ಕೈಕೋಳ ಹಾಕಿದ ಆರೋಪಿಯೊಂದಿಗೆ ಗಂಗಾ ನದಿಯಲ್ಲಿ 'ಸ್ನಾನ' ಮಾಡಿದ ಮಧ್ಯಪ್ರದೇಶ ಪೊಲೀಸರು: ನೋಟಿಸ್ ಜಾರಿ

Update: 2022-04-05 10:28 GMT
ಸಾಂದರ್ಭಿಕ ಚಿತ್ರ

ಬುರ್ಹಾನ್ಪುರ(ಮಧ್ಯಪ್ರದೇಶ): ವ್ಯಕ್ತಿಯೊಬ್ಬನನ್ನು ಬಂಧಿಸಲು ಉತ್ತರ ಪ್ರದೇಶಕ್ಕೆ ತೆರಳಿದ್ದ ಮಧ್ಯಪ್ರದೇಶದ ಬುರ್ಹಾನ್ಪುರದ ಪೊಲೀಸ್ ತಂಡವು ಕೈಕೋಳ ಹಾಕಿದ ಆರೋಪಿಯೊಂದಿಗೆ ಗಂಗಾ ನದಿಯಲ್ಲಿ ‘ಸ್ನಾನ’ ಮಾಡಿ  ಕರ್ತವ್ಯಲೋಪ ಎಸಗಿದ್ದಕ್ಕಾಗಿ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು  ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಘಟನೆಯ ವೀಡಿಯೊ ಇತ್ತೀಚೆಗೆ ಕಾಣಿಸಿಕೊಂಡ ನಂತರ ತಂಡದ ನೇತೃತ್ವ ವಹಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು  ಹೇಳಿದರು.

"ವಂಚನೆ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಲು ಲಾಲ್ಬಾಗ್ ಪೊಲೀಸ್ ಠಾಣೆಯ ತಂಡವೊಂದು ಪ್ರತಾಪ್ಗಢಕ್ಕೆ (ಉತ್ತರ ಪ್ರದೇಶ) ತೆರಳಿತ್ತು. ಅಲ್ಲಿಂದ ಹಿಂತಿರುಗುವ ವೇಳೆ ಪೊಲೀಸ್ ತಂಡವು ಪ್ರಯಾಗ್ರಾಜ್ನಲ್ಲಿ ಆರೋಪಿಯೊಂದಿಗೆ ಗಂಗಾಸ್ನಾನ ಮಾಡಿದೆ ಎಂಬ ಮಾಹಿತಿ ನಮಗೆ ಇತ್ತೀಚೆಗೆ ಬಂದಿತು. ಇದಕ್ಕೆ ಸಂಬಂಧಿಸಿ ಶೋಕಾಸ್ ನೋಟಿಸ್ ನೀಡಲಾಗಿದೆ. ಆರೋಪಿಗಳನ್ನು ಬಂಧಿಸಿದ ನಂತರ ಪೊಲೀಸ್ ತಂಡ ನೇರವಾಗಿ ಠಾಣೆಗೆ ಹಿಂತಿರುಗಬೇಕಿತ್ತು’’ ಎಂದು ಬುರ್ಹಾನ್ಪುರದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಾಹುಲ್ ಕುಮಾರ್ ಲೋಧಾ ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಫೆಬ್ರವರಿ 16 ರಂದು ಪ್ರತಾಪ್ಗಢದಿಂದ ಆರೋಪಿಯನ್ನು ಬಂಧಿಸಲು ಹೋದ ತಂಡದ ನೇತೃತ್ವ ವಹಿಸಿದ್ದ ಲಾಲ್ ಬಾಗ್ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಕೇಶವ್ ಪಾಟೀಲ್ ಅವರಿಗೆ ನೋಟಿಸ್ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News