ರಾಣಾ ಅಯ್ಯೂಬ್‌ ವಿದೇಶ ಪ್ರಯಾಣಕ್ಕೆ ದಿಲ್ಲಿ ಹೈಕೋರ್ಟ್‌ ಅನುಮತಿ

Update: 2022-04-04 12:45 GMT

ಹೊಸದಿಲ್ಲಿ: ವಿದೇಶಕ್ಕೆ ಪ್ರಯಾಣಿಸದಂತೆ ವಿಮಾನ ನಿಲ್ದಾಣದಲ್ಲೇ ತಡೆಯಲ್ಪಟ್ಟಿದ್ದ ಪತ್ರಕರ್ತೆ ರಾಣಾ ಅಯ್ಯೂಬ್‌ ಗೆ ವಿದೇಶ ಪ್ರಯಾಣ ಮಾಡಲು ಇಂದು ದಿಲ್ಲಿ ಹೈಕೋರ್ಟ್‌ ಅನುಮತಿ ನೀಡಿದೆ.

ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್‌ ರಾಣಾ ಅಯ್ಯೂಬ್‌ ಅವರ ರಿಟ್‌ ಅರ್ಜಿಯನ್ನು ಅನುಮತಿಸಿದ್ದಾರೆ ಎಂದು Bar and Bench ವರದಿ ಮಾಡಿದೆ.

ಕೋವಿಡ್-19 ಪರಿಹಾರ ನಿಧಿಯ ದುರುಪಯೋಗದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಾಣಾ ಅಯ್ಯೂಬ್‌ ರಿಗೆ ಇಮೇಲ್ ಮೂಲಕ ನೀಡಿದ ಸಮನ್ಸ್‌ಗಳನ್ನು ಉಲ್ಲೇಖಿಸಿ ಮಾರ್ಚ್ 30 ರಂದು ಅವರನ್ನು ವಿದೇಶ ಪ್ರಯಾಣ ಮಾಡದಂತೆ ವಿಮಾನ ನಿಲ್ದಾಣದಲ್ಲೇ ತಡೆಯಲಾಗಿತ್ತು.

ಏಪ್ರಿಲ್ 1 ರಂದು ಅಯ್ಯೂಬ್ ಅವರ ಕಾರ್ಯಕ್ರಮ ಯುರೋಪಿನಲ್ಲಿ ನಡೆಯಲಿತ್ತು. ಮಹಿಳಾ ಪತ್ರಕರ್ತರ ಮೇಲಿನ ದೌರ್ಜನ್ಯದ ವಿಷಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಭಾಷಣಗಳನ್ನು ನೀಡಲು ಅಯ್ಯೂಬ್ ಯುರೋಪ್‌ಗೆ ಪ್ರಯಾಣಿಸುತ್ತಿದ್ದರು.

ಮಾರ್ಚ್ 31 ರಂದು, ಅಯ್ಯೂಬ್ ಅವರು ವಿದೇಶ ಪ್ರವಾಸಕ್ಕೆ ಇಡಿ ನಿರ್ಬಂಧವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇಡಿ ಪರ ವಕೀಲ ಎಎಸ್‌ಜಿ ರಾಜು ಅವರು ʼರಾಣಾ ಇಡಿ ತನಿಖೆಗೆ ಸಹಕರಿಸುತ್ತಿಲ್ಲ, ಅವರು ವಿದೇಶಕ್ಕೆ ಓಡಿ ಹೋಗುತ್ತಿದ್ದಾರೆʼ ಎಂದು ಇಡಿ ಕ್ರಮವನ್ನು ಸಮರ್ಥಿಸಿದ್ದಾರೆ. ವಿಚಾರಣೆಯನ್ನು ಆಲಿಸಿದ ನ್ಯಾಯಪೀಠ, ವಿಚಾರಣೆಗೆ ಸಹಕರಿಸುವುದಿಲ್ಲವಾದರೆ ನೀವು ಆಕೆಯನ್ನು ಬಂಧಿಸುವುದಿಲ್ಲ ಯಾಕೆ ಎಂದು ಪ್ರಶ್ನಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News