ಗೋಳಾಕಾರದ ಅಕ್ವೇರಿಯಂ ನಿಷೇಧಕ್ಕೆ ಬೆಲ್ಜಿಯಂ ಚಿಂತನೆ
ಬ್ರಸೆಲ್ಸ್, ಎ.1: ಗುಂಡಗಿನ ಅಕ್ವೇರಿಯಂ(ಮೀನು ಸಾಕುವ ತೊಟ್ಟಿ)ಗಳು ಮೀನುಗಳಿಗೆ ಒತ್ತಡಕ್ಕೆ ಕಾರಣವಾಗುವುದರಿಂದ ಅವನ್ನು ನಿಷೇಧಿಸಲು ಯೋಜಿಸಲಾಗಿದೆ ಎಂದು ಬೆಲ್ಜಿಯಂ ಸರಕಾರದ ಮೂಲವನ್ನು ಉಲ್ಲೇಖಿಸಿ ದಿ ಟೆಲಿಗ್ರಾಫ್ ವರದಿ ಮಾಡಿದೆ.
ಸಾಂಪ್ರದಾಯಿಕ ಗೋಳಾಕಾರದ ಮೀನು ಸಾಕಾಣೆ ತೊಟ್ಟಿಗಳು ಮೀನುಗಳಿಗೆ ಒತ್ತಡ ಉಂಟುಮಾಡುವುದರಿಂದ ಅವನ್ನು ಪ್ರಾಣಿಗಳ ಯೋಗಕ್ಷೇಮದ ದೃಷ್ಟಿಯಿಂದ ನಿಷೇಧಿಸುವ ಅಗತ್ಯವಿದೆ . ದೇಶದ ಪ್ರಾಣಿ ಕಾನೂನುಗಳ ಕೂಲಂಕುಷ ಪರಿಶೀಲನೆಯ ಬಳಿಕ ಈ ಕ್ರಮವನ್ನು ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚೌಕ ಅಥವಾ ಆಯತಾಕಾರಕ್ಕೆ ಹೋಲಿಸಿದರೆ ಗುಂಡಗಿನ(ಉರುಟು ಆಕೃತಿಯ) ಮೀನಿನ ತೊಟ್ಟಿಯಲ್ಲಿ ಮೀನುಗಳಿಗೆ ಚಲಿಸಲು ದೊರಕುವ ಸ್ಥಳಾವಕಾಶ ಸೀಮಿತವಾಗಿದೆ. ಇದರಿಂದ ನೀರಿನಲ್ಲಿ ಹೀರಿಕೊಳ್ಳುವ ಆಮ್ಲಜನಕದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಚಲನವಲನಕ್ಕೆ ಕಡಿಮೆ ಅವಕಾಶ ಇರುವ ತೊಟ್ಟಿಗಳು ಮೀನುಗಳ ಆರೋಗ್ಯಕ್ಕೆ ಅಪಾಯ ಉಂಟುಮಾಡಬಹುದು ಎಂದು ಬೆಲ್ಜಿಯಂನ ಪ್ರಾಣಿಗಳ ಕ್ಷೇಮಾಭಿವೃದ್ಧಿ ಇಲಾಖೆಯ ಸಚಿವ ಬರ್ನಾರ್ಡ್ ಕ್ಲರ್ಫಾಯ್ಟಿ ಅವರನ್ನು ಉಲ್ಲೇಖಿಸಿ ಅಲ್ಲಿನ ದಿನಪತ್ರಿಕೆ ಲಾ ಕ್ಯಾಪಿಟಲ್ ವರದಿ ಮಾಡಿದೆ.
ಪ್ರಸ್ತಾವಿತ ನಿಷೇಧ ಬ್ರಸೆಲ್ಸ್ ರಾಜಧಾನಿ ಪ್ರದೇಶದ ವಲಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಗುಂಡಗಿನ ಅಕ್ವೇರಿಯಂನ ಮಾರಾಟಕ್ಕೆ ಮಾತ್ರ ನಿಷೇಧ ಇರುತ್ತದೆ, ಬಳಕೆಗೆ ಅಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಸಾಕುಪ್ರಾಣಿಗಳಿಗೆ ಹಾನಿಯುಂಟು ಮಾಡುವ ವಸ್ತುಗಳ ಪಟ್ಟಿಯಲ್ಲಿ ಪಟಾಕಿ ಸಿಡಿಸುವುದು, ನಾಯಿಗಳ ಕುತ್ತಿಗೆಗೆ ಇಲೆಕ್ಟ್ರಿಕ್ ಕೊರಳಪಟ್ಟಿ ಮುಂತಾದವು ಸೇರಿದೆ ಎಂದು ವರದಿಯಾಗಿದೆ. ಬೆಲ್ಜಿಯಂನಲ್ಲಿ ಪ್ರಾಣಿಗಳ ವಿರುದ್ಧದ ಕ್ರೌರ್ಯಕ್ಕೆ ಕಠಿಣ ಶಿಕ್ಷೆ ನೀಡುವ ನಿಯಮವಿದ್ದು ಈ ಅಪರಾಧ ಎಸಗಿದವರಿಗೆ ಗರಿಷ್ಟ 15 ವರ್ಷ ಜೈಲುಶಿಕ್ಷೆ ಮತ್ತು 10 ಮಿಲಿಯನ್ ಯುರೋ ದಂಡ ವಿಧಿಸಲಾಗುತ್ತದೆ.