×
Ad

ಮಾಂಸದಂಗಡಿಗಳನ್ನು ಮುಚ್ಚಲು ದಕ್ಷಿಣ ದಿಲ್ಲಿ ಮೇಯರ್ ಸೂಚನೆ: "ಅಧಿಕೃತ ಆದೇಶವೆಲ್ಲಿ?" ಎಂದು ಕೇಳುತ್ತಿರುವ ಅಧಿಕಾರಿಗಳು

Update: 2022-04-05 13:45 IST

 ಹೊಸದಿಲ್ಲಿ: ಎಪ್ರಿಲ್ 5, ಮಂಗಳವಾರದಿಂದ ಆರಂಭಿಸಿ ಎಪ್ರಿಲ್ 11ರ ತನಕ- ಅಂದರೆ ಹಿಂದುಗಳ ಹಬ್ಬವಾದ ನವರಾತ್ರಿ ಮುಗಿಯುವ ತನಕ  ಮಾಂಸದಂಗಡಿಗಳನ್ನು ತೆರೆಯಲು ಅನುಮತಿಸಲಾಗುವುದಿಲ್ಲ ಎಂದು ದಕ್ಷಿಣ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ಮೇಯರ್ ಮುಕೇಶ್ ಸೂರ್ಯನ್  ಹೇಳಿದ್ದಾರೆ. ಆದರೆ ಈ ಕುರಿತು ಅವರು ಯಾವುದೇ ಆದೇಶವನ್ನು ನೀಡದೇ ಇರುವುದನ್ನು ಇತರ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಮಾಂಸದಂಗಡಿಗಳು ತೆರೆಯದಂತೆ ನೋಡಿಕೊಳ್ಳಬೇಕೆಂದು ಸೂರ್ಯನ್ ಅವರು ಮುನಿಸಿಪಲ್ ಆಯುಕ್ತರಿಗೆ ಸೂಚಿಸಿದ್ದಾರಾದರೂ ಈ ಕುರಿತು ಅಧಿಕೃತ ಆದೇಶ ಇನ್ನಷ್ಟೇ ನೀಡಬೇಕಿದೆ. ನವರಾತ್ರಿ ಸಂದರ್ಭ ತನ್ನ ವ್ಯಾಪ್ತಿ ಪ್ರದೇಶದಲ್ಲಿ ಮಾಂಸದಂಗಡಿಗಳನ್ನು ಮುಚ್ಚಬೇಕೆಂದು ಸ್ಥಳೀಯಾಡಳಿತ ಹೇಳಿರುವುದು ಇದೇ ಮೊದಲ ಬಾರಿಯಾಗಿದೆ. ಮುನಿಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 1500 ಮಾಂಸದಂಗಡಿಗಳಿವೆ.

ಅಧಿಕೃತ ಆದೇಶ ಶೀಘ್ರ ನೀಡಲಾಗುವುದೆಂದು ಮೇಯರ್ ಹೇಳಿದ್ದಾರೆ. ಆದರೆ ಇಂತಹ ಒಂದು ಸೂಚನೆಗೆ ಆಯುಕ್ತರ ಅಂಗೀಕಾರ ಹೊಂದಿದ ಆದೇಶ ಇರಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಇಂತಹ ಆದೇಶ ನೀಡುವ ಕುರಿತು ಯಾವುದೇ ನಿರ್ದಿಷ್ಟ ನೀತಿಗಳಿಲ್ಲದೇ ಇರುವುದರಿಂದ ಇಂತಹ ಸೂಚನೆಗಳನ್ನು ತಕ್ಷಣ ಜಾರಿಗೊಳಿಸುವಂತಿಲ್ಲ, ಮೇಲಾಗಿ ಇಂತಹ ಆದೇಶ ಜಾರಿಗೊಳಿಸಿದ್ದೇ ಆದಲ್ಲಿ ಕೆಳ ಹಂತದ ಅಧಿಕಾರಿಗಳಿಂದ ವರ್ತಕರಿಗೆ ಕಿರುಕುಳವಾಗುವ ಸಾಧ್ಯತೆಯೂ ಇದೆ ಎಂದು ಕೆಲ ಅಧಿಕಾರಿಗಳು ತಿಳಿಸಿದ್ದಾರೆ.

