ಆಝಾನ್‌ ಕುರಿತು ರಾಜ್‌ ಠಾಕ್ರೆ ಪ್ರಚೋದನಾಕಾರಿ ಹೇಳಿಕೆ: ಪಕ್ಷಕ್ಕೆ ರಾಜಿನಾಮೆ ನೀಡಿದ ಇಬ್ಬರು ನಾಯಕರು

Update: 2022-04-05 12:19 GMT

ಪುಣೆ: ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸದಿದ್ದರೆ ಮಸೀದಿಗಳ ಎದುರು ಹನುಮಾನ್‌ ಚಾಲೀಸಾ ಹಾಡಿಸುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ಹೇಳಿದ ಹಿನ್ನೆಲೆಯಲ್ಲಿ ಪಕ್ಷದ ಸ್ಥಳೀಯ ಮುಖಂಡರೊಬ್ಬರು ರಾಜಿನಾಮೆ ನೀಡಿದ್ದಾರೆ. ಮಹಾರಾಷ್ಟ್ರ ನವ ನಿರ್ಮಾಣ ವಹ್ತುಕ್‌ ಸೇನೆಯ ಉಪಾಧ್ಯಕ್ಷ ಶೈಬಾಝ್‌ ಪಂಜಾಬಿ ರಾಜಿನಾಮೆ ನೀಡಿದವರು. ಮಸೀದಿ ಧ್ವನಿವರ್ಧಕಗಳ ಬಗ್ಗೆ ರಾಜ್‌ ಠಾಕ್ರೆ ನೀಡಿದ ವಿವಾದಾತ್ಮಕ ಹೇಳಿಕೆ ಬಳಿಕ ಪಕ್ಷದಿಂದ ಎರಡು ನಾಯಕರು ನಿರ್ಗಮಿಸಿದ್ದಾರೆ ಎಂದು pti ವರದಿ ಮಾಡಿದೆ.

"ನಾನು ಎಂಎನ್‌ಎಸ್‌ನ ಆರಂಭದಿಂದಲೂ ಜೊತೆಗಿದ್ದೇನೆ, ಆದರೆ ಮಸೀದಿಗಳ ಮೇಲಿನ ಧ್ವನಿವರ್ಧಕಗಳ 'ಅಝಾನ್‌ʼ ವಿರುದ್ಧ 'ಹನುಮಾನ್ ಚಾಲೀಸಾ' ಹಾಡಿಸುವುದಾಗಿ ರಾಜ್ ಠಾಕ್ರೆ ನೀಡಿದ ಹೇಳಿಕೆ ಖಂಡಿಸಿ ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ" ಎಂದು ಪಂಜಾಬಿ ಹೇಳಿದ್ದಾರೆ

 "ಮುಸ್ಲಿಂ ಸಮುದಾಯದ ಅನೇಕ ಜನರು ನನ್ನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ, ಅವರೊಂದಿಗೆ ನಾನು ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದೇನೆ" ಎಂದು ಪಂಜಾಬಿ ಹೇಳಿದ್ದಾರೆ, ಧ್ವನಿವರ್ಧಕಗಳು ಮತ್ತು ಮದರಸಾಗಳ ಕುರಿತು ರಾಜ್ ಠಾಕ್ರೆಯವರು ನೀಡಿದ ಹೇಳಿಕೆಗಳು ತಪ್ಪಾಗಿದೆ. ಇನ್ನೂ ಎಮ್‌ಎನ್‌ಎಸ್‌ ಅಲ್ಲಿ ಗುರುತಿಸಿಕೊಂಡರೆ ಜನರನ್ನು ಎದುರಿಸಲು ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.

 ಪುಣೆಯ ಎಮ್‌ ಎನ್‌ ಎಸ್‌ ಶಾಖಾ ಅಧ್ಯಕ್ಷ ಮಜೀದ್‌ ಶೇಖ್‌ ಸೋಮವಾರ ಪಕ್ಷದ ಕೋಮುವಾದ ವಿರೋಧಿಸಿ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು.

ಕಳೆದ ಶನಿವಾರ, ಮುಂಬೈಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ರಾಜ್‌ ಠಾಕ್ರೆ, ಮಸೀದಿಯ ಧ್ವನಿವರ್ಧಕಗಳನ್ನು ತೆಗೆದು ಹಾಕುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಇಲ್ಲದಿದ್ದರೆ, ಮಸೀದಿ ಮುಂದೆ ದೊಡ್ಡ ಶಬ್ದದಲ್ಲಿ ಹನುಮಾನ್‌ ಚಾಲಿಸಾ ನುಡಿಸುವುದಾಗಿ ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News