ಶ್ರೀಲಂಕಾಕ್ಕೆ ಭಿಕ್ಷಾಪಾತ್ರೆ ಹಿಡಿಸಿದ ‘ರಾಜಪಕ್ಸ’ಗಳು!

Update: 2022-04-05 05:59 GMT
ಶ್ರೀಲಂಕಾ

ಒಂದು ಕಾಲದಲ್ಲಿ ಶಾಂತಿಯುತ ದೇಶವಾಗಿದ್ದ ನೆರೆಯ ಶ್ರೀಲಂಕಾ, ನಾಲ್ಕು ದಶಕಗಳ ಹಿಂದೆ ಪ್ರಪಂಚದ ಅತ್ಯಂತ ಭೀಕರ ರಕ್ತಸಿಕ್ತ ಅಂತರ್ಯುದ್ಧವನ್ನು ಕಂಡಿತು. ನಂತರ ಅದು ನಾಟಕೀಯವಾಗಿ ಚೇತರಿಸಿಕೊಂಡಿತ್ತು. ಆದರೀಗ ಆದು ಮತ್ತೆ ಹಿಂದೆಂದೂ ಕಾಣದ ಆರ್ಥಿಕ, ಸಾಮಾಜಿಕ ಬಿಕ್ಕಟ್ಟಿಗೆ ಸಿಕ್ಕಿಕೊಂಡಿದೆ. ಈ ಬಾರಿ ಅದಕ್ಕೆ ಹೊಣೆಯಾಗಿರುವುದು ರಾಜಪಕ್ಸ ಕುಟುಂಬದ ಬಲಪಂಥೀಯ ಸರ್ವಾಧಿಕಾರಿ ಪ್ರವೃತ್ತಿಯ, ಮಿಲಿಟರಿ ತೆವಲಿನ, ಭ್ರಷ್ಟಾಚಾರಿ ದುರಾಡಳಿತ. ಜನರ ಸಹನೆಯ ಕಟ್ಟೆಯೊಡೆದು ಶ್ರೀಲಂಕಾದ ಬೀದಿಗಳಲ್ಲಿ ಸಿಟ್ಟಿನ ಪ್ರವಾಹ ಹರಿಯುತ್ತಿರುವಂತೆಯೇ, ಸರಕಾರ ರಾಜೀನಾಮೆ ನೀಡುವ ಬದಲು, ಮಿಲಿಟರಿಗೆ ದಮನಕಾರಿ ಅಧಿಕಾರ ನೀಡುವ ತುರ್ತುಪರಿಸ್ಥಿತಿ ಘೋಷಿಸಿ, ಸಂಪೂರ್ಣ ಸರ್ವಾಧಿಕಾರದತ್ತ ಇನ್ನೊಂದು ಹೆಜ್ಜೆ ಇಟ್ಟಿದೆ.

ಭಾರತದ ಬಹುತೇಕ ಸಾಮಾನ್ಯ ಜನರನ್ನು ಕೇಳಿದರೆ, ಅವರಿಗೆ ಗೊತ್ತಿರುವುದು ಶ್ರೀಲಂಕಾದ ಕ್ರಿಕೆಟ್ ಮತ್ತದರ ತಾರೆಯರ ಬಗ್ಗೆ ಮಾತ್ರ. ಇಲ್ಲಿನ ಬಲಪಂಥೀಯರನ್ನು ಕೇಳಿದರೆ, ಶ್ರೀಲಂಕಾವು ಭಾರತದ ಭಾಗವಾಗಿದ್ದು, ರಾಮನು ರಾವಣನನ್ನು ಸೋಲಿಸಿದುದರಿಂದ ಅದು ನಮ್ಮದು ಎಂದೂ ಹೇಳಬಹುದು. ಕೆಲವರಿಗೆ ಅಲ್ಲಿ ನಡೆದ ಅಂತರ್ಯುದ್ಧ, ಪ್ರಭಾಕರನ್, ರಾಜೀವ್ ಗಾಂಧಿ ಹತ್ಯೆ ಇತ್ಯಾದಿ ಮಾತ್ರ ಗೊತ್ತಿರಬಹುದು. ಆದರೆ, ಅಲ್ಲಿ ಪ್ರಸ್ತುತ ರಾಜ್ಯಭಾರ ನಡೆಸುತ್ತಿರುವ ಸರ್ವಾಧಿಕಾರಿ ಪ್ರವೃತ್ತಿಯ ರಾಜಪಕ್ಸ ಕುಟುಂಬ ಮತ್ತು ಅದು ದೇಶವನ್ನು ದಿವಾಳಿಯ ಅಂಚಿಗೆ ತಂದಿರುವ ಬಗ್ಗೆ ಅನೇಕರು ಗಮನಹರಿಸಿರಲಾರರು ಮತ್ತು ಅಲ್ಲಿ ಬಲಪಂಥೀಯ ಧಾರ್ಮಿಕ ರಾಜಕಾರಣದ ಅಪಾಯಗಳ ಕುರಿತು ಭಾರತದಂತಹ ದೇಶಗಳಿಗೆ ಎಚ್ಚರಿಕೆ ನೀಡುವ ಪಾಠಗಳಿರುವ ಕುರಿತಂತೂ ಯೋಚಿಸಿರಲೂ ಸಾಧ್ಯವಿಲ್ಲ.

