ಸಮೂಹ ವಿನಾಶದ ಶಸ್ತ್ರಾಸ್ತ್ರಗಳಿಗೆ ಹಣಕಾಸು ಪೂರೈಕೆ ನಿಷೇಧಿಸುವ ಮಸೂದೆ ಲೋಕಸಭೆಯಲ್ಲಿ ಮಂಡನೆ

Update: 2022-04-05 15:04 GMT

ಹೊಸದಿಲ್ಲಿ,ಎ.5: ಸಮೂಹ ವಿನಾಶದ ಶಸ್ತ್ರಾಸ್ತ್ರಗಳಿಗೆ ಹಣಕಾಸು ಪೂರೈಕೆಯನ್ನು ನಿಷೇಧಿಸುವ ಮತ್ತು ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ಹಣಕಾಸು ಆಸ್ತಿಗಳು ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಸ್ತಂಭನಗೊಳಿಸಲು,ವಶಪಡಿಸಿಕೊಳ್ಳಲು ಅಥವಾ ಜಪ್ತಿ ಮಾಡಲು ಕೇಂದ್ರಕ್ಕೆ ಅಧಿಕಾರವನ್ನು ನೀಡುವ ಮಸೂದೆಯನ್ನು ಸರಕಾರವು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಮಂಡಿಸಿದ ಸಮೂಹ ವಿನಾಶದ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣೆ ವ್ಯವಸ್ಥೆಗಳ (ಕಾನೂನು ಬಾಹಿರ ಚಟುವಟಿಕೆಗಳ ನಿಷೇಧ) ತಿದ್ದುಪಡಿ ಮಸೂದೆ,2022 ಈ ಸಂಬಂಧ ಭಾರತದ ಅಂತರರಾಷ್ಟ್ರೀಯ ಬದ್ಧತೆಗಳನ್ನು ಪೂರೈಸಲೂ ಉದ್ದೇಶಿಸಿದೆ. ಪದೇ ಪದೇ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿರುವ ಕುರಿತು ಸದನದಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆಯೇ ಜೈಶಂಕರ್ ಮಸೂದೆಯನ್ನು ಮಂಡಿಸಿದರು.
2005ರಲ್ಲಿ ಅಂಗೀಕಾರಗೊಂಡಿದ್ದ ಸಮೂಹ ವಿನಾಶದ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣೆ ವ್ಯವಸ್ಥೆಗಳ (ಕಾನೂನು ಬಾಹಿರ ಚಟುವಟಿಕೆಗಳ ನಿಷೇಧ) ಕಾಯ್ದೆಯು ಸಮೂಹ ವಿನಾಶದ ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ಮಾತ್ರ ನಿಷೇಧಿಸಿತ್ತು.


ಇತ್ತೀಚಿನ ದಿನಗಳಲ್ಲಿ ಸಮೂಹ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣ ಮತ್ತು ಅಂತರರಾಷ್ಟ್ರೀಯ ಸಂಘಟನೆಗಳಿಂದ ಅವುಗಳ ವಿತರಣೆ ವ್ಯವಸ್ಥೆಗಳಿಗೆ ಸಂಬಂಧಿಸಿದ ನಿಯಮಗಳು ವಿಸ್ತರಿಸಲ್ಪಟ್ಟಿವೆ ಎಂದು ಜೈಶಂಕರ್ ಮಸೂದೆಯ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯಲ್ಲಿ ತಿಳಿಸಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ದೇಶಿತ ಹಣಕಾಸು ನಿರ್ಬಂಧಗಳು ಮತ್ತು ಹಣಕಾಸು ಕ್ರಿಯಾ ಕಾರ್ಯಪಡೆಯ ಶಿಫಾರಸುಗಳು ಸಮೂಹ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣಕ್ಕೆ ಹಣಕಾಸು ಪೂರೈಕೆ ಮತ್ತು ಅವುಗಳ ವಿತರಣೆ ವ್ಯವಸ್ಥೆಗಳ ವಿರುದ್ಧ ಆದೇಶಿಸಿವೆ. ಈ ಹಿನ್ನೆಲೆಯಲ್ಲಿ ನಮ್ಮ ಅಂತರರಾಷ್ಟ್ರೀಯ ಜವಾಬ್ದಾರಿಗಳನ್ನು ಈಡೇರಿಸಲು ಸಮೂಹ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣಕ್ಕೆ ಹಣಕಾಸು ಪೂರೈಕೆ ಮತ್ತು ಅವುಗಳ ವಿತರಣೆ ವ್ಯವಸ್ಥೆಗಳ ವಿರುದ್ಧ ಸದ್ರಿ ಕಾಯ್ದೆಗೆ ತಿದ್ದುಪಡಿಯನ್ನು ತರುವ ಅಗತ್ಯವಿದೆ ಎಂದು ಜೈಶಂಕರ್ ಹೇಳಿದರು.

