×
Ad

ಇಲೆಕ್ಟೋರಲ್ ಬಾಂಡ್‍ಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸಲು ಒಪ್ಪಿದ ಸಿಜೆಐ

Update: 2022-04-05 14:35 IST

ಹೊಸದಿಲ್ಲಿ, ಎ.5: ಸರಕಾರದ ಚುನಾವಣಾ ಬಾಂಡ್ಗಳ ಯೋಜನೆಯ ವಿರುದ್ಧ ದೀರ್ಘ ಸಮಯದಿಂದ ಬಾಕಿಯುಳಿದಿರುವ ಪ್ರಕರಣದ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸಲಿದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರು ಮಂಗಳವಾರ ತಿಳಿಸಿದರು. ಕಳೆದೊಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಈ ವಿಷಯವು ಬಾಕಿಯಿದೆ.

ಚುನಾವಣಾ ಬಾಂಡ್ಗಳು ನಾಗರಿಕರು ಅಥವಾ ಕಾರ್ಪೊರೇಟ್ ಗುಂಪುಗಳು ಬ್ಯಾಂಕಿನಿಂದ ಖರೀದಿಸಿ ಯಾವುದೇ ಅರ್ಹ ರಾಜಕೀಯ ಪಕ್ಷಕ್ಕೆ ದೇಣಿಗೆಯಾಗಿ ನೀಡಬಹುದಾದ ಹಣಕಾಸು ಸಾಧನಗಳಾಗಿದ್ದು, ಪಕ್ಷವು ಬಳಿಕ ಅದನ್ನು ನಗದೀಕರಿಸಲು ಮುಕ್ತವಾಗಿರುತ್ತದೆ. ಆದರೆ ಇಡೀ ಪ್ರಕ್ರಿಯೆಯು ಅನಾಮಧೇಯವಾಗಿದ್ದು ಯಾರೂ ಈ ಬಡ್ಡಿರಹಿತ ಬಾಂಡ್ಗಳ ಖರೀದಿಯನ್ನು ಘೋಷಿಸುವ ಅಗತ್ಯವಿಲ್ಲ ಮತ್ತು ರಾಜಕೀಯ ಪಕ್ಷಗಳು ಹಣದ ಮೂಲವನ್ನು ತೋರಿಸಬೇಕಿಲ್ಲ.

ಹಣವನ್ನು ಚೆಕ್ ಮೂಲಕವೇ ನೀಡಬೇಕಿರುವುದರಿಂದ ಅದು ಕಪ್ಪುಹಣವಾಗಿರುವ ಸಾಧ್ಯತೆಗಳಿಲ್ಲ ಎಂದು ಸರಕಾರವು ಸಮಜಾಯಿಷಿ ನೀಡಿತ್ತು. ಮಂಗಳವಾರದ ವಿಚಾರಣೆ ಸಂದರ್ಭ ನ್ಯಾ.ರಮಣ ಅವರು, ‘ವಿಷಯವನ್ನು ಹಿಂದೆಯೇ ಕೈಗತ್ತಿಕೊಳ್ಳಲು ನ್ಯಾಯಾಲಯವು ಬಯಸಿತ್ತು, ಆದರೆ ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ನೋಡೋಣ, ನಾವಿದನ್ನು ಕೈಗೆತ್ತಿಕೊಳ್ಳುತ್ತೇವೆ ’ಎಂದು ಹೇಳಿದರು.

ಪ್ರಕರಣವು ತುರ್ತು ವಿಚಾರಣೆಗೆ ಅರ್ಹವಾಗಿದೆ ಎಂದು ಹೇಳಿದ ಅರ್ಜಿದಾರ ಎನ್ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರ ವಕೀಲ ಪ್ರಶಾಂತ ಭೂಷಣ ಅವರು, ಅಬಕಾರಿ ದರವನ್ನು ಸ್ಥಗಿತಗೊಳಿಸಲು ಕೋಲ್ಕತಾದ ಕಂಪನಿಯೊಂದು ಚುನಾವಣಾ ಬಾಂಡ್ಗಳ ಮೂಲಕ 40 ಕೋ.ರೂ.ಗಳನ್ನು ಪಾವತಿಸಿದೆ ಎಂದು ಇಂದು ಬೆಳಿಗ್ಗೆ ವರದಿಯಾಗಿದೆ. ಇದು ಪ್ರಜಾಪ್ರಭುತ್ವವನ್ನು ವಿರೂಪಗೊಳಿಸುತ್ತಿದೆ ಎಂದು ಹೇಳಿದರು.

ಇದಕ್ಕೆ ಸ್ಪಂದಿಸಿದ ನ್ಯಾರಮಣ,ಸರ್ವೋಚ್ಚ ನ್ಯಾಯಾಲಯವು ಈ ವಿಷಯವನ್ನು ಪರಿಶೀಲಿಸುತ್ತದೆ ಎಂದು ತಿಳಿಸಿದರು. ಸರ್ವೋಚ್ಚ ನ್ಯಾಯಾಲಯದ ಮುಂದಿರುವ ಅರ್ಜಿಗಳು ಚುನಾವಣಾ ಬಾಂಡ್ಗಳ ವಿತರಣೆಯನ್ನು ಸಾಧ್ಯವಾಗಿಸಿರುವ ಕಾನೂನುಗಳನ್ನು ಪ್ರಶ್ನಿಸಿವೆ. 2017ರಲ್ಲಿ ಎಡಿಆರ್,ಈ ಯೋಜನೆಯ ಮೂಲಕ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ ಮತ್ತು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲಾಗುತ್ತಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

ತಮಿಳುನಾಡು, ಪ.ಬಂಗಾಳ, ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಮೊದಲು ಚುನಾವಣಾ ಬಾಂಡ್ಗಳ ಇನ್ನಷ್ಟು ಮಾರಾಟವನ್ನು ನಿಷೇಧಿಸುವಂತೆ ಕೋರಿ 2021,ಮಾರ್ಚ್ನಲ್ಲಿ ಎಡಿಆರ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News