ಶ್ರೀಲಂಕಾದಲ್ಲಿ ಇದೀಗ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾ ಕಲ್ಲೆಸೆತ, ಲೂಟಿ, ಬೆಂಕಿಹಚ್ಚುವಿಕೆ, ಸರಕಾರಿ ಕಚೇರಿಗಳಿಗೆ ದಾಳಿ ಮುಂತಾದ ಕೃತ್ಯಗಳಲ್ಲಿ ತೊಡಗಿದ್ದಾರೆ; ಸರಕಾರವು ಸೇನೆಗೆ ಯಾವುದೇ ಕಾರಣ ನೀಡದೆ ಬಂಧಿಸಿ, ಯಾವುದೇ ವಿಚಾರಣೆ ಇಲ್ಲದೆ ಅನಿರ್ದಿಷ್ಟಾವಧಿಗೆ ಜೈಲಿಗೆ ತಳ್ಳುವ ವಿಶೇಷಾಧಿಕಾರ ನೀಡಿದ್ದು, ದೇಶದಾದ್ಯಂತ ತುರ್ತುಪರಿಸ್ಥಿತಿ ಘೋಷಿಸಿದೆ. ಅಂದರೆ, ವಸ್ತುಶಃ ಎಲ್ಲಾ ರೀತಿಯ ನಾಗರಿಕ ಹಕ್ಕುಗಳನ್ನು ಆಮಾನತಿನಲ್ಲಿ ಇಡಲಾಗಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ದೇಶವು ಒಂದು ದೊಡ್ಡ ದುರಂತದತ್ತ ದಾಪುಗಾಲು ಇಡುತ್ತಿರುವ ಕಾರಣದಿಂದಲೇ ವಿವಿಧ ಹಿತಾಸಕ್ತಿಗಳನ್ನು ಹೊಂದಿರುವ ಕೆಲವು ದೇಶಗಳ ಗಮನ ಸೆಳೆದಿದೆ.

ಪ್ರಸ್ತುತ ಈ ದ್ವೀಪದ ಆರ್ಥಿಕ ಪರಿಸ್ಥಿತಿ ದಿವಾಳಿಯ ಅಂಚಿಗೆ ತಲಪಿದೆ. ಆಲ್ಲಿನ ಜನರ ಸಂಕಷ್ಟಗಳು ಮತ್ತು ಜನರನ್ನು ರೊಚ್ಚಿಗೆಬ್ಬಿಸಲು ಕಾರಣವಾದ ಪರಿಸ್ಥಿತಿಯ ಕುರಿತು ಚುಟುಕಾಗಿ ನೋಡೋಣ. ಅಲ್ಲಿ ಅಕ್ಕಿ, ತರಕಾರಿ, ದವಸ ಧಾನ್ಯಗಳು, ಸಕ್ಕರೆ, ಅಡುಗೆ ಅನಿಲ ಇತ್ಯಾದಿ ಎಲ್ಲಾ ಜೀವನೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿದೆ. ನಿರುದ್ಯೋಗ ಸಮಸ್ಯೆ ಮೇರೆ ಮೀರಿದೆ. ವಿತರಣಾ ವ್ಯವಸ್ಥೆಗಳು ನನೆಗುದಿಗೆ ಬಿದ್ದಿದ್ದು, ಅಗತ್ಯ ವಸ್ತುಗಳ ತೀವ್ರ ಕೊರತೆ ಉಂಟಾಗಿದೆ. ಒಂದು ಕೆಜಿ ಆಕ್ಕಿಯ ಬೆಲೆ 200ರ ಆಸುಪಾಸಿನಲ್ಲಿದೆ ಮತ್ತು ಕಾಗದದ ಕೊರತೆಯಿಂದ ಮಕ್ಕಳ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಹೇಳಿದರೆ, ಹೆಚ್ಚಿನದೇನನ್ನೂ ವಿವರಿಸಬೇಕಾಗಿಲ್ಲ. ಹಣ ಇದ್ದವರು ಅಂಗಡಿಗಳ ಮುಂದೆ ಕ್ಯೂ ನಿಂತರೆ, ಇಲ್ಲದವರು ಆಕಾಶ ನೋಡುವ ಪರಿಸ್ಥಿತಿ.