ಮಸೂದೆಯು ಹಾಲಿ ಕಾನೂನಿನಲ್ಲಿ ಹೊಸದಾಗಿ ಕಲಂ 12ಎ ಅನ್ನು ಸೇರಿಸಲು ಉದ್ದೇಶಿಸಿದೆ. ಯಾವುದೇ ವ್ಯಕ್ತಿಯು ಈ ಕಾಯ್ದೆಯಡಿ ಅಥವಾ ವಿಶ್ವಸಂಸ್ಥೆ (ಭದ್ರತಾ ಮಂಡಳಿ) ಕಾಯ್ದೆ,1947ರಡಿ ಅಥವಾ ಸದ್ಯ ಜಾರಿಯಲ್ಲಿರುವ ಯಾವುದೇ ಇತರ ಸಂಬಂಧಿತ ಕಾಯ್ದೆಯಡಿ ಅಥವಾ ಇಂತಹ ಯಾವುದೇ ಕಾಯ್ದೆಯಡಿ ಹೊರಡಿಸಿರುವ ಆದೇಶದಿಂದ ನಿಷೇಧಿಸಲಾಗಿರುವ ಸಮೂಹ ವಿನಾಶದ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣೆ ವ್ಯವಸ್ಥೆಗಳಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗೆ ಹಣಕಾಸು ನೆರವನ್ನು ಒದಗಿಸುವಂತಿಲ್ಲ ಎಂದು ನೂತನ ಕಲಮ್ನಲ್ಲಿ ಹೇಳಲಾಗಿದೆ.

ಇಂತಹ ವ್ಯಕ್ತಿಯ ಸಂಪೂರ್ಣ ಅಥವಾ ಜಂಟಿ,ನೇರ ಅಥವಾ ಪರೋಕ್ಷ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ,ಇಂತಹ ವ್ಯಕ್ತಿಯ ಪರವಾಗಿ ಅಥವಾ ಇಂತಹ ವ್ಯಕ್ತಿಯ ನಿರ್ದೇಶದ ಮೇರೆಗೆ ಹೊಂದಲಾಗಿರುವ ಅಥವಾ ಇಂತಹ ವ್ಯಕ್ತಿಯ ನೇರ ಅಥವಾ ಪರೋಕ್ಷ ಒಡೆತನ ಅಥವಾ ನಿಯಂತ್ರಣದಲ್ಲಿರುವ ನಿಧಿಗಳು ಅಥವಾ ಇತರ ಆಸ್ತಿಗಳ ಮೂಲಕ ಹೊಂದಲಾದ ಅಥವಾ ಸೃಷ್ಟಿಯಾದ ಹಣಕಾಸುಗಳು ಅಥವಾ ಇತರ ಹಣಕಾಸು ಆಸ್ತಿಗಳು ಅಥವಾ ಆರ್ಥಿಕ ಸಂಪನ್ಮೂಲಗಳನ್ನು ಸ್ತಂಭನಗೊಳಿಸುವ,ವಶಪಡಿಸಿಕೊಳ್ಳುವ ಅಥವಾ ಜಪ್ತಿ ಮಾಡುವ ಅಧಿಕಾರವನ್ನು ಸರಕಾರಕ್ಕೆ ನೀಡಲೂ ಈ ನೂತನ ಕಲಂ ಉದ್ದೇಶಿಸಿದೆ. ಈ ಕಾಯ್ದೆಯಡಿ ನಿಷೇಧಿತ ಯಾವುದೇ ಚಟುವಟಿಕೆಯೊಂದಿಗೆ ಸಂಬಂಧಿತ ವ್ಯಕ್ತಿಗಳ ಲಾಭಕ್ಕಾಗಿ ಹಣಕಾಸು,ಹಣಕಾಸು ಆಸ್ತಿಗಳು ಅಥವಾ ಆರ್ಥಿಕ ಸಂಪನ್ಮೂಲಗಳು ಅಥವಾ ಸಂಬಂಧಿತ ಸೇವೆಗಳನ್ನು ಲಭ್ಯಗೊಳಿಸುವುದರಿಂದ ಯಾವುದೇ ವ್ಯಕ್ತಿಯನ್ನು ನಿಷೇಧಿಸಲೂ ತಿದ್ದುಪಡಿಯು ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News