ಕೋವಿಡ್ ಔಷಧಿಗಳಿಗೆ ಶೇ.5 ಜಿಎಸ್‌ಟಿ: ಕೇಂದ್ರ

Update: 2022-04-04 16:29 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ,ಎ.4: ಸಾಂಕ್ರಾಮಿಕವು ಆರಂಭಗೊಂಡಾಗಿನಿಂದ ಕೋವಿಡ್ ಔಷಧಿಗಳು ಮತ್ತು ಉಪಕರಣಗಳನ್ನು ಶೇ.5ರ ಜಿಎಸ್‌ಟಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಮತ್ತು ಇತರ ಔಷಧಿಗಳಿಗೆ ಶೇ.5ರಿಂದ ಶೇ.12ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತಿದೆ ಎಂದು ಕೇಂದ್ರ ಸಹಾಯಕ ವಿತ್ತಸಚಿವ ಪಂಕಜ ಚೌಧರಿ ಅವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು. ದೇಶದಲ್ಲಿಯ ಶೇ.66ರಷ್ಟು ಸರಕಾರಿ ಪ್ರಾಯೋಜಿತ ಆರೋಗ್ಯ ವಿಮೆ ಯೋಜನೆಗಳನ್ನು ಕೇಂದ್ರ ಸರಕಾರವೇ ನಡೆಸುತ್ತಿದೆ ಎಂದೂ ಅವರು ಹೇಳಿದರು.

ಪ್ರಶ್ನೆವೇಳೆಯಲ್ಲಿ ಮಾತನಾಡುತ್ತಿದ್ದ ಅವರು,ಆರೋಗ್ಯ ವಿಮೆಗೆ ಜಿಎಸ್‌ಟಿ ದರ ಶೇ.5 ಆಗಿದ್ದು,ಇದು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿದೆ ಮತ್ತು ದೇಶದಲ್ಲಿ ಸಾಂಕ್ರಾಮಿಕಕ್ಕೆ ಮೊದಲು ಇದೇ ದರವಿತ್ತು ಎಂದರು. ಹಿರಿಯ ನಾಗರಿಕರು ಆರೋಗ್ಯ ವಿಮೆ ಪಾಲಿಸಿಗಳ ಮೇಲೆ ಒಂದು ಲ.ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದು ಎಂದು ಸಚಿವರು ತಿಳಿಸಿದರು.
 
ಎಲ್ಲ ಸೇವೆಗಳ (ಆರೋಗ್ಯ ವಿಮೆ ಪ್ರೀಮಿಯಂ ಮೇಲಿನ ಜಿಎಸ್‌ಟಿ ಸೇರಿದಂತೆ) ಮೇಲೆ ಜಿಎಸ್‌ಟಿ ದರಗಳು ಮತ್ತು ವಿನಾಯಿತಿಗಳನ್ನು ಜಿಎಸ್ಟಿ ಮಂಡಳಿಯ ಶಿಫಾರಸುಗಳಿಗೆ ಅನುಗುಣವಾಗಿ ನಿಗದಿಗೊಳಿಸಲಾಗಿದೆ ಎಂದ ಅವರು,ಪ್ರಸ್ತುತ ಆರೋಗ್ಯ ವಿಮೆ ಸೇವೆಗಳ ಮೇಲೆ ಶೇ.18ರ ಸ್ಟಾಂಡರ್ಡ್ ಜಿಎಸ್‌ಟಿ ದರವನ್ನು ವಿಧಿಸಲಾಗುತ್ತಿದೆ. ರಾಷ್ಟ್ರೀಯ ಸ್ವಾಸ್ಥ ವಿಮೆ ಯೋಜನೆ,ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆ,ಜನ ಆರೋಗ್ಯ ವಿಮೆ ಪಾಲಿಸಿ ಮತ್ತು ನಿರಾಮಯ ಆರೋಗ್ಯ ವಿಮೆ ಯೋಜನೆಯಂತಹ ಆರ್ಥಿಕವಾಗಿ ದುರ್ಬಲ ವರ್ಗಗಳಿಗಾಗಿರುವ ನಿರ್ದಿಷ್ಟ ಆರೋಗ್ಯ ವಿಮೆ ಯೋಜನೆಗಳಿಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿಯನ್ನು ನೀಡಲಾಗಿದೆ. ಆರೋಗ್ಯ ರಕ್ಷಣೆ ಸೇವೆಗಳಿಗೂ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.

ಆರೋಗ್ಯ ವಿಮೆಯ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವಂತೆ ಅಹವಾಲುಗಳನ್ನು 2018,ಡಿ.22ರಂದು ನಡೆದಿದ್ದ ಜಿಎಸ್‌ಟಿ ಮಂಡಳಿಯ 31ನೇ ಮತ್ತು 2019,ಸೆ.20ರಂದು ನಡೆದಿದ್ದ 37ನೇ ಸಭೆಗಳಲ್ಲಿ ಮಂಡಿಸಲಾಗಿತ್ತು. ಆದರೆ ಜಿಎಸ್‌ಟಿಯನ್ನು ಕಡಿಮೆಗೊಳಿಸುವ ಬಗ್ಗೆ ಜಿಎಸ್‌ಟಿ ಮಂಡಳಿಯು ಶಿಫಾರಸು ಮಾಡಿರಲಿಲ್ಲ ಎಂದು ಚೌಧರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News