ಇಂಧನ, ವಿದ್ಯುತ್...

ವಿದೇಶಿ ವಿನಿಮಯದ ತೀವ್ರ ಕೊರತೆಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಮಿತಿ ಮೀರಿರುವುದು ಮಾತ್ರವಲ್ಲ; ಹೆಚ್ಚು ಕಡಿಮೆ ಇಲ್ಲವೇ ಎಂಬಂತಾಗಿದೆ. ಇದರಿಂದ ಅಗತ್ಯ ವಸ್ತುಗಳ ಸಾಗಾಟಕ್ಕೆ ತೊಡಕಾಗಿದೆ. ಪೆಟ್ರೋಲ್ ಪಂಪ್‌ಗಳ ಮುಂದೆ ಉದ್ದವಾದ ಕ್ಯೂಗಳಿದ್ದು, ಅವುಗಳ ರಕ್ಷಣೆಗಾಗಿ ಸೇನೆಯನ್ನು ನಿಯೋಜಿಸಲಾಗಿದೆ ಎಂದರೆ, ಪರಿಸ್ಥಿತಿಯ ಗಂಭೀರತೆಯನ್ನು ಊಹಿಸಬಹುದು. ಮೇಲಾಗಿ ಸಾಕಷ್ಟು ಪ್ರಮಾಣದ ವಿದ್ಯುತ್ ಉತ್ಪಾದಿಸಲೂ ಸರಕಾರದ ಬಳಿ ಹಣವಿಲ್ಲ. ಅದಕ್ಕಾಗಿ ವಿದ್ಯುತ್ ಪಡಿತರ ಮಾಡಲಾಗಿದ್ದು, ಕೆಲವು ಕಡೆ 17 ಗಂಟೆಗಳ ಪವರ್ ಕಟ್ ಇದೆ. ರಾಜಧಾನಿ ಕೊಲಂಬೊದಲ್ಲೇ ಬ್ಲಾಕು ಬ್ಲಾಕುಗಳ ಬೀದಿದೀಪಗಳು ನಂದಿ, ಕಟ್ಟಡಗಳು ಒಂದರ ನಂತರ ಒಂದರಂತೆ ಏಕಾಏಕಿ ಕತ್ತಲೆಯಲ್ಲಿ ಮುಳುಗುತ್ತಿವೆ ಎಂದು ವರದಿಗಳು ಹೇಳುತ್ತವೆ. ಶ್ರೀಲಂಕಾ ದೊಡ್ಡ ಪ್ರಮಾಣದ ಕೈಗಾರಿಕಾ ದೇಶವಲ್ಲವಾದರೂ, ಇರುವ ಕೈಗಾರಿಕೆಗಳೂ ಕೆಲಸ ಮಾಡಲಾರದ ಸ್ಥಿತಿಗೆ ಬಂದಿದ್ದು, ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.

ಕೃಷಿ, ಪ್ರವಾಸೋದ್ಯಮ...