ಮೇಯರ್ ಸೂರ್ಯನ್ ಅವರು ಎಸ್‍ಡಿಎಂಸಿ ಆಯುಕ್ತ ಗ್ಯಾನೇಶ್ ಭಾರತಿ ಅವರಿಗೆ ಎಪ್ರಿಲ್ 2ರಂದು ಬರೆದ ಪತ್ರದಲ್ಲಿ "ನವರಾತ್ರಿಯ ಸಂದರ್ಭ ಭಕ್ತರು ದುರ್ಗಾಮಾತೆಗೆ ಪ್ರಾರ್ಥನೆ ಸಲ್ಲಿಸಲು ತೆರಳುವಾಗ ಹಾದಿಯಲ್ಲಿ ಮಾಂಸದಂಗಡಿಗಳಿಂದ ಮಾಂಸದ ಕೆಟ್ಟ ವಾಸನೆ ಎದುರಿಸಬೇಕಾಗಿದೆ ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುತ್ತದೆ" ಎಂದು ವಿವರಿಸಿದ್ದಾರೆ.

"ನವರಾತ್ರಿಯ ಒಂಬತ್ತು ದಿನ ಭಕ್ತರು ಶುದ್ಧ ಸಸ್ಯಾಹಾರಿಗಳಾಗಿರುತ್ತಾರೆ ಹಾಗೂ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಹ ಸೇವಿಸುವುದಿಲ್ಲ ಹೀಗಿರುವಾಗ ದೇವಸ್ಥಾನಗಳ ಸಮೀಪ ಅಥವಾ ಇತರ ಸ್ಥಳಗಳಲ್ಲಿ ಮಾಂಸ ಮಾರಾಟ ಅವರಿಗೆ ಅನಾನುಕೂಲವಾಗಬಹುದು" ಎಂದು ಪತ್ರದಲ್ಲಿ ಮೇಯರ್ ಬರೆದಿದ್ದಾರೆ.

ದಿಲ್ಲಿಯ ಶೇ 99ರಷ್ಟು ಕುಟುಂಬಗಳು ನವರಾತ್ರಿ ಸಂದರ್ಭ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಹ ಸೇವಿಸುವುದಿಲ್ಲ ಎಂದು ಮೇಯರ್ ಹೇಳಿದ್ದಾರೆಂದು ಎಎನ್‍ಐ ವರದಿ ಮಾಡಿದೆ. ಹೀಗಿದ್ದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಏಕೆ ನಿಷೇಧಿಸಿಲ್ಲ ಎಂದು ಹಲವು ಸಾಮಾಜಿಕ ಜಾಲತಾಣಿಗರು ಪ್ರಶ್ನಿಸಿದ್ದಾರೆ. ನವರಾತ್ರಿ ಸಂದರ್ಭ ಮದ್ಯ ಮಾರಾಟ ಕೂಡ ನಿಷೇಧಿಸಲು ಮುಖ್ಯಮಂತ್ರಿಯನ್ನು ಕೋರುವುದಾಗಿಯೂ ಅವರು ಹೇಳಿದ್ದಾರೆ.

ಎಪ್ರಿಲ್ 1ರಂದು ಗಾಝಿಯಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಕೂಡ ಇಂತಹುದೇ ಆದೇಶ ಹೊರಡಿಸಿತ್ತಾದರೂ ಮೇಯರ್ ಆಶಾ ಶರ್ಮ ಎಪ್ರಿಲ್ 2ರಂದು ಪ್ರತಿಕ್ರಿಯಿಸಿ ಪರವಾನಗಿ ಹೊಂದಿದ ಮಾಂಸದಂಗಡಿಗಳು ನಿಯಮಾನುಸಾರ ಕಾರ್ಯನಿರ್ವಹಿಸಬಹುದು ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News