇಂದ್ರ ಮೋದಿಯವರು 'ಪರೀಕ್ಷಾ ಪೆ ಚರ್ಚಾ (ಪರೀಕ್ಷೆಗಳ ಕುರಿತು ಚರ್ಚೆ)' ನಡೆಸುವುದನ್ನು ಶರದ್ ಪವಾರ್ ನೇತೃತ್ವದ ಎನ್ಸಿಪಿ ಶುಕ್ರವಾರ ಸ್ವಾಗತಿಸಿತಾದರೂ, ಜನಸಮಾನ್ಯರ ಕಳವಳಗಳನ್ನು ನಿವಾರಿಸಲು 'ಪರೇಶಾನಿ ಪೆ ಚರ್ಚಾ (ಜನರ ಸಂಕಷ್ಟಗಳ ಕುರಿತು ಚರ್ಚೆ)' ಯಾವಾಗ ನಡೆಸುತ್ತೀರಿ ಎಂದು ಅವರನ್ನು ಪ್ರಶ್ನಿಸಿದೆ.

ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳು,ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಿ ಮೋದಿಯವರ 'ಪರೀಕ್ಷಾ ಪೆ ಚರ್ಚಾ' ಸಂವಾದ ಕಾರ್ಯಕ್ರಮವನ್ನು ನೋಡುವಂತೆ ಕೆಲವು ಸೆಲೆಬ್ರಿಟಿಗಳು ಜನರನ್ನು ಒತ್ತಾಯಿಸಿದ್ದಾರೆ ಎಂದು ಹೇಳಿದ ಎನ್ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೋ, ಇದೇ ರೀತಿ ಜನರ ಬವಣೆಗಳ ಬಗ್ಗೆ ಸಂವಾದವನ್ನು ನಡೆಸುವ ಬಗ್ಗೆ ಅವರು ಪ್ರಧಾನಿಯನ್ನು ಯಾವಾಗ ಪ್ರಶ್ನಿಸಲಿದ್ದಾರೆ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದರು.''ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳು ಒತ್ತಡದಲ್ಲಿರುತ್ತಾರೆ. ಅವರನ್ನು ಒತ್ತಡಮುಕ್ತಗೊಳಿಸಲು ಅವರೊಂದಿಗೆ ಸಂವಾದ ನಡೆಸುತ್ತಿರುವುದಕ್ಕಾಗಿ ಪ್ರಧಾನಿಯವರಿಗೆ ನಾವು ಧನ್ಯವಾದ ಹೇಳುತ್ತೇವೆ. ಆದರೆ ವಿದ್ಯಾರ್ಥಿಗಳ ಪೋಷಕರು ಮತ್ತು ಜನಸಾಮಾನ್ಯರ ಕಳವಳಗಳನ್ನು ನಿವಾರಿಸಲು 'ಪರೇಶಾನಿ ಪೆ ಚರ್ಚಾ 'ವನ್ನು ಅವರು ಯಾವಾಗ ನಡೆಸಲಿದ್ದಾರೆ ''ಎಂದು ಪ್ರಶ್ನಿಸಿದರು.ಪೆಟ್ರೋಲ್,ಡೀಸೆಲ್ ಮತ್ತು ಎಲ್ಪಿಜಿ ಸಿಲಿಂಡರ್ ಬೆಲೆಗಳು ಪ್ರತಿದಿನವೂ ಹೆಚ್ಚುತ್ತಿವೆ ಮತ್ತು ನಿರುದ್ಯೋಗವು ಕಳವಳಕಾರಿ ವಿಷಯವಾಗಿದೆ ಎಂದು ಕ್ಯಾಸ್ಟ್ರೋ ಹೇಳಿದರು.


ಬೆಲೆಏರಿಕೆಯಿಂದಾಗಿ ಸಾಮಾನ್ಯ ಜನರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸೆಲೆಬ್ರಿಟಿಗಳು ಎಂದಾದರೂ ಯೋಚಿಸಿದ್ದಾರಾ ಎಂದೂ ಅವರು ಪ್ರಶ್ನಿಸಿದರು.'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು,ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸುವ ಮೋದಿ,ಪರೀಕ್ಷೆಯ ಒತ್ತಡ ಮತ್ತು ಸಂಬಂಧಿತ ಪ್ರಶ್ನೆಗಳ ಬಗ್ಗೆ ಮಾತನಾಡುತ್ತಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News