ಶ್ರೀಲಂಕಾ ಒಂದು ಫಲವತ್ತಾದ ಮಣ್ಣಿರುವ, ಒಳ್ಳೆಯ ಮಳೆ ಬೀಳುವ ದೇಶವಾಗಿದ್ದರೂ, ವರ್ಷಗಳಿಂದಲೂ ಆಹಾರ ಸ್ವಾವಲಂಬನೆಯನ್ನು ಹೊಂದಲು ವಿಫಲವಾಗಿದ್ದು, ಬಹುತೇಕ ಆಮದನ್ನು ಅವಲಂಬಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ವೈವಿಧ್ಯಮಯ ಬೆಳೆಗಳಿಗೆ ಒತ್ತುನೀಡದೆ, ಸಂಬಾರಜೀನಸು, ಚಹಾದಂತಹ ವಾಣಿಜ್ಯ ಬೆಳೆಗಳಿಗೆ ಮಹತ್ವ ನೀಡಿದ್ದು. ಜೊತೆಗೆ ಇತ್ತೀಚೆಗೆ ಸರಕಾರ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ಏಕಾಏಕಿ ನಿಷೇಧಿಸಿತ್ತು. ಅದನ್ನು ವಿರೋಧಿಸಿ ಪ್ರತಿಭಟನೆಗಳೂ ನಡೆದಿದ್ದವು. ಇದೇ ಕೃಷಿ ಕ್ಷೇತ್ರ ಕುಸಿದು ಈಗಿನ ಪರಿಸ್ಥಿತಿ ಉಂಟಾಗಿದೆ ಎಂದು ಬಿಂಬಿಸುವ ಪ್ರಯತ್ನಗಳು ಒಂದು ವರ್ಗದಿಂದ ನಡೆಯುತ್ತಿದೆ. ಇದು ಜನರಿಗೆ ತೊಂದರೆ ಉಂಟುಮಾಡಿದೆ ಎಂಬುದು ನಿಜವಾದರೂ, ಬಿಕ್ಕಟ್ಟಿಗೆ ಮೂಲ ಕಾರಣ ಎಂಬುದು ನಿಜವಲ್ಲ. ನಿಜವೆಂದರೆ, ಆರ್ಥಿಕ ಬಿಕ್ಕಟ್ಟು ಮೊದಲೇ ಆರಂಭವಾಗಿದ್ದು, ರಸಗೊಬ್ಬರ, ಕೀಟನಾಶಕಗಳ ಆಮದಿನ ವಿದೇಶಿ ವಿನಿಮಯ ಉಳಿಸಲೆಂದೇ ನಿಷೇಧ ಹೇರಲಾಗಿತ್ತೇ ಹೊರತು, ಕೆಲವರು ಹೊಗಳಿದ್ದಂತೆ ಪರಿಸರ ಕಾಳಜಿಯಿಂದ ಅಲ್ಲವೇ ಆಲ್ಲ. ಪರಿಣಾಮವಾಗಿ ಅಕ್ಕಿಯ ಉತ್ಪಾದನೆ ಕುಸಿಯಿತು. ಹಾಗಾಗಿ, ಚೀನಾವು ಹತ್ತು ಲಕ್ಷ ಟನ್ ಅಕ್ಕಿಯನ್ನು ಪೂರೈಸಿದೆ. ಹೆಚ್ಚುವರಿ ಅಕ್ಕಿಗಾಗಿ ಶ್ರೀಲಂಕಾವು ಮ್ಯಾನ್ಮಾರಿಗೆ ದುಬಾರಿ ಬೆಲೆ ಕೊಡಬೇಕಾಯಿತು.

ಅತ್ಯಂತ ಸುಂದರ ಸಮುದ್ರ ತೀರಗಳು, ಹಚ್ಚಹಸಿರಿನ ವನಸಂಪತ್ತು, ಪ್ರವಾಸಿಧಾಮಗಳನ್ನು ಹೊಂದಿರುವ, ಭಾರತೀಯ ಮಹಾಸಾಗರದ ಮರಕತ ದ್ವೀಪವೆಂದು ಹೆಸರಾದ ಶ್ರೀಲಂಕಾ ಬಹಳವಾಗಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿತ್ತು. ಆದರೆ, ಕೋವಿಡ್ ಪಿಡುಗು ಅದಕ್ಕೆ ಭಾರೀ ಹೊಡೆತ ನೀಡಿತು. ಈಗಿನ ಪರಿಸ್ಥಿತಿಯಂತೂ ಪ್ರವಾಸಿಗರು ಅಲ್ಲಿಗೆ ತಲೆ ಹಾಕದಂತೆ ಮಾಡಿದೆ. ದೇಶದ ಇನ್ನೊಂದು ಜೀವನಾಧಾರವಾದ ಮೀನುಗಾರಿಕೆಯೂ ಡೀಸೆಲ್, ಸಾರಿಗೆ ಬಿಕ್ಕಟ್ಟಿನಿಂದ ಹೊಡೆತ ತಿಂದಿದೆ.

ದಿವಾಳಿಯತ್ತ ಹೆಜ್ಜೆಗಳು

ಆಂತರಿಕ ಯುದ್ಧ 2009ರಲ್ಲಿ ಕೊನೆಗೊಂಡ ಬಳಿಕ ಮೈತ್ರಿಪಾಲ ಸಿರಿಸೇನ ಅಧ್ಯಕ್ಷರಾಗಿದ್ದಾಗ ಶ್ರೀಲಂಕಾ ಗಮನಾರ್ಹ ಚೇತರಿಕೆ ಸಾಧಿಸಿ, ಭಾರತವೂ ಸೇರಿದಂತೆ ದಕ್ಷಿಣ ಏಶ್ಯದ ನೆರೆೆಯ ದೇಶಗಳನ್ನು ಬೆಳವಣಿಗೆಯ ದರದಲ್ಲಿ ಹಿಂದಿಕ್ಕಿತ್ತು. ಅದೊಂದು ಮೇಲ್ಮಧ್ಯಮ ವರ್ಗದ ಆರ್ಥಿಕತೆಯಾಗಿ ಬದಲಾಗಿತ್ತು. ಪ್ರವಾಸೋದ್ಯಮ ಆಧರಿತ ಬೆಳವಣಿಗೆಗಳು, ಶ್ರೀಮಂತ ಹೋಟೆಲುಗಳು, ವಿದೇಶಿ ಕಾರುಗಳು, ಶಾಪಿಂಗ್ ಮಾಲ್‌ಗಳು... ಎಲ್ಲೆಲ್ಲೂ ತಲೆಯೆತ್ತಿ, ಕೋಟ್ಯಂತರ ಡಾಲರುಗಳ ಆದಾಯ ತರಲಾರಂಭಿಸಿತ್ತು. ಆದರೆ, ಕೃಷಿ ಮತ್ತು ಉತ್ಪಾದನಾ ವಲಯವನ್ನು ಸಂಪೂರ್ಣ ಕಡೆಗಣಿಸಿದ್ದೇ ಅದಕ್ಕೆ ಮುಳುವಾಗಿದೆ. ಶ್ರೀಲಂಕಾದ ಇನ್ನೊಂದು ಮೂಲವಾಗಿದ್ದುದು ಬಂದರು ಉದ್ಯಮ. ಭಾರತದ ಪಶ್ಚಿಮದ ಕಡೆಯಿಂದ ಪೂರ್ವಕ್ಕೆ ಚಲಿಸುವ ಎಲ್ಲಾ ಹಡಗುಗಳು ಕೊಲಂಬೊ ಬಂದರಲ್ಲಿ ಇಂಧನ ತುಂಬಿಸಿ, ತನ್ನನ್ನು ಬಳಸಿಯೇ ಹೋಗಬೇಕಾದ ಅನುಕೂಲಕರ ಭೌಗೋಳಿಕ ಸ್ಥಾನದಲ್ಲಿ ಶ್ರೀಲಂಕಾ ಇದೆ. ಈಗಿನ ಇಂಧನ ಬಿಕ್ಕಟ್ಟು ಅದಕ್ಕೂ ಕಲ್ಲುಹಾಕಿದೆ.

ದೇಶವು ಭಾರೀ ಪ್ರಮಾಣದ ಸಾಲದಲ್ಲಿರುವ ಕಾರಣ ಅಲ್ಲಿನ ಸೆಂಟ್ರಲ್ ಬ್ಯಾಂಕ್, ಡಾಲರ್‌ಗಳನ್ನು ಸಂಗ್ರಹಿಸುತ್ತಾ, ರೂಪಾಯಿಗಳನ್ನು ಬೇಕಾಬಿಟ್ಟಿ ಮುದ್ರಿಸುತ್ತಾ ಹೋಗಿತ್ತು. ಪರಿಣಾಮವಾಗಿ ಹಣದುಬ್ಬರ ದರ ಫೆಬ್ರವರಿಯಲ್ಲಿಯೇ 17.5 ಶೇಕಡಾ ತಲುಪಿತ್ತು. ಹಣಕಾಸು ಸಚಿವ ಬಾಸಿಲ್ ರಾಜಪಕ್ಸ ಸಿಕ್ಕಸಿಕ್ಕ ದೇಶಗಳಲ್ಲಿ ಡೀಸೆಲ್ ಮತ್ತು ಹಾಲಿನ ಪುಡಿ ಸಾಲ ಕೇಳುವ ಸ್ಥಿತಿಗೆ ಬಂದಿದ್ದಾರೆ. ಸೆಂಟ್ರಲ್ ಬ್ಯಾಂಕ್ ಇರಾನಿನ ಎಣ್ಣೆಗೆ ಬದಲಾಗಿ ಚಹಾಪುಡಿಯಲ್ಲಿ ಪಾವತಿ ಮಾಡುತ್ತಿದೆ. ಇವು ಉದಾರಣೆಗಳಷ್ಟೇ.

ಇವೆಲ್ಲದರ ಹೊಣೆಯನ್ನು ರಾಜಪಕ್ಸ ಕುಟುಂಬದ ಮೇಲೆಯೇ ಹೊರಿಸಬೇಕಾಗಿದೆ. ಯಾಕೆಂದರೆ, ಹಿಂದಿನ ಅಧ್ಯಕ್ಷ ಮಹೀಂದ ರಾಜಪಕ್ಸ ಈಗ ಪ್ರಧಾನಿ. ಸಹೋದರರಾದ ಗೊತಬಯ ರಾಜಪಕ್ಸ ಈಗಿನ ಅಧ್ಯಕ್ಷ ಮತ್ತು ಬಾಸೆಲ್ ರಾಜಪಕ್ಸ ಹಣಕಾಸು ಸಚಿವ. ಮಹೀಂದ ರಾಜಪಕ್ಸ ಅಧಿಕಾರದಲ್ಲಿದ್ದಾಗ, ಉತ್ತರದಲ್ಲಿ ಎಲ್ಟಿಟಿಇ ನೇತೃತ್ವದ ಬಂಡಾಯವನ್ನು ಅವರು ಸೇನಾಬಲವನ್ನು ತಮಿಳು ನಾಗರಿಕರ ಮೇಲೆ ನಿರ್ದಯವಾಗಿ ಪ್ರಯೋಗಿಸಿ ಹತ್ತಿಕ್ಕಿದ್ದರು. 2019ರ ಚುನಾವಣೆಯಲ್ಲಿ ಮತ್ತೆ ದೇಶಪ್ರೇಮದ ಹೆಸರಿನಲ್ಲಿ ದಕ್ಷಿಣದ ಸಿಂಹಳೀಯರನ್ನು ಪ್ರಚೋದಿಸಿ ಅಧಿಕಾರಕ್ಕೆ ಮರಳಿದವರಿವರು.

ಅದಕ್ಕಿಂತ ಮೊದಲು ಇದ್ದ ರಾಜಪಕ್ಸೇತರ ಮೈತ್ರಿಪಾಲ ಸಿರಿಸೇನ ಅಧ್ಯಕ್ಷರಾಗಿ ಆಯ್ಕೆಯಾದಾಗ ಭಾರೀ ಬಡ್ಡಿಯ ದೊಡ್ಡ ಮೊತ್ತದ ಸಾಲಗಳನ್ನು ಬಳುವಳಿಯಾಗಿ ಪಡೆದಿದ್ದರು. ಆದರೆ, ಅವರ ಆಡಳಿತವು ಅಲ್ಪಾವಧಿಯ ದುಬಾರಿ ಸಾಲಗಳನ್ನು ಕಡಿಮೆ ಬಡ್ಡಿಯ ದೀರ್ಘಾವಧಿ ಸಾಲವಾಗಿ ಪರಿವರ್ತಿಸುವಲ್ಲಿ ಸಫಲವಾಗಿತ್ತು. ಅವರು ವಿದೇಶಿ ವಿನಿಮಯ ಮೀಸಲು ನಿಧಿಯನ್ನು 7,500 ಕೋಟಿ ಡಾಲರ್‌ಗಳಿಗೆ ಏರಿಸಿ, 52 ವರ್ಷಗಳಲ್ಲೇ ಮೊದಲ ಬಾರಿಗೆ ಮಿಗತೆ ಬಜೆಟ್ ಮಂಡಿಸಿದ್ದರು. ಆದರೆ, ಹುಸಿದೇಶ ಪ್ರೇಮದ ಮೋಹಜಾಲಕ್ಕೆ ಬಿದ್ದಿದ್ದ ಸಿಂಹಳೀಯರಿಗೆ ಅದು ಬೇಕಾಗಿರಲಿಲ್ಲ.

2019ರ ಚುನಾವಣೆಯಲ್ಲಿ 250 ಮಂದಿ ಸಾವಿಗೀಡಾದ ಈಸ್ಟರ್ ಸಂಡೆ ಭಯೋತ್ಪಾದಕ ದಾಳಿಯ ಕೆಲವೇ ತಿಂಗಳುಗಳಲ್ಲಿ ಗೊತಬಯ ರಾಜಪಕ್ಸ ಜಯಿಸಿದ್ದರು. (ಪುಲ್ವಾಮ ನೆನಪಿಗೆ ಬಂದರೆ ಅಚ್ಚರಿಯಿಲ್ಲ!) ತಾನು ದೇಶದ ಸುರಕ್ಷತೆಯನ್ನು ಮರುಸ್ಥಾಪಿಸುವುದಾಗಿ ಅವರು ಭರವಸೆ ನೀಡಿದ್ದರು. ಅತ್ಯಂತ ನಿರ್ದಯ ರಕ್ಷಣಾ ಮುಂತ್ರಿಯಾಗಿ, ತಮಿಳರ ನಾಗರಿಕ ವಸತಿಗಳ ಮೇಲೆಯೂ ದಾಳಿ ನಡೆಸಿ ಅದನ್ನು ಅಡಗಿಸಿದ್ದ ಅವರ ಮೇಲೆ ಜನರು ಭರವಸೆ ಇಟ್ಟಿದ್ದರು. ಆದರೆ, ದೇಶಕ್ಕೆ ಅಪಾಯವು ವ್ಯಾಪಕ ಭ್ರಷ್ಟಾಚಾರ ಮತ್ತು ಆರ್ಥಿಕ ದಿವಾಳಿಯ ರೂಪದಲ್ಲಿ ಎರಗುವುದೆಂದು ಜನರು ಯೋಚಿಸಿರಲಿಲ್ಲ.

 ಆದರೆ, ರಾಜಪಕ್ಸ ಕುಟುಂಬ ಆರ್ಥಿಕ ಅಭಿವೃದ್ಧಿಗೆ ಗಮನವನ್ನೇ ಕೊಡದೆ, ವಿರೋಧಿಗಳ ದಮನ ಮತ್ತು ಅಧಿಕಾರದ ಕೇಂದ್ರೀಕರಣದ ಮೇಲೆಯೇ ಗಮನಹರಿಸಿದರು. ತಮಿಳರ ಮೇಲಿನ ದೌರ್ಜನ್ಯದ ವಿಷಯ ಎತ್ತಿದ್ದ ಸೇನಾಧಿಕಾರಿಗಳನ್ನು ಮನೆಗೆ ಕಳಿಸಲಾಯಿತು. ಅನೇಕ ವಿರೋಧಿಗಳನ್ನು, ಪತ್ರಕರ್ತರನ್ನು ಜೈಲಿಗೆ ಹಾಕಲಾಯಿತು. ಕೆಲವೇ ಪತ್ರಿಕೆಗಳನ್ನು ಬಿಟ್ಟು ಉಳಿದ ಮಾಧ್ಯಮಗಳು ಸರಕಾರದ ಭಟ್ಟಂಗಿತನದಲ್ಲಿ ತೊಡಗಿದುದರಿಂದಲೇ ಇದೀಗ ಸಿಟ್ಟಿಗೆದ್ದ ಜನರ ಪ್ರತಿಭಟನೆಯ ವೇಳೆ ಕೆಲವು ಮಾಧ್ಯಮಗಳೂ ಗುರಿಯಾಗುತ್ತಿವೆ. ಗೋತಬಯ ಮಿಲಿಟರಿ ಹಿನ್ನೆಲೆಯವರಾದುದರಿಂದ ಸೇನಾಧಿಕಾರಿಯೊಬ್ಬರನ್ನೇ ರಕ್ಷಣಾ ಮಂತ್ರಿಯಾಗಿ ಮಾಡಲಾಯಿತು. ರೈತರು ಮತ್ತು ಕಾರ್ಮಿಕರನ್ನು ಆತ್ಮಹತ್ಯೆ ಮಾಡಲು ಬಿಟ್ಟು, ಬರೀ ಗಡಿಯಲ್ಲಿ ದೇಶ ಕಾಯುವ ಸೈನಿಕರು ಎಂದು ಭಜನೆ ಮಾಡಿದರೆ ಏನಾಗುವುದೋ, ಅದೇ ಆಗಿದೆ.

ಇದಕ್ಕಿಂತ ಮೊದಲು, 2005ರಿಂದ 2015ರ ತನಕ ಮಹೀಂದ ರಾಜಪಕ್ಸ ಅಧ್ಯಕ್ಷರಾಗಿದ್ದಾಗಲೇ ಅಚ್ಛೇದಿನ್ ಮತ್ತು ಶ್ರೀಲಂಕಾವನ್ನು ಸಿಂಗಾಪುರ ಮಾಡುವ ಭರವಸೆ ನೀಡಲಾಗಿತ್ತು. ಅದರೆ, ಅದು ಬರಲೇ ಇಲ್ಲ. ಇದೀಗ ಹಣದ ಕೊರತೆಯಿಂದ ಅನೇಕ ದೇಶಗಳಲ್ಲಿ ದೂತಾವಾಸಗಳನ್ನೂ ಮುಚ್ಚಲಾಗಿದೆ. ಇತ್ತೀಚೆಗೆ ಭಾರತ 150 ಕೋಟಿ, ಚೀನಾ 250 ಕೋಟಿ ಹಾಗೂ ಬಾಂಗ್ಲಾದೇಶದಂತಹ ಬಡ ದೇಶ ಕೂಡಾ 20 ಕೋಟಿ ಡಾಲರ್‌ಗಳ ಸಾಲ ನೀಡಿದ್ದವು. ಆದರೆ, ಇದು ಹಿಂದಿನ ಸಾಲ ಮತ್ತು ಬಡ್ಡಿಯ ಹಿನ್ನೆಲೆಯಲ್ಲಿ ಎಳ್ಳಷ್ಟೂ ಸಾಲುವಂತಿಲ್ಲ. ಸದ್ಯ ಶ್ರೀಲಂಕಾವು ಬೇರೆ ದಾರಿಯೇ ಕಾಣದೆ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ಯ ಮೊರೆ ಹೋಗಿದೆ.

ನೆರೆಯ ಶ್ರೀಲಂಕಾದ ಬಿಕ್ಕಟ್ಟು ಭಾರತಕ್ಕೆ ದೊಡ್ಡ ತಲೆನೋವಾಗಲಿದೆ. ಒಂದು ಕಡೆ ಅಲ್ಲಿ ಭದ್ರವಾಗಿ ಕಾಲೂರಲು ಬಯಸುತ್ತಿರುವ ಚೀನಾ ಮತ್ತು ಇನ್ನೊಂದು ಕಡೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ನಿರಾಶ್ರಿತರು ಭಾರತಕ್ಕೆ ನುಗ್ಗಿಬರುವ ಸಾಧ್ಯತೆ. ಇವೆರಡರ ನಡುವೆ ಈಗಾಗಲೇ ಭಾರತದ ಕೋಸ್ಟ್ ಗಾರ್ಡ್ ಸಮುದ್ರದ ನಡುವೆ ದೋಣಿಯಲ್ಲಿ ಸಿಕ್ಕಿಬಿದ್ದಿದ್ದ ನಿರಾಶ್ರಿತರ ಗುಂಪೊಂದನ್ನು ರಕ್ಷಿಸಿದೆ. ಇದು ಬಿರುಗಾಳಿಯ ಮುನ್ಸೂಚನೆ ಮಾತ್ರ. ಇದೇ ಸವಾಲುಗಳ ಬಗ್ಗೆಯೇ ಪ್ರತ್ಯೇಕವಾಗಿ ಬರೆಯಲು ಸಾಧ್ಯವಿದೆ. ಶ್ರೀಲಂಕಾದ ಸದ್ಯದ ಸ್ಥಿತಿಯಂತೂ ಅಲ್ಲಿನ ಸಂಸದರೊಬ್ಬರು ಹೇಳಿದಂತೆ: ಬಹು ಅಂಗಾಂಗಗಳ ವೈಫಲ್ಯದಿಂದ ನರಳುತ್ತಿರುವ ರೋಗಿಯಂತಿದೆ